ಬೆಂಗಳೂರಿನ ಮತ್ತೊಂದು ಭಯಾನಕ ಪ್ರದೇಶಗಳೆಂದರೆ ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು. ಪ್ರಮುಖವಾಗಿ ಬೆಳಗಾವಿ, ಪುಣೆ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಲ ಅನೈಸರ್ಗಿಕ ಘಟನೆಗಳು ನಡೆದ ಕುರಿತು ಮಾಹಿತಿಗಳು ಕೇಳಿಬಂದಿವೆ. ಪ್ರಮುಖವಾಗಿ ಚಾಲಕ ವರ್ಗದಿಂದ ಆ ಮಾತುಗಳು ಕೇಳಿಬಂದಿದ್ದು, ರಾತ್ರಿ ವೇಳೆ ಈ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಕೆಲ ಅಹಿತಕರ ಘಟನೆಗಳು ನಡೆದಿವೆಯಂತೆ. ದಾರಿ ಮಧ್ಯೆ ಬಿಳಿ ವಸ್ತ್ರವನ್ನು ತೊಟ್ಟ ಯುವತಿ ಡ್ರಾಪ್ ಕೇಳುವುದು. ಆಕೆಗಾಗಿ ವಾಹನ ನಿಲ್ಲಿಸಿದಾಗ ಆಕೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗುವುದು. ವೇಗವಾಗಿ ಬರುವ ವಾಹನಗಳಿಗೆ ಅಪರಿಚತರು ದಿಢೀರನೇ ಅಡ್ಡಿ ಬರುವುದು, ಇನ್ನೇನು ವಾಹನ ಅವರಿಗೆ ಗುದ್ದೇ ಬಿಟ್ಟಿತು ಎನ್ನುವಾಗ ಅವರು ನಾಪತ್ತೆಯಾಗುವುದು. ಇಂತಹ ಹಲವು ಘಟನೆಗಳನ್ನು ಕೆಲ ಚಾಲಕರು ಹೇಳಿಕೊಂಡಿದ್ದಾರೆ.