ರಾಜ್ಯದಲ್ಲೂ ಪಕ್ಷಾಂತರಿಗಳಿಗೆ ಮತದಾರರಿಂದ ತಕ್ಕ ಪಾಠ: ಸಿದ್ದರಾಮಯ್ಯ

ಜನರು ಪಕ್ಷಾಂತರಿಗಳನ್ನು ಸಹಿಸುವುದಿಲ್ಲ, ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ.
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಜನರು ಪಕ್ಷಾಂತರಿಗಳನ್ನು ಸಹಿಸುವುದಿಲ್ಲ, ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ಅದೇ ರೀತಿ ರಾಜ್ಯದ ಉಪ ಚುನಾವಣೆಯಲ್ಲಿಯೂ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸಬೇಕೆಂದು ಕಾಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬೆಂಗಳೂರಿನ ಪುರಭವನದ ಮುಂಭಾಗ ಕೆಪಿಸಿಸಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಜನವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿ ದಿನ ಜಾಹೀರಾತು ನೀಡುತ್ತಿದ್ದಾರೆ. ಅದರಲ್ಲಿ ಛಲಗಾರ, ಜನ ನಾಯಕ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪ ಅವರು ಹಿಂಬಾಗಿಲಿನಿಂದ ಬಂದು, ನಮ್ಮ ಶಾಸಕರನ್ನು ದುಡ್ಡು ನೀಡಿ ಖರೀದಿಸಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ನರೇಂದ್ರ ಮೋದಿ ಅವರೇ, ಬಹಳ ದಿನ ನಿಮ್ಮ ನಾಟಕ ನಡೆಯಲ್ಲ. ಒಂದು ಅಥವಾ ಎರಡು ಬಾರಿ ಭಾವನಾತ್ಕ ವಿಚಾರಗಳಲ್ಲಿ ಜನರನ್ನು ಸೆಳೆಯಬಹುದು. ಇದು ಹೆಚ್ಚು ದಿನ ಸಾಗಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಜನರು 370 ವಿಧಿ ರದ್ಧತಿ, ಪುಲ್ವಾಮ ದಾಳಿ ಘಟನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಅಲ್ಲಿಯ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ಬಿಜೆಪಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com