'ಸ್ಟಿಂಗ್ ಖೆಡ್ಡಾ': ಸಿಎಂ ಭೇಟಿಯಾದ ಪ್ರಿಯಾಂಕ್ ಖರ್ಗೆ; ತನಿಖೆ ವಿಷಯ ಗೃಹ ಇಲಾಖೆಗೆ ಬಿಟ್ಟದ್ದು- ಡಿಕೆ ಶಿವಕುಮಾರ್

ಎಚ್.ಡಿ. ಕುಮಾರಸ್ವಾಮಿ ಏನೇ ಆರೋಪ ಮಾಡಲಿ, ನಮಗೆ ಅದರಿಂದ ಯಾವುದೇ ತೊಂದರೆಯಿಲ್ಲ. ಸತ್ಯ ಸತ್ಯವಾಗಿಯೇ ಉಳಿಯುತ್ತದೆ. ಸತ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ನಾವು ಉತ್ತರ ನೀಡುತ್ತೇವೆ" ಎಂದರು.
Dk shivakumar and priyank kharge
ಡಿ.ಕೆ ಶಿವಕುಮಾರ್ ಮತ್ತು ಪ್ರಿಯಾಂಕ್ ಖರ್ಗೆ
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' (ರಹಸ್ಯ ಕಾರ್ಯಾಚರಣೆ) ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಗೃಹ ಇಲಾಖೆಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಅವರು ಸದಾಶಿವನಗರದಲ್ಲಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ತನಿಖೆಯ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, "ನಾನು ಈ ಸಂಪೂರ್ಣ ವಿಷಯವನ್ನು ಗೃಹ ಇಲಾಖೆಗೆ ಬಿಟ್ಟಿದ್ದೇನೆ. ಅವರು ಅದನ್ನು ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳಿದರು. ಈ ವಿವಾದದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, "ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ.

ಎಚ್.ಡಿ. ಕುಮಾರಸ್ವಾಮಿ ಏನೇ ಆರೋಪ ಮಾಡಲಿ, ನಮಗೆ ಅದರಿಂದ ಯಾವುದೇ ತೊಂದರೆಯಿಲ್ಲ. ಸತ್ಯ ಸತ್ಯವಾಗಿಯೇ ಉಳಿಯುತ್ತದೆ. ಸತ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ನಾವು ಉತ್ತರ ನೀಡುತ್ತೇವೆ" ಎಂದರು.

ಪ್ರಿಯಾಂಕ್ ಖರ್ಗೆ ಅವರು ಶಿವಕುಮಾರ್ ಅವರನ್ನು ಭೇಟಿಯಾಗಿ, ಪೊಲೀಸ್ ತನಿಖೆಯ ಪ್ರಗತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ. ಚರ್ಚೆಯ ನಂತರ, ಕಾಂಗ್ರೆಸ್‌ನ ಈ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ತೆರಳಿದರು.

Dk shivakumar and priyank kharge
ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಡಿಕೆ.ಶಿವಕುಮಾರ್, ತನಿಖೆಯಾಗದಿದ್ದರೆ ಅವರ ಮೇಲೆಯೇ ಅನುಮಾನ: ಸಂಸದ ಬೊಮ್ಮಾಯಿ

ಈ ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಕುಮಾರಸ್ವಾಮಿ ಮತ್ತು ಖರ್ಗೆ ಅವರ ನಡುವೆ ವಾಕ್ಸಮರ ನಡೆಯುತ್ತಿರುವ ಹೊತ್ತಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಸ್ಟಿಂಗ್ ಆಪರೇಷನ್‌ನಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕೆಂದು ವಿರೋಧ ಪಕ್ಷವು ಆಗ್ರಹಿಸಿದ್ದು, ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಸ್ಟಿಂಗ್ ಆಪರೇಷನ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾದ ರಾಕೇಶ್ ಶೆಟ್ಟಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ, ಕುಮಾರಸ್ವಾಮಿ ಅವರು ಅಕ್ಟೋಬರ್ 15 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದ ನಂತರ, ಕುಮಾರಸ್ವಾಮಿ ಅವರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರಮುಖ ಆರೋಪಿಗಳನ್ನು ಬಂಧಿಸಲು ಕೇಂದ್ರ ಸಚಿವರು ಪೊಲೀಸರಿಗೆ ಎರಡು ದಿನಗಳ ಗಡುವು ನೀಡಿದ್ದು, ಕ್ರಮ ಕೈಗೊಳ್ಳಲು ವಿಫಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸಲು ಜೆಡಿಎಸ್ ಶನಿವಾರ ತನ್ನ ಶಾಸಕರು ಮತ್ತು ಪಕ್ಷದ ಮುಖಂಡರ ಸಭೆಯನ್ನು ಕರೆಯಲಿದೆ. ಈ ಸ್ಟಿಂಗ್ ಆಪರೇಷನ್ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಇದರಲ್ಲಿ ಭಾಗಿಯಾದವರಿಗೆ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ನಂಟಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ ಅವರ ಆಪ್ತರಾದ ಹಾಗೂ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಕೃಷ್ಣ ಬೈರೇಗೌಡ ಅವರು, ಸಿದ್ದರಾಮಯ್ಯ ಅವರ ಅಧಿಕೃತ ನಿವಾಸವಾದ 'ಕಾವೇರಿ'ಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು. ಅಕ್ಟೋಬರ್ 15 ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಪ್ರತ್ಯೇಕ ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಬದಲು, ನಡೆಯುತ್ತಿರುವ ಪೊಲೀಸ್ ತನಿಖೆಯನ್ನೇ ಮುಂದುವರಿಸಲು ಸರ್ಕಾರ ಒಲವು ತೋರಿದೆ. ಪೊಲೀಸರು ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ.

Dk shivakumar and priyank kharge
ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು, ಕೋಟಿ ಕೋಟಿ ಹಣ ಎಲ್ಲಿಂದ ಬಂತು..?

ಕರ್ನಾಟಕ ಪೊಲೀಸರೇ ಈ ಪ್ರಕರಣವನ್ನು ನಿರ್ವಹಿಸುತ್ತಾರೆ ಎಂದು ಪ್ರತಿಪಾದಿಸಿರುವ ಖರ್ಗೆ, ಕುಮಾರಸ್ವಾಮಿ ಅವರು ಸಿಬಿಐ (CBI) ತನಿಖೆಗೆ ಮುಂದಿಟ್ಟಿದ್ದ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಸೈಬರ್ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದು ಹಲವಾರು ರಾಜಕೀಯ ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿದೆ. ವಿಡಿಯೋಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿ ಅವರು ನೀಡಿರುವ ಗಡುವು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ, ತನಿಖೆಯ ಪ್ರಗತಿ ಮತ್ತು ವಿರೋಧ ಪಕ್ಷದ ಬೇಡಿಕೆಗಳಿಗೆ ಸರ್ಕಾರ ನೀಡುವ ಪ್ರತಿಕ್ರಿಯೆಯು ಮುಂದಿನ ಹಂತದ ರಾಜಕೀಯ ಸಂಘರ್ಷದ ಸ್ವರೂಪವನ್ನು ನಿರ್ಧರಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com