ಮೊದಲ ದಿನ ಮುಗ್ಗರಿಸಿದ ಭಾರತ

ಮೊದಲ ದಿನ ಮುಗ್ಗರಿಸಿದ ಭಾರತ
Updated on: 

ನವದೆಹಲಿ: ದೇಶದ ಅಗ್ರ ಟೆನಿಸ್ ತಾರೆಗಳು ಬಂಡಾಯವೆದ್ದಿರುವ ಬಗ್ಗೆ ಶುಕ್ರವಾರ ಅಖಿಲ ಭಾರತ ಟೆನಿಸ್ ಸಂಸ್ಥೆಗೆ ಶಾಕ್ ಮುಟ್ಟಿದೆ. ಕಾರಣ ದಕ್ಷಿಣ ಕೊರಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಯ ಮೊದಲ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ಅನನುಭವಿ ಆಟಗಾರರಾದ ವಿ.ಎಂ ರಂಜೀತ್ ಮತ್ತು ವಿಜಯಂತ್ ಮಲಿಕ್ ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಹೀಗಾಗಿ ಮೊದಲ ದಿನ ದಕ್ಷಿಣ ಕೊರಿಯಾ ತಂಡ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಆತಿಥೇಯ ಭಾರತಕ್ಕೆ ಹಿನ್ನಡೆ ಉಂಟಾಗಿದೆ.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಂಜೀತ್ ಅವರು ಕೊರಿಯಾದ ಮಿನ್ ಹ್ಯಾಕ್ ಚೂ ವಿರುದ್ಧ ಒಂದು ಗಂಟೆ 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 1-6, 0-6, 1-6 ನೇರ ಸೆಟ್‌ಗಳ ಅಂತರದಿಂದ ಸುಲಭವಾಗಿ ಸೋಲನುಭವಿಸಿದರು. ಆಗ ಪಂದ್ಯಾವಳಿಯಲ್ಲಿ ಕೊರಿಯಾ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
ನಂತರ ಎಡನೇ ಸಿಂಗಲ್ಸ್ ಪಂದ್ಯದಲ್ಲಿ 22 ವರ್ಷದ ವಿಜಯಂತ್ ಮಲಿಕ್ ತೀವ್ರ ಪೈಪೋಟಿ ನಡೆಸಿದರಾದರೂ, ದಕ್ಷಿಣ ಕೊರಿಯಾದ ಎದುರಾಳಿ ಸುಕ್ ಯಾಂಗ್ ಜೆಯೋಂಗ್ ಮೇಲುಗೈ ಸಾಧಿಸಿದರು. ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾದ ಕಾರಣ, ಮಲಿಕ್ ಎದುರಾಳಿ ವಿರುದ್ಧ ಸಮರ್ಥ್ಯ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ.
ಮಲಿಕ್ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಜಿಯೋಂಗ್ ವಿರುದ್ಧ 4-6, 5-7, 0-3 ನೇರ ಸೆಟ್‌ಗಳ ಅಂತರದಿಂದ ಕೈಚೆಲ್ಲಿದರು. ಹೀಗಾಗಿ ಪಂದ್ಯದಲ್ಲಿ ಮಲಿಕ್ ನಡೆಸಿದ ಪ್ರಯತ್ನ ವಿಫಲವಾಯಿತು.
ಲಿಯಾಂಡರ್ ಪೇಸ್ ಮಾತ್ರ ಆತಿಥೇಯ ತಂಡದಲ್ಲಿರುವ ಆಗ್ರ ಟೆನಿಸ್ ತಾರೆಯಾಗಿದ್ದಾರೆ. ಪೇಸ್ ಮತ್ತು ಪುರವ ರಾಜಾ ಜೋಡಿ, ಶನಿವಾರ ನಡೆಯಲಿರುವ ಗೆಲ್ಲಲೇಬೇಕಾದ ಡಬಲ್ಸ್ ಪಂದ್ಯದಲ್ಲಿ ಕೊರಿಯಾದ ಯಾಂಗ್ ಕೂ ಲಿಮ್ ಮತ್ತು ಜಿ ಸಂಗ್ ನಾಮ್ ಜೋಡಿಯನ್ನು ಎದುರಿಸಲಿದೆ.
