

ದಾವಣಗೆರೆ: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಕಳೆದ ಸೋಮವಾರ ವಿಸ್ತರಣೆಯಾಗಿದ್ದು, 19 ಕಾಂಗ್ರೆಸ್ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದ್ದು, ಹಲವು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಪಕ್ಷದಲ್ಲಿ ಐದಾರು ಬಾರಿ ಗೆದ್ದ ಹಿರಿಯ ಶಾಸಕರು ಇದ್ದಾರೆ. ನನಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಸಿಕ್ಕಿಲ್ಲ, ಮುಂದೆ ಸಾಕಷ್ಟ ಅವಕಾಶಗಳಿವೆ ಕಾದು ನೋಡೋಣ. ಈಗ ಅಭಿವೃದ್ಧಿ ಬಗ್ಗೆ ಮಾತನಾಡಬೇಕಿದೆ ಎಂದರು.
ಭ್ರಷ್ಟಾಚಾರ ಅರೋಪ ಇದ್ದರೂ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ವಿಪಕ್ಷ ಗಳ ಅರೋಪಕ್ಕೆ ಪ್ರತಿಕ್ರಿಯಿಸಿದ ಶವಗಂಗಾ, ಭ್ರಷ್ಟಾಚಾರ ಆರೋಪ ಯಾರ ಮೇಲೆ ಇಲ್ಲ ಹೇಳಿ? ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ. ಆರೋಪಿಗಳು ಅಷ್ಟೇ, ಅಪರಾಧ ಸಾಬೀತಾದ್ರೆ ಆಗ ಮಾತಾಡಲಿ. ಕಾನೂನು ಪ್ರಕಾರ ಎನಿದೆ ಅದೇ ರೀತಿ ಅರೆಸ್ಟ್ ಮಾಡಿದ್ದರು. ಈಗ ಹೊರಗೆ ಬಂದಿದ್ದಾರೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡರು.
ಸಚಿವ ಸಂಪುಟದಲ್ಲಿ ಡಿಕೆಶಿ ಆಪ್ತರು, ಸಿದ್ದರಾಮಯ್ಯ ಆಪ್ತರು ಎಂದು ಬರೋದಿಲ್ಲ. ಪ್ರಾಂತ್ಯವಾರು ಸಚಿವ ಸ್ಥಾನ ನೀಡಿದ್ದಾರೆ. ನಮ್ಮ ಕೆ.ಎಸ್ ಬಸವಂತಪ್ಪ ಅವರಿಗೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಮಗೆ ಸಂತೋಷವಿದೆ ಎಂದರು.