ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರದಿಂದ ನಾನು ಅಧಿಕಾರದಿಂದ ಇಳಿಯುವವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಮಾಡಿದ್ದ ಒಟ್ಟು ಸಾಲ 1 ಲಕ್ಷದ 16 ಸಾವಿರ ಕೋಟಿ. ಬಿಜೆಪಿ ಸರ್ಕಾರ ಕಳೆದ 4 ವರ್ಷಗಳಲ್ಲಿ ಮಾಡಿರುವ ಸಾಲ 2 ಲಕ್ಷದ 54 ಸಾವಿರ ಕೋಟಿ ಎಂದರು.

ಮುಂದಿನ ವರ್ಷ 77,750 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಇದು ಸೇರಿ 3 ಲಕ್ಷದ 32 ಸಾವಿರ ಕೋಟಿ ಸಾಲ ಆಗುತ್ತದೆ. 2024ರ ಅಂತ್ಯಕ್ಕೆ 5 ಲಕ್ಷದ 64 ಸಾವಿರ ಕೋಟಿ ರೂ. ಸಾಲ ಆಗುತ್ತದೆ ಎಂದು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. 

ಬಡ್ಡಿ ರೂಪದಲ್ಲಿ 34,000 ಕೋಟಿ ರೂ. ಹಾಗೂ ಅಸಲು 22 ಸಾವಿರ ಕೋಟಿ ಕಟ್ಟಬೇಕು ಅಂದರೆ ವರ್ಷಕ್ಕೆ 56 ಸಾವಿರ ಕೋಟಿಯಷ್ಟು ಸಾಲ ಮರುಪಾವತಿ ಮಾಡಬೇಕು. ಇದು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗದ, ಲಾಭದಾಯಕವಲ್ಲದ ಖರ್ಚು. ಇದರಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ಸಿಗುತ್ತಿಲ್ಲ ಎಂದರು. 

ಸುನಿಲ್‌ ಕುಮಾರ್‌ ಅವರು ಬಜೆಟ್ ತೆರಿಗೆ ಸಂಗ್ರಹದ ಅಮೃತ ಕಾಲದ ಬಜೆಟ್‌ ಎಂದು ಕರೆದಿದ್ದಾರೆ. ನನ್ನ ಪ್ರಕಾರ ಇದು ತೆರಿಗೆ ಸುಲಿಗೆಯ ಕತ್ತಲ ಕಾಲದ ಬಜೆಟ್‌. ಈ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಜಾಸ್ತಿಮಾಡಿದೆ. ಅಕ್ಕಿ, ರಾಗಿ, ಗೋಧಿ, ಪೆನ್ನು, ಪೆನ್ಸಿಲ್‌, ಮಂಡಕ್ಕಿ, ಹಾಲು, ಮೊಸರು, ಹಸುಗಳು ತಿನ್ನುವ ಹಿಂಡಿ, ಬೂಸಾಗಳ ಮೇಲೆ  ಶೇ. 5 ರಿಂದ ಶೇ.18 ರಷ್ಟು ತೆರಿಗೆ ವಿಧಿಸಿದ್ದಾರೆ. ಶೇ.80  ತೆರಿಗೆಯನ್ನು ರಾಜ್ಯದ ಬಡವರು, ಕಾರ್ಮಿಕರು ಕಟ್ಟುತ್ತಿದ್ದಾರೆ. ಬೆಲೆಯೇರಿಕೆ, ಕೆಟ್ಟ ಕೃಷಿ ನೀತಿಯಿಂದಾಗಿ ರಾಜ್ಯದ ರೈತರನ್ನು ಸಾಲಗಾರನನ್ನಾಗಿ ಮಾಡಿದೆ ಎಂದು ಆರೋಪಿಸಿದರು. 

ಸಚಿವರೊಬ್ಬರು ಟಿಪ್ಪು ಸುಲ್ತಾನ್ ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂದಿದ್ದಾರೆ. ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇಂಥಾ ಬೆದರಿಕೆಗಳಿಗೆ ಹೆದರಿಕೊಂಡು ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವವನು ನಾನಲ್ಲ.  ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲುರು, ಅವಕಾಶ ವಂಚಿತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಜನರ ಪರವಾಗಿಯೇ ಇರುತ್ತೇನೆ. ಅಬ್ಬಕ್ಕ ವರ್ಸಸ್‌ ಟಿಪ್ಪು ಸುಲ್ತಾನ್‌, ಗಾಂಧಿ ವರ್ಸಸ್‌ ಗೋಡ್ಸೆ ಇಂಥ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ, ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡೋಣ ಬನ್ನಿ.  ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ ಎಂದರು. 

ರಾಜ್ಯ ಸರ್ಕಾರದ ವಿರುದ್ಧ ಅನೇಕ ಆರೋಪಗಳು ಬಂದ ಹೊರತಾಗಿಯೂ ಸರ್ಕಾರ ಯಾವುದೇ ತನಿಖೆ ಮಾಡಿಸಲಿಲ್ಲ. ಸರ್ಕಾರ ಈಗಲಾದರೂ ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ ನಮ್ಮ ವಿರುದ್ಧ ಮತ್ತು ಈಗಿನ ಸರ್ಕಾರದ ವಿರುದ್ಧ ಇರುವ ಎಲ್ಲಾ ಆರೋಪಗಳನ್ನು ತನಿಖೆ ಮಾಡಿಸಲಿ. ಸುಮ್ಮನೆ ಆರೋಪ ಮಾಡುವುದರಿಂದ ಸತ್ಯ ಹೊರಬರುವುದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com