ಹಣ ಹಣಿ
ದುಡ್ಡು ಮಾಡೋರಿಗೆ ಹಲವಾರು ಮಾರ್ಗ. ಈಗ ಕ್ರೀಡಾ ಕ್ಷೇತ್ರವೂ ಹಾಗೆಯೇ ಆಗಿದೆ.

'ಯೇ ದುನಿಯಾ ಮಾಂಗೇ ರೇ ಮನಿ... ಮನಿ...' ಎಂದು ಇಡೀ ಪ್ರಪಂಚವೇ ದುಡ್ಡಿನ ಹಿಂದೆ ಬಿದ್ದಿದೆ. ಹಿಂದಿನಿಂದಲೂ ಮನುಕುಲಕ್ಕೆ ದುಡ್ಡೇ ದೊಡ್ಡಪ್ಪ. ದುಡ್ಡು ಮಾಡೋರಿಗೆ ಹಲವಾರು ಮಾರ್ಗ. ರಾಜಕೀಯ, ಬಿಸಿನೆಸ್ .. ಹೀಗೆ... ಈಗ ಕ್ರೀಡಾ ಕ್ಷೇತ್ರವೂ ಹಾಗೆಯೇ ಆಗಿದೆ.
ಅಸಲಿಗೆ ಕ್ರೀಡಾಕ್ಷೇತ್ರಕ್ಕೆ ವ್ಯಾಪಾರದ ಟಚ್ ನೀಡಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳು. ಪ್ರಾಯೋಜಕತ್ವ, ಜಾಹೀರಾತು ಮುಂತಾದ ವಿಷಯಗಳನ್ನು ಪರಿಚಯಿಸಿದ್ದೇ ಆ ದೇಶಗಳು. ಅಲ್ಲಿಂದ ಕ್ರೀಡಾಲೋಕದಲ್ಲೂ ಹಣದ ಪ್ರವಾಹ. ಇದರಿಂದ ಕ್ರೀಡಾಭಿಮಾನಿಗಳಿಗೆ ತಮ್ಮ ಮೆಚ್ಚಿನ ಕ್ರೀಡೆ ಗ್ಲಾಮರಸ್ ಆಗಿ ಕಾಣುತ್ತಾ ಹೋದರೆ, ಕ್ರೀಡಾಳುಗಳು ಹಣ ಬಾಚುತ್ತಾ ಹೋದರು.
ಪಾಶ್ಚಿಮಾತ್ಯ ರಾಷ್ಟ್ರಗಳ ಕ್ರೀಡಾಪಟುಗಳಷ್ಟೇ ಜಗತ್ತಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದ ಕಾಲವೂ ಒಂದಿತ್ತು. ಆದರೆ, ಯಾವಾಗ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆಯ ಉತ್ತುಂಗಕ್ಕೇರಿತೋ ಅಲ್ಲಿಂದ ಭಾರತೀಯ ಕ್ರಿಕೆಟ್ ತಾರೆಗಳೂ ಜಗತ್ತಿನ ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲಿ ನಿಲ್ಲುವ ಅವಕಾಶ ಪಡೆದುಕೊಂಡರು. ಇದು ಭಾರತದಲ್ಲಿ ಈಗ ಇತರ ಕ್ರೀಡೆಗಳ ಅಭಿವೃದ್ಧಿಗೂ ಪೂರಕವಾಗಿರುವುದು ಸುಳ್ಳಲ್ಲ. ಕ್ರಿಕೆಟ್ನ ಪರಿಣಾಮವಾಗಿ ಇತರ ಕ್ರೀಡೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದಕ್ಕೆ ತಾಜಾ ಉದಾಹರಣೆಯೆಂದರೆ, ಹಾಕಿ ಇಂಡಿಯಾ ಲೀಗ್.
