

ತಂತ್ರಜ್ಞಾನವು ಸದಾ ಹರಿವ ನೀರಿನಂತೆ...
ಹೌದು, ದಿನಕ್ಕೊಂದು ಹೊಸತನ್ನು ಬಯಸುವ ಇಂದಿನ 'ಸ್ಪರ್ಶ'ಯುಗದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಇಂದಿನದು ನಾಳೆಗಿಲ್ಲ, ನಾಳೆಯದು ನಾಡಿದ್ದು ಇರಲ್ಲ ಎಂಬುದನ್ನು ಅರಿತಿರುವ ಅಮೆರಿಕದ ಮಿಲಿಟರಿ ಪಡೆಯು ಸ್ಯಾಟ್‌ಲೈಟ್ ಇಲ್ಲದೆಯೇ ನೆರೆಯ ದೇಶದ ಸ್ಥಳಗಳನ್ನು ಕಂಡುಕೊಳ್ಳುವ ಹಾಗೂ ಅವುಗಳ (ಕು)ತಂತ್ರವನ್ನೂ ತಿಳಿಯಲು ಸಹಾಯಕಾರಿಯಾಗಬಲ್ಲ ವಿನೂತನ ಪುಟಾಣಿ ಚಿಪ್‌ವೊಂದನ್ನು ಅನ್ವೇಷಿಸಿದೆ.
ಇಲ್ಲಿಯವರೆಗೆ ಒಂದು ನಿಖರವಾದ ಸ್ಥಳ ಅಥವಾ ಜಗತ್ತಿನ ಯಾವುದೇ ಮೂಲೆಯ ಸ್ಥಳವನ್ನು ಕುಳಿತಲ್ಲಿಯೇ ಕಂಡುಕೊಳ್ಳಲು ನೆರವಾಗಿದ್ದ ಜಿಪಿಎಸ್ (Global Positioning System) ಆಧಾರಿತ ಸ್ಯಾಟ್‌ಲೈಟ್‌ಗೆ ಸೆಡ್ಡು ಹೊಡೆಯಬಲ್ಲ ಅನ್ವೇಷಣೆ ಇದು. ಅಲ್ಲದೆ ಜಿಪಿಎಸ್ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಾಗ ಪರ್ಯಾಯವಾಗಿ ಕಾರ್ಯನಿರ್ವಹಿಸಬಲ್ಲ ಸೂಕ್ಷ್ಮ ತಂತ್ರಜ್ಞಾನವುಳ್ಳ ಚಿಪ್ ಕೂಡ ಇದು ಹೌದು. ಇಂಗ್ಲೆಂಡಿನ ತಾಮ್ರದ ನಾಣ್ಯದಲ್ಲಿನ ಲಿಂಕನ್ ಚಿತ್ರಗೊಳಗೆ ಸರಿಯಾಗಿ ಕೂರಬಲ್ಲಷ್ಟೇ ಚಿತ್ರ ಗಾತ್ರದ ಚಿಪ್ ಅಭಿವೃದ್ಧಿಪಡಿಸಲಾಗಿದೆ.
ಹೀಗಿದೆ ಚಿಪ್...
ಸಿಲಿಕಾಡ್ ಡೈ ಆಕ್ಸೈಡ್ ಮಿಶ್ರಿತ ಸುಮಾರು ಒಂದು ಸೆಂಟಿಮೀಟರ್ ಸುತ್ತಳತೆಯ ತಾಮ್ರದ ನಾಣ್ಯದಂತಿರುವ ಚಿಪ್ ಮೂರು ಗೈರೋಸ್ಕೋಪ್ಸ್ (Gyroscopes), ಮೂರು ಆಕ್ಸೆಲೆರೋಮೀಟರ್ಸ್(Acceleremeters) ಮತ್ತು ಒಂದು ಮಾಸ್ಟರ್ ಕ್ಲಾಕ್ (Master Clock) ಒಳಗೊಂಡಿರುತ್ತೆ. ಸೆರೆಹಿಡಿದ ಚಿತ್ರಗಳನ್ನು ಚಿಪ್‌ನ ಹಿಂಬದಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ. ಅತ್ಯಂತ ಚಿಕ್ಕ ಗಾತ್ರದಲ್ಲಿರುವ ಇದರ ಆಕಾರ ಜಿಪಿಎಸ್‌ಗೆ ತದ್ವಿರುದ್ಧ. ಈ ಚಿಪ್ ಅನ್ನು ಬುಲೆಟ್ಸ್ ಅಥವಾ ಕ್ಷಿಪಣಿಯಲ್ಲೂ ಅಳವಡಿಸಬಹುದು.
ಕಾರ್ಯನಿರ್ವಹಣೆ ಹೇಗೆ?
