ರಾಜೀನಾಮೆ ನೀಡಲು ನಾನು ರೆಡಿ, ಸಿದ್ದರಾಮಯ್ಯ ತಯಾರಿದ್ದಾರಾ?: ಆರ್‌.ಅಶೋಕ್‌ ಸವಾಲು

ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಇದೆ ಮತ್ತು ಅವರೇ ಸರ್ಕಾರ ಅಸ್ಥಿರಗೊಳ್ಳುವಂತೆ ಮಾಡುತ್ತಿದ್ದಾರೆ.
ಆರ್‌.ಅಶೋಕ್‌
ಆರ್‌.ಅಶೋಕ್‌
Updated on: 

ಚಿತ್ರದುರ್ಗ: ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಸಿದ್ಧರಿದ್ದರೆ 24 ಗಂಟೆಯೊಳಗೆ ರಾಜೀನಾಮೆ ನೀಡಲು ನಾನೂ ಸಿದ್ಧ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶುಕ್ರವಾರ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದರು.

ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯ ಕೂಡ ಇದರ ವಿರುದ್ಧ ತನಿಖೆ ಮಾಡಿಸಲು ಮುಂದಾಗಲಿಲ್ಲ. ರಾಜ್ಯಪಾಲರು ಹಾಗೂ ನ್ಯಾಯಾಲಯವೇ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟರೆ, ಕಾಂಗ್ರೆಸ್‌ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ. ಅಂದರೆ ಕಾಂಗ್ರೆಸ್‌ ಪಕ್ಷ ತನ್ನನ್ನು ನ್ಯಾಯಾಲಯಕ್ಕಿಂತ ದೊಡ್ಡದು ಎಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರವನ್ನು ಪತನಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಬದಲಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಇದೆ ಮತ್ತು ಅವರೇ ಸರ್ಕಾರ ಅಸ್ಥಿರಗೊಳ್ಳುವಂತೆ ಮಾಡುತ್ತಿದ್ದಾರೆ.

ಆರ್‌.ಅಶೋಕ್‌
ಬಿಡಿಎ ಭೂ ವಿವಾದ: ನನ್ನ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್ ಯತ್ನ; ಆರೋಪಗಳಿಗೆ ಆರ್.ಅಶೋಕ್ ತಿರುಗೇಟು

ರಾಜ್ಯದ ಅಭಿವೃದ್ಧಿಯಲ್ಲಿ ಹಿಂದಿನ ಮೈಸೂರು ರಾಜಮನೆತನದ ಒಡೆಯರ ಸೇವೆಯನ್ನು ಗುರುತಿಸದೆ ಕಾಂಗ್ರೆಸ್ ಸರ್ಕಾರ ಮೈಸೂರು ದಸರಾವನ್ನು ರಾಜಕೀಯಗೊಳಿಸಿದೆ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.. ಶಿವಕುಮಾರ್ ಅವರ ಹೇಳಿಕೆಯ ಅವರೇ ಅಧಿಕಾರ ಕಳೆದುಕೊಳ್ಳುವ ಆತಂಕವನ್ನು ಬಹಿರಂಗಪಡಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅದು ನಿಜವೇ ಆಗಿದ್ದರೆ, ಧೈರ್ಯವಿದ್ದರೆ, ಆಪರೇಷನ್ ಕಮಲಕ್ಕೆ ಗುರಿಯಾಗಿರುವ 14 ಶಾಸಕರ ಹೆಸರನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಪ್ರಧಾನಿ ಮೋದಿ ಅವರನ್ನು ಹೊಗಳಿದಂತೆಯೇ ಮೈಸೂರಿನ ದಸರಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಇದರಲ್ಲಿ ವಿಶೇಷವನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ ವೇಳೆ ಜಾತಿಗಣತಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ 2013ರಲ್ಲಿ ಅಧಿಕಾರದಲ್ಲಿದ್ದಾಗಲೇ ಮಾಡಬಹುದಾಗಿತ್ತು. ಆದರೆ, ಮಾಡಲಿಲ್ಲ. ಕಾಂಗ್ರೆಸ್‌ನ ಒಕ್ಕಲಿಗ ಸಚಿವರೇ ವಿರೋಧಿಸಿದ್ದಾರೆ. ಲಿಂಗಾಯತ ಶಾಸಕರು ಜಾತಿ ಗಣತಿ ವಿರೋಧಿಸಿದ್ದಾರೆ. ಬಿಜೆಪಿ ಜಾತಿಗಣತಿಯನ್ನು ವಿರೋಧ ಮಾಡೋದಿಲ್ಲ. ಆದರೆ ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು ಎಂದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com