ಕ್ರಿಕೆಟ್ ನಮ್ಮಲ್ಲಿ ಉತ್ತುಂಗಕ್ಕೇರುತ್ತಿದ್ದಾಗ ನಮ್ಮ ಸಚಿನ್ ತೆಂಡೂಲ್ಕರ್ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಹಿರಿಮೆ ಗಳಿಸಿದ್ದರು. ಇಡೀ ಭಾರತವೇ ಹೆಮ್ಮೆ ಪಡುವಂಥ ವಿಚಾರ ಅದಾಗಿತ್ತು. ಈಗ ಧೋನಿಯ ಸರದಿ. ಧೋನಿ ಈಗ ಜಗತ್ತಿನ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬ. ಅಷ್ಟೇ ಅಲ್ಲ, ವೇಗದ ಓಟಗಾರ ಉಸೇನ್ ಬೋಲ್ಟ್, ಫುಟ್ಬಾಲ್ ಸ್ಟಾರ್ ವೇಯ್ನ್ ರೂನಿ ಹಾಗೂ ಟೆನಿಸ್ ತಾರೆ ನೊವಾಕ್ ಜೊಕೋವಿಚ್ ಅವರನ್ನೂ ಹಿಂದಿಕ್ಕಿದ್ದಾರೆ.
ಕಾರ್ಪೊರೇಟ್ ಲಿಂಕ್
ಕ್ರೀಡಾ ಕ್ಷೇತ್ರ, ಕಾರ್ಪೊರೇಟ್ ಜಗತ್ತು ಹಾಗೂ ಜಾಹೀರಾತು ಕ್ಷೇತ್ರಗಳು ಒಂದೇ ನಾಣ್ಯದ ಮೂರು ಮುಖಗಳು! ಹೌದು. ಇದು ನಿಜ. ಸಾಮಾನ್ಯವಾಗಿ ನಾಣ್ಯಕ್ಕೆ ಎರಡು ಮುಖಗಳಿರುತ್ತದೆ. ಆದರೆ, ಕ್ರೀಡಾಲೋಕದ ವಾಣಿಜ್ಯೀಕರಣಕ್ಕೆ ಮೂರು ಮುಖಗಳು.
ಈ ಕಾನ್ಸೆಪ್ಟ್ ಕೊಟ್ಟಿದ್ದೇ ಪಾಶ್ಚಿಮಾತ್ಯ ರಾಷ್ಟ್ರಗಳು. ಇವತ್ತು ಕಾರ್ಪೊರೇಟ್ ವಲಯದ ಸಹಕಾರವಿಲ್ಲದೇ ಯಾವುದೇ ಕ್ರೀಡೆ ಗಣನೀಯ ವೇಗದಲ್ಲಿ ಬೆಳೆಯಲೂ ಸಾಧ್ಯವಿಲ್ಲ ಅಥವಾ ಗಣನೀಯ ಮಟ್ಟಕ್ಕೆ ಮುಟ್ಟುವುದೂ ಸಾಧ್ಯವಿಲ್ಲ ಎನ್ನುವಂಥ ಪರಿಸ್ಥಿತಿಯಿದೆ. ಅತ್ತ, ಕಾರ್ಪೊರೇಟ್ ವಲಯಗಳಿಗೂ ಅಷ್ಟೇ. ಕ್ರೀಡಾಲೋಕದ ಸಹಾಯದಿಂದ ತಮ್ಮ ವ್ಯಾಪಾರ, ವಹಿವಾಟುಗಳನ್ನು ತ್ವರಿತವಾಗಿ ವಿಸ್ತರಿಸಲು ಸಾಧ್ಯವಿದೆ.
ಒಂದು ಸಮೀಕ್ಷೆಯ ಪ್ರಕಾರ, ಒಲಿಂಪಿಕ್, ವಿಶ್ವಕಪ್ ಕ್ರಿಕೆಟ್ಗಳಂಥಾ ಸಂದರ್ಭಗಳಲ್ಲಿ ನೀಡಲಾಗುವ ಜಾಹೀರಾತುಗಳು, ಮಾಮೂಲು ದಿನಗಳಲ್ಲಿ ನೀಡಲಾಗುವ ಜಾಹೀರಾತಿಗಿಂತ ಹತ್ತುಪಟ್ಟು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಈ ಕಾರಣದಿಂದಾಗಿಯೇ ಕಾರ್ಪೊರೇಟ್ ವಲಯಗಳು ಪ್ರಮುಖ ಪಂದ್ಯಾವಳಿಗಳ ಟೈಟಲ್ ಸ್ಪಾನ್ಸರ್ಶಿಪ್ ಮುಂತಾದ ಪ್ರಾಯೋಜಕತ್ವಗಳಿಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ.