ಭಾರತದ ಅಗ್ರ ಸಿಂಗಲ್ಸ್ ಟೆನಿಸ್ ತಾರೆ ಸೋಮ್‌ದೇವ್ ಅವರು ತಂಡದಲ್ಲಿ ಇಲ್ಲದಿರುವುದು ಕೊರಿಯಾ ವಿರುದ್ಧ ಸಿಂಗಲ್ಸ್ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಯಿತು. ಸೋಮ್‌ದೇವ್ ಪಂದ್ಯದಲ್ಲಿ ಇದ್ದಿದ್ದರೆ ಎದುರಾಳಿಯನ್ನು ಸುಲಭವಾಗಿ ಸೋಲಿಸುತ್ತಿದ್ದರು. ಆ ಸಾಮರ್ಥ್ಯವನ್ನು ಸೋಮ್‌ದೇವ್ ಹೊಂದಿದ್ದಾರೆ.
ಆದಾಗ್ಯೂ ಸಿಂಗಲ್ಸ್‌ನಲ್ಲಿ ರಂಜಿತ್ ಮತ್ತು ಮಲಿಕ್ ತಮ್ಮ ಸಾಮರ್ಥ್ಯ ಮೀರಿ, ಎದುರಾಳಿಗಳೊಂದಿಗೆ ಹೋರಾಟ ನಡೆಸಿದರು. ಮಲಿಕ್ ಎರಡನೇ ಸಿಂಗಲ್ಸ್‌ನಲ್ಲಿ ಎದುರಾಳಿ ಆಟಗಾರ ಪಾರಮ್ಯ ಮೆರೆಯಲು ಅವಕಾಶ ನೀಡಲಿಲ್ಲ. ಆದರೆ, ಒಂದು ಸೆಟ್‌ನಲ್ಲೂ ಜಯ ಸಾಧಿಸಲು ಅವರಿಂದ ಆಗಲಿಲ್ಲ.
ಮೊದಲ ಸೆಟ್‌ನಲ್ಲಿ ಮಲಿಕ್ ಜೆಯೋಂಗ್ ನಡುವೆ ಕಡಿಮೆ ಅಂತರವಿತ್ತು. ಆದರೆ, ನಂತರ ಮಲಿಕ್ ಮಾಡಿದ ಕೆಲ ತಪ್ಪುಗಳು ಹಿನ್ನಡೆ ಉಂಟುಮಾಡಿದವು. ಅನಂತರ ಕೊರಿಯಾ ಆಟಗಾರನನ್ನು ಮಲಿಕ್ ಅವರಿಂದ ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಇದಕ್ಕೂ ಮುನ್ನ ನಡೆದ ಮೊದಲ ಸಿಂಗಲ್ಸ್‌ನಲ್ಲಿ ವಿ.ಎಂ ರಂಜೀತ್ ತಕ್ಕ ಹೋರಾಟ ನಡೆಸಲು ಯತ್ನಿಸಿದರಾದರೂ, ಅವರಿಗೆ ಎದುರಾಳಿ ಚೂ ಯಾವುದೇ ರೀತಿಯ ಅವಕಾಶ ನೀಡಲಿಲ್ಲ.
ಎರಡು ವರ್ಷಗಳ ಕಾಲ ಕೊರಿಯಾ ಸೇನೆಗೆ ಕಾರ್ಯನಿರ್ವಹಿಸಿದ ನಂತರ ಟೆನಿಸ್ ವೃತ್ತಿ ಮರು ಆರಂಭಿಸಿದ ಚೂ ಅವರನ್ನು ಸಿಂಗಲ್ಸ್‌ನಲ್ಲಿ ಕಣಕ್ಕಿಳಿಸಿದ ಕೊರಿಯಾ ತಂಡದ ನಾಯಕನ ತೀರ್ಮಾನ ಸರಿಯಾಗಿತ್ತು ಎನಿಸಿತು. ಭಾರತದ ಅಗ್ರ ಆಟಗಾರರ ಅಲಭ್ಯತೆ ಕೊರಿಯಾಕ್ಕೆ ಪಂದ್ಯಾವಳಿಯಲ್ಲಿ ವರವಾಗಿ ಪರಿಣಮಿಸಿದೆ.
ಪಂದ್ಯ ನೋಡಲು ಭಾರತದ ಖ್ಯಾತ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆಗಮಿಸಿದ್ದರು. ಸಾನಿಯಾ ಆಗಮಿಸಿದ್ದು, ಪಂದ್ಯದಲ್ಲಿ ಅಭಿಮಾನಿಗಳ ಆಕರ್ಷಣೆ ಮತ್ತು ಸಂಭ್ರಮಕ್ಕೆ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com