ನವದೆಹಲಿ: ಟ್ವೀಟ್ ಸಂದೇಶಗಳನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಜಿಐಎಫ್ ಚಿತ್ರ, ಇಮೋಟಿಕಾನ್‌ಗಳ ಫೀಚರ್‌ಗಳಿಂದ ಅಪ್‌ಡೇಟ್ ಮಾಡಿದ ನಂತರ ಸಾಮಾಜಿಕ ತಾಣವಾದ ಟ್ವಿಟರ್ ಶೇರ್ ಎ ಟ್ವೀಟ್ ವಯಾ ಡೈರೆಕ್ಟ್ ಮೆಸೇಜ್ ಎಂಬ ಹೊಸದೊಂದು ವೈಶಿಷ್ಟ್ಯವನ್ನು ಪ್ರಸ್ತುತ ಪಡಿಸಿದೆ.
ಅಂದರೆ ಟ್ವಿಟರ್ ಗ್ರಾಹಕರು ಡೈರೆಕ್ಟ್ ಮೆಸೇಜ್ ಕಳುಹಿಸಿ ಖಾಸಗಿಯಾಗಿ ಟ್ವೀಟ್ ರವಾನಿಸಬಹುದಾಗಿದೆ. ಟ್ವೀಟ್ ಮಾಡಿದ ಕೂಡಲೇ ಅಲ್ಲಿ ಕೆಳಗೆ ಬಲತುದಿಯಲ್ಲಿ More ಎಂಬ ಆಪ್ಶನ್ ಕ್ಲಿಕ್ ಮಾಡಿದರೆ Share a tweet via Direct message ಎಂಬ ಬಟನ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ನೀವು ಖಾಸಗಿಯಾಗಿ ಸಂದೇಶ ಕಳುಹಿಸಲು ಬಯಸುವ ಟ್ವಿಟರ್ ಅಕೌಂಟ್ ನ್ನು ಆಯ್ಕೆ ಮಾಡಿ ಅವರಿಗೆ ಟ್ವೀಟ್‌ನ್ನು ಖಾಸಗಿಯಾಗಿ ಕಳುಹಿಸಬಹುದು.
ಸ್ನೇಹಿತರಿಗೆ ಮತ್ತು ಗ್ರೂಪ್‌ಗಳಲ್ಲಿ ಪ್ರತಿ ದಿನ ದಶಲಕ್ಷಗಳಷ್ಟು ಖಾಸಗಿ ಸಂದೇಶಗಳು ರವಾನಿಸಲ್ಪಡುತ್ತವೆ. 2015ರಲ್ಲಿ ಖಾಸಗಿ ಸಂದೇಶಗಳ ಸಂಖ್ಯೆಯಲ್ಲಿ ಶೇ.60ರಷ್ಟು ವರ್ಧನೆಯುಂಟಾಗಿದೆ ಎಂದು ಟ್ವಿಟರ್ ಹೇಳಿತ್ತು. ಅದೇ ವೇಳೆ ಟ್ವೀಟ್‌ಗಳನ್ನು ಖಾಸಗಿಯಾಗಿ ಕಳುಹಿಸುವುದರಲ್ಲಿ ಶೇ.200 ವರ್ಧನೆಯಾಗಿದೆ ಎಂದು ಟ್ವಿಟರ್ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.
ಟ್ವೀಟ್‌ಗಳನ್ನು ಖಾಸಗಿ ಸಂದೇಶಗಳ ಮೂಲಕ ಕಳುಹಿಸಲು ಸಾಧ್ಯವಾಗುವ ಸೌಲಭ್ಯ ಕಲ್ಪಿಸಲು ಗ್ರಾಹಕರು ಒತ್ತಾಯಿಸಿದ್ದೇ ಈ ಸೌಲಭ್ಯವನ್ನು ಕಲ್ಪಿಸಲು ಕಾರಣ ಎಂದು ಟ್ವಿಟರ್ ಹೇಳಿದೆ.