ಪಂದ್ಯಾವಳಿಯ ಆಯೋಜಕರು ಹಾಗೂ ಕಾರ್ಪೊರೇಟ್ ವಲಯಗಳ ನಡುವೆ ಕೆಲಸ ಮಾಡುವುದೇ ಜಾಹೀರಾತು ಕ್ಷೇತ್ರ.
ಕಾರ್ಪೊರೇಟ್ ವಲಯಕ್ಕೆ ತನ್ನ ಪ್ರಾಡಕ್ಟ್ ಅಥವಾ ಸೇವೆ ಜನರಿಗೆ ತಲುಪಿಸುವ ಒಂದು ಮಾಧ್ಯಮ ಬೇಕು. ಪಂದ್ಯಾವಳಿಗಳ ಆಯೋಜಕರಿಗೆ ಹಣ ಬೇಕು. ಇವರಿಬ್ಬರ ಅವಶ್ಯಕತೆಗಳು ಒಂದಕ್ಕೊಂದು ಪೂರಕವಾಗಿ ಈ ಡೇರುವುದು ಜಾ ಹೀರಾತುಗಳ ಮೂಲಕ. ಇದೇ ಕ್ರೀಡಾಕ್ಷೇತ್ರಕ್ಕೆ ಹಣ ಬರುವ ಮೂಲ ದಾರಿ.
ಆತಂಕ
ಕಾರ್ಪೊರೇಟ್ ವಲಯ, ಕ್ರೀಡಾಕ್ಷೇತ್ರದ ಸಮಾಗಮದಿಂದ ಕ್ರೀಡಾಕ್ಷೇತ್ರಕ್ಕೆ ಎಷ್ಟು ಅನುಕೂಲವಾಗಿದೆಯೋ ಅಷ್ಟೇ ಅನಾನುಕೂಲಗಳೂ ಆಗಿವೆ, ಆಗುತ್ತಿವೆ ಎಂಬುದು ಸುಳ್ಳಲ್ಲ. ಅತಿಯಾಗ ವಾಣಿಜ್ಯೀಕರಣದಿಂದಾಗಿ ಕ್ರೀಡಾಕ್ಷೇತ್ರದ ಮೌಲ್ಯಗಳು ಕುಸಿಯುತ್ತಿವೆ. ಗ್ಲಾಮರ್ ಹೆಸರಿನಲ್ಲಿ ನಡೆಯುತ್ತಿರುವ ಚಿಯರ್ ಗರ್ಲ್ಸ್ ನೃತ್ಯಗಳಂಥ ಕಾರ್ಯಕ್ರಮಗಳೂ ಅತಿಯಾಗುತ್ತಿವೆ. ಇದು ಹೊಸ ಪರ್ವಕ್ಕೆ ನಾಂದಿ ಹಾಡುತ್ತದೋ, ಅಥವಾ ಮುಂದೊಂದು ಕ್ರೀಡಾಕ್ಷೇತ್ರದಲ್ಲಿನ ಅಧಃಪತನಕ್ಕೆ ನಾಂದಿ ಹಾಡುತ್ತದೋ ಗೊತ್ತಿಲ್ಲ. ಆದರೆ, ಈ ದಿನಗಳಲ್ಲಿ ಜಾಗತಿಕ ಆರ್ಥಿಕ ರಂಗದಲ್ಲಿ ಕ್ರೀಡಾಳುಗಳನ್ನು ಸೂಪರ್ ಸ್ಟಾರ್ಗಳನ್ನಾಗಿ ಮಾಡಿರುವುದಂತೂ ಸತ್ಯದ ವಿಚಾರ.
ಯಾರ್ಯಾರು... ಎಷ್ಟೆಷ್ಟು ಡಾಲರ್ರು?
