'ಇಂದು ರಾಜಕೀಯದಲ್ಲಿ ನೈತಿಕ ಮೌಲ್ಯ ಇಲ್ಲದಂತಾಗಿದೆ; ಮಹಿಳೆಯರು ಪತಿ ಅಥವಾ ಮಗನನ್ನು ಅಧಿಕಾರ ನಡೆಸಲು ಬಿಡುತ್ತಾರೆ': ಬಸವರಾಜ ಹೊರಟ್ಟಿ

ಕೊಪ್ಪಳದ ಗವಿಮಠ ಆವರಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಜನಪ್ರತಿನಿಧಿಗಳು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿದೆ ಎಂದರು.
Basavaraja Horatti
ಬಸವರಾಜ ಹೊರಟ್ಟಿ
Updated on

ಕೊಪ್ಪಳ: ಇಂದು ರಾಜಕೀಯದಲ್ಲಿ ನೈತಿಕ ಮೌಲ್ಯ ಇಲ್ಲದಂತಾಗಿದೆ. ಸಾರ್ವಜನಿಕರ ಕಷ್ಟ- ಕಾರ್ಪಣ್ಯಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವುದು ಕಡಿಮೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಗವಿಮಠ ಆವರಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಜನಪ್ರತಿನಿಧಿಗಳು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿದೆ, ಜನಪ್ರತಿನಿಧಿಗಳಾದವರು ಜನರ ಸಂಕಷ್ಟಗಳನ್ನು ಆಲಿಸಬೇಕು, ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಗಳನ್ನು ಚರ್ಚೆ ಮಾಡುವುದು ಸರಿಯಲ್ಲ, ನಮ್ಮ ಕಾಲದಲ್ಲಿ ರಾಜಕಾರಣವೇ ಬೇರೆ, ಈಗಿನ ರಾಜಕಾರಣದ ವ್ಯವಸ್ಥೆ ಬೇರೆಯಾಗಿದೆ. ಅದನ್ನು ಅವಲೋಕಿಸಿದರೆ ಈಗ ನಾವು ಕಷ್ಟಕಾಲದಲ್ಲಿದ್ದೇವೆ ಎಂದೆನಿಸುತ್ತದೆ. ಇಂದು ನೈತಿಕ ಮೌಲ್ಯ ಇಲ್ಲದಂತಹ ರಾಜಕಾರಣವಾಗಿದೆ. ನಾನು ನೈತಿಕತೆ ಬಿಟ್ಟು ರಾಜಕಾರಣ ಮಾಡುತ್ತಿಲ್ಲ ಎಂದರು.

ರಾಜಕಾರಣಿಗಳಿಗೆ ವೈಯಕ್ತಿಕ ಸ್ವಾರ್ಥ ಎಲ್ಲಿಯವರೆಗೂ ಕಡಿಮೆ ಆಗಲ್ಲವೋ ಅಲ್ಲಿಯವರೆಗೂ ರಾಜ್ಯದ ಜನತೆಗೆ ಒಳ್ಳೆಯದಾಗಲ್ಲ ಎಂದರು.

Basavaraja Horatti
ಯುವ ರಾಜಕಾರಣಿಗಳಿಗೆ ಶಿಕ್ಷಣ ನೀಡಲು ಸರ್ಕಾರದಿಂದ ರಾಜಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಬಸವರಾಜ ಹೊರಟ್ಟಿ

ಸದನದಲ್ಲಿ ಉತ್ತಮ ವಿಚಾರಗಳನ್ನು ಚರ್ಚೆ ಮಾಡುವುದನ್ನು ಬಿಟ್ಟು ಹನಿ ಟ್ರ್ಯಾಕ್ ಎಂಬಂಥ ವಿಚಾರಗಳು ಚರ್ಚೆಯಾಗುತ್ತವೆ. ಇದನ್ನು ನೋಡಿ ನಾವೇ ತಲೆ ಜಜ್ಜಿಕೊಳ್ಳುವಂತಾಗಿದೆ. ಈ ಚರ್ಚೆಯ ಬಗ್ಗೆ ನಾನು ಸಹ ವಾರ್ನಿಂಗ್ ಕೊಟ್ಟಿದ್ದೇನೆ. ಈ ಕುರಿತಂತೆ ನಾನು ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಎಲ್ಲರನ್ನು ಕರೆದು ಮಾತನಾಡಿದ್ದೇನೆ.

ಸದನದಲ್ಲಿ ಅಭಿವೃದ್ಧಿ ಕುರಿತಾದ ಇರುವ ವಿಷಯವನ್ನು ಹೊರತುಪಡಿಸಿ ಬೇರೆ ವಿಷಯ ಚರ್ಚೆ ಮಾಡಿದಲ್ಲಿ ನಿರ್ದಾಕ್ಷ್ಯಣವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೇನೆ ಮತ್ತು ಅದರಂತೆ ನಡೆದುಕೊಳ್ಳಲಾಗುತ್ತಿದೆ. ಈಚೆಗೆ ನಡೆದ ಸದನದಲ್ಲಿ ಬಜೆಟ್ ವಿಷಯಗಳ ಮೇಲೆ 23 ಶಾಸಕರು ಮಾತನಾಡಿದ್ದಾರೆ. ಬರುವ ದಿನಗಳಲ್ಲಿ ಒಳ್ಳೆಯ ವಿಚಾರಗಳು ಚರ್ಚೆಯಾಗಲಿವೆ ಎನ್ನುವ ಭರವಸೆ ನನಗಿದೆ ಎಂದರು.

ಶಾಸಕ ವಿನಯ್ ಕುಲಕರ್ಣಿ ಜೈಲು ಸೇರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ಜನಪ್ರತಿನಿಧಿಗಳಿಗೆ‌ ಅಧಿಕಾರ ಬಂದಾಗ ಮೈತುಂಬ ಕಣ್ಣಿರಬೇಕು, ವಿನಯ ಕುಲಕರ್ಣಿ ಸಣ್ಣ ವಯಸ್ಸಿನ ವ್ಯಕ್ತಿ, ಆತನಿಗೆ ಹೇಳಿದ್ದೇವೆ. ಈಗ ನ್ಯಾಯಾಲಯ ಕೊಟ್ಟ ತೀರ್ಪು ಒಪ್ಪಬೇಕು. ನ್ಯಾಯಾಲಯದ ತೀರ್ಪು ಪ್ರಶ್ನೆ ಮಾಡಲು ಬರಲ್ಲ, ಅದು ಆತನ ಹಣೆಬರಹ ಎಂದರು.

ದೇಶದಲ್ಲಿ ಮಹಿಳೆಯರು ಶೇ.52 ಪ್ರತಿಶತ ಇದ್ದಾರೆ. ಅವರೇ ಸ್ಪರ್ಧೆ ಮಾಡಿ ಗೆದ್ದರೆ ದೇಶವನ್ನು ಅವರೇ ಆಳ್ವಿಕೆ ಮಾಡಲಿದ್ದಾರೆ. ಆದರೆ ಮಹಿಳೆಯರು ರಾಜಕಾರಣ ಮಾಡುವುದಿಲ್ಲ, ಪತಿ ಅಥವಾ ಮಗನನ್ನ ಅಧಿಕಾರ ನಡೆಸಲು ಬಿಡುತ್ತಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com