ಒಂದು ಸ್ಥಳ ಅಥವಾ ಅಲ್ಲಿನ ಸ್ಥಿತಿಗತಿಯ ಚಿತ್ರಣವನ್ನು ನೀಡಲು ಮುಖ್ಯವಾಗಿ ಬೇಕಿರುವುದು ಮೂರು ಅಂಶಗಳು-ಗುರಿ ಅಥವಾ ನಿಲುವು, ಅತ್ಯಂತ ವೇಗ ಮತ್ತು ಸಮಯ. ಈ ಮೂರನ್ನು ಆಧಾರವಾಗಿಟ್ಟುಕೊಂಡು ನಮಗೆ ಬೇಕಿರುವ ಸ್ಥಳದ ಚಿತ್ರಣವನ್ನು ತತ್‌ಕ್ಷಣಕ್ಕೆ ಕರಾರುವಕ್ಕಾಗಿ ಒದಗಿಸುತ್ತದೆ.
ಇದು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಬಿಂಬಿಸುವ ಹಾಗೂ ಕಲಾತ್ಮಕ ರೀತಿಯಲ್ಲಿ ಏಕಾಕಾಲಕ್ಕೆ ಮೂರು ಉದ್ದೇಶಗಳನ್ನು ಆಧಾರವಾಗಿಟ್ಟು ಕಾರ್ಯನಿರ್ವಹಿಸುವಂತಿದೆ. ಯಾವುದೇ ಭೌತಿಕ ಗುಣವನ್ನು ಗುರುತಿಸುವ ಸಂವೇದನಾಶೀಲ ನೆಲೆಯಲ್ಲಿ ಮತ್ತು ಎಲ್ಲ ಸಮಯದಲ್ಲೂ ಕ್ರಿಯಾಶೀಲವಾಗಿರುವ ಸಾಧನವನ್ನು ಕೇವಲ 10 ಕ್ಯುಬಿಕ್ ಮಿಲಿಮೀಟರ್‌ನಲ್ಲಿ ವಿನ್ಯಾಸಿಸಲಾಗಿದೆ.
ಪ್ರತಿಯೊಂದು TIM (Timing and intertial measurement unit) 6 ಮೈಕ್ರೋಫ್ಯಾಬ್ರಿಕ್ ಲೇಯರ್‌ಗಳನ್ನು ಒಳಗೊಂಡಿರುತ್ತದೆ. ಇದು ಕೇವಲ 50 ಮೈಕ್ರಾನ್‌ನಷ್ಟು ದಪ್ಪನಾಗಿರುತ್ತದೆ. ಅಂದರೆ ಮಾನವನ ಕೂದಲಿಗಿಂತಲೂ ಸಣ್ಣದಾಗಿ.
ಉಪಯೋಗವೇನು?
ಜಿಪಿಎಸ್‌ನಂತೆ ಟೈನಿ ಚಿಪ್ ಅನ್ನು ಕೂಡ ದೈನದಿಂದ ಜೀವನದಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ- ಮೊಬೈಲ್, ಕಾರ್, ಹಡಗು, ವಿಮಾನ, ಸ್ಯಾಟ್‌ಲೈಟ್‌ಗಳಲ್ಲಿ ಅಳವಡಿಸಬಹುದು. ಇದನ್ನು ಕಂಪ್ಯೂಟರ್ ಸಾಫ್ಟ್‌ವೇರ್‌ನೊಂದಿಗೆ ವಿಲೀನಗೊಳಿಸಿದರೆ ವಿಶ್ವದ ಯಾವ ಮೂಲೆಯ ಮಾಹಿತಿಯನ್ನೂ ಸಂಗ್ರಹಿಸಲು ಸಾಧ್ಯ.
ಇದು ಮುಖ್ಯವಾಗಿ ಡ್ರೋಣ್ ಮತ್ತು ರೋಬೋಟ್‌ಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಕ್ಷಿಪಣಿ ಉಡಾವಣೆ ಕೇಂದ್ರದಲ್ಲಿಯೂ ಹೆಚ್ಚು ಬಲಿಷ್ಠ ಪ್ರೋಸೆಶನಿಂಗ್ ವ್ಯವಸ್ಥೆಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಬ್ಯಾಕ್‌ಅಪ್ ಆಗಿಯೂ ಈ ಚಿಪ್ ಕೆಲಸ ಮಾಡಬಲ್ಲದು.
ಇದು ಎಷ್ಟು ಸಣ್ಣ ಗಾತ್ರದ್ದೆಂದರೆ ಅದನ್ನು ಬುಲೆಟ್‌ಗಳು ಹಾಗೂ ಸಣ್ಣ ಕ್ಷಿಪಣಿಗಳಲ್ಲೂ ಆಳವಡಿಸಬಹುದು. ಇದರ ಮೂಲಕ ಸೆನ್ಸಾರ್‌ಗಳ ರಚನಾತ್ಮಕ ಪದರ ಹಾಗೂ ಸಮಗ್ರ ಪ್ಯಾಕೇಜ್ ಅನ್ನು ಸಿಲಿಕಾ ಮೂಲಕ ತಯಾರಿಸಲಾಗಿದೆ.
-ವೀರೇಶ ಜಿ. ಮಠ