ವಿಶ್ವದ ಟಾಪ್ 10 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ (ವಾರ್ಷಿಕ ಆದಾಯ ಅಮೆರಿಕನ್ ದಶಲಕ್ಷ ಡಾಲರ್ಗಳಲ್ಲಿದೆ) ಮೊದಲ ಸ್ಥಾನದಲ್ಲಿ ಬಾಕ್ಸಿಂಗ್ ಆಟಗಾರ ಪ್ಲಾಯ್ಡ್ ಮೇ ವೆದರ್ ಇದ್ದಾರೆ. ಅವರ ವಾರ್ಷಿಕ ಆದಾಯ 85 ದಶಲಕ್ಷ ಅಮೆರಿಕನ್ ಡಾಲರ್. ಇನ್ನು, ದ್ವಿತೀಯ ಸ್ಥಾನದಲ್ಲಿ ಬಾಕ್ಸಿಂಗ್ ಕ್ಷೇತ್ರದ ಕ್ರೀಡಾಳುವೇ ಆದ 62 ದಶಲಕ್ಷ ಅಮೆರಿಕನ್ ಡಾಲರ್.
ಮೂರನೇ ಸ್ಥಾನದಲ್ಲಿ ಟೈಗರ್ ವುಡ್ಸ್ (ಗಾಲ್ಫ್) ಇದ್ದಾರೆ. ಅವರ ವಾರ್ಷಿಕ ಆದಾಯ 59.4 ದಶಲಕ್ಷ ಅಮೆರಿಕನ್ ಡಾಲರ್. ನಂತರದ ಸ್ಥಾನಗಳಲ್ಲಿ ಲಿಬ್ರಾನ್ ಜೇಮ್ಸ್ (ಬ್ಯಾಸ್ಕೆಟ್ಬಾಲ್- 53 ದಶಲಕ್ಷ, ರೋಜರ್ ಫೆಡರರ್ (ಟೆನಿಸ್- 52.7 ದಶಲಕ್ಷ), ಕೋಬ್ ಬೆಕಮ್ (ಫುಟ್ಬಾಲ್- 46 ದಶಲಕ್ಷ), ಕ್ರಿಶ್ಚಿಯಾನೋ ರೊನಾಲ್ಡೊ (ಫುಟ್ಬಾಲ್- 42.5 ದಶಲಕ್ಷ), ಪೇಟನ್ ಮ್ಯಾನಿಂಗ್ (ಅಮೆರಿಕನ್ ಫುಟ್ಬಾಲ್- 42.4 ದಶಲಕ್ಷ).
ಇವರಲ್ಲದೇ ಶ್ರೀಮಂತ ಕ್ರೀಡಾಳುಗಳು ಎಂದರೆ, ಲಿಯೋನೆಲ್ ಮೆಸ್ಸಿ (ಫುಟ್ಬಾಲ್- 39 ದಶಲಕ್ಷ, 26ನೇ ಸ್ಥಾನ), ಮಹೇಂದ್ರ ಸಿಂಗ್ ಧೋನಿ (ಕ್ರಿಕೆಟ್- 26.5 ದಶಲಕ್ಷ, 31ನೇ ಸ್ಥಾನ), ವೇಯ್ನ್ ರೂನಿ (ಫುಟ್ಬಾಲ್- 24.3 ದಶಲಕ್ಷ, 37ನೇ ಸ್ಥಾನ), ನೊವಾಕ್ ಜೊಕೋವಿಚ್ (ಟೆನಿಸ್- 20.6 ದಶಲಕ್ಷ, 62ನೇ ಸ್ಥಾನ), ಉಸೇನ್ ಬೋಲ್ಟ್ (ಅಥ್ಲೆಟಿಕ್ಸ್- 20.3 ದಶಲಕ್ಷ, 63ನೇ ಸ್ಥಾನ), ಸಚಿನ್ ತೆಂಡೂಲ್ಕರ್ (ಕ್ರಿಕೆಟ್-18.6 ದಶಲಕ್ಷ, 78ನೇ ಸ್ಥಾನ).
- ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


