

ಬೆಂಗಳೂರು: ರಾಜ್ಯದಲ್ಲಿ 'ಸ್ಟಿಂಗ್ ಆಪರೇಷನ್' ಮತ್ತು 'ಹನಿಟ್ರ್ಯಾಪ್' ಪ್ರಯತ್ನಗಳಿಗೆ ಸಂಬಂಧಿಸಿದ ರಾಜಕೀಯ ವಿವಾದ ತೀವ್ರಗೊಂಡಿದೆ. ಹನಿಟ್ರ್ಯಾಪ್ ಘಟನೆಗಳಿಗೆ ಸಂಬಂಧಿಸಿವೆ ಎನ್ನಲಾದ ಮೂರು ವಿಡಿಯೋಗಳು ತಮ್ಮ ಬಳಿಯೂ ಇವೆ. ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು. ಆರೋಪಿತ ವಿಡಿಯೋಗಳು ಈ ವಿವಾದದ ಕುರಿತು ಹೆಚ್ಚಿನ ಮಾಹಿತಿ ನೀಡಬಲ್ಲವು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗುರುವಾರ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಅಡಿಯಲ್ಲಿ ನೀವು (ಡಿಕೆ ಶಿವಕುಮಾರ್) ಪ್ರಮಾಣವಚನ ಸ್ವೀಕರಿಸಿದ್ದೀರಿ. ನಿಮ್ಮ ಗಮನಕ್ಕೆ ಬಂದ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ?. ದಾಖಲೆ ಸಿಕ್ಕಿದ್ದರೂ ಅದನ್ನು ಮುಚ್ಚಿಡುವುದು ಗಂಭೀರ ಅಪರಾಧ. ನನಗೆ ಕೂಡಾ ಕೆಲವು ಈ ಬಗೆಗಿನ ವಿಡಿಯೋಗಳನ್ನು ಕಳುಹಿಸಿದ್ದಾರೆ. ವಿಡಿಯೋಗಳು ಈಗ ಎಲ್ಲರ ಬಳಿಯಲ್ಲೂ ಓಡಾಡುತ್ತಿವೆ. ಇದರ ಬಗ್ಗೆ ಸಿಎಂ ಯಾಕೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಇಷ್ಟು ದಿನ ಸಿಎಂ ಡಿಕೆ ಶಿವಕುಮಾರ್ ಭರವಸೆ ಕೊಡುತ್ತಿದ್ದಾರೆ ಎನ್ನಲಾಗಿತ್ತು. ಈಗ ನೋಡಿದರೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡ್ತಿದ್ದಾರೆ. ಸಂಪುಟಸಭೆಯಲ್ಲಿ ಸಚಿವರನ್ನ ಟ್ರ್ಯಾಪ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಮುಖ್ಯಮಂತ್ರಿಗಳೇ ಅಸಹಾಯಕ ಸ್ಥಿತಿಯಲ್ಲಿ ನನ್ನ ಮೇಲೆ ಟ್ರ್ಯಾಪ್ ಆಗಿದೆ ಅಂತಿದ್ದಾರೆ. ಸರ್ಕಾರ, ಕ್ಯಾಬಿನೆಟ್ ಸಚಿವರು, ಸಿಎಂಗೇ ಭದ್ರತೆ ಇಲ್ಲವಾದರೆ ಹೇಗೆ. ಯಾರು ಬೇಕಾದರೂ ಅವರನ್ನು ಹನಿಟ್ರ್ಯಾಪ್ ಮಾಡಬಹುದು ಎಂದಿದ್ದಾರೆ.
ನನ್ನ ಮೇಲೆ ಟ್ರ್ಯಾಪ್ಗೆ ಯತ್ನಿಸಿದ ಕುರಿತ ದಾಖಲೆ ಇದೆ ಅಂತಾರೆ. ಹಾಗಾದರೆ ಸಿಎಂ ಡಿಕೆ ಶಿವಕುಮಾರ್ ಏಕೆ ದೂರು ನೀಡಿಲ್ಲ?. ಇದರ ಬಗ್ಗೆ ಯಾಕಿನ್ನೂ ಎಫ್ಐಆರ್ ದಾಖಲಿಸಿಲ್ಲ? ನೀವು ಗಾಳಿಯಲ್ಲಿ ಗುಂಡು ಹಾರಿಸುವುದಿದ್ದರೆ ಅದಕ್ಕೆ ಬೇರೆ ಜಾಗವಿದೆ. ಸಿಎಂ ಅಧಿವೇಶನದಲ್ಲಿ ಬೆಂಗಳೂರಿನ ಹೊರಗಿನ ಸಚಿವರು, ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಸಚಿವರು ಮತ್ತು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು 'ಸ್ಟಿಂಗ್ ಆಪರೇಷನ್' ನಡೆಸುವ ಸಾಧ್ಯತೆ ಕುರಿತಾದ ಆರೋಪಗಳು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಿರುವ ಈ ಸಂದರ್ಭದಲ್ಲಿಯೇ ಈ ಹೇಳಿಕೆ ಹೊರಬಿದ್ದಿದೆ.
ಸಂಭಾವ್ಯ ಸ್ಟಿಂಗ್ ಆಪರೇಷನ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ; ಅದೇ ವೇಳೆ, ಇಂತಹ ಕಾರ್ಯಾಚರಣೆಗಳ ಮೂಲಕ ಸರ್ಕಾರಕ್ಕೆ ಅಪಖ್ಯಾತಿ ತರುವ ಪ್ರಯತ್ನಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಹೇಳಿದ್ದಾರೆ.
ಕರ್ನಾಟಕ ರಾಜಕೀಯದಲ್ಲಿ 'ಹನಿಟ್ರ್ಯಾಪ್' ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳನ್ನು ವಿರೋಧ ಪಕ್ಷವು ಈ ಹಿಂದೆ ಎತ್ತಿದ್ದು, ಈ ವಿಷಯದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ.