ಟೆಸ್ಟ್: ಹರಿಣಗಳೇ ವಿಶ್ವಕ್ಕೆ ಬೆಸ್ಟ್

ದುಬೈ: ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸತತ ಆರನೇ ಟೆಸ್ಟ್ ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ, ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ.
ಈ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ನಂ.1 ಸ್ಥಾನದ ಜತೆಗೆ ಹರಿಣಗಳು 2.42 ಕೋಟಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ತಂಡ 124 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಶ್ರೀಲಂಕಾ ಸೇರಿದಂತೆ ಯಾವುದೇ ಬಲಿಷ್ಠ ಟೆಸ್ಟ್ ಕ್ರಿಕೆಟ್ ತಂಡಗಳು ದಕ್ಷಿಣ ಆಫ್ರಿಕಾಗೆ ಪೈಪೋಟಿ ನೀಡಲಾಗುತ್ತಿಲ್ಲ. ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ 118 ಅಂಕಗಳಿಸಿದ್ದು, ಆಸ್ಟ್ರೇಲಿಯಾ 117 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ ಹಾಗೂ ಭಾರತ ತಂಡ ಕ್ರಮವಾಗಿ 109 ಹಾಗೂ 105 ಅಂಕಗಳನ್ನು ಗಳಿಸಿದ್ದು, ಕ್ರಮೇಣ 4 ಹಾಗೂ 5ನೇ ಸ್ಥಾನದಲ್ಲಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್ ತಂಡಕ್ಕಿಂತ 6 ಅಂಕಗಳ ಮುನ್ನಡೆಯಲ್ಲಿದೆ.
ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಮುಂಬರುವ ಸರಣಿಯಲ್ಲಿ 3-0 ಅಂತರದಲ್ಲಿ ಸರಣಿ ಜಯಿಸಿದರೂ ಅದು 119 ಅಂಕಗಳನ್ನು ಗಳಿಸಲಿದೆ. ಹೀಗಾಗಿ ಸದ್ಯಕ್ಕೆ ಹರಿಣಗಳಿಗೆ ನಂ.1 ಪಟ್ಟಕ್ಕೆ ಪೈಪೋಟಿ ನೀಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇನ್ನು ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಹರಿಣಗಳ ಬ್ಯಾಟ್ಸ್ಮನ್ ಹಶೀಂ ಆಮ್ಲಾ 893 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಆಸೀಸ್ನ ನಾಯಕ ಮೈಕಲ್ ಕ್ಲಾರ್ಕ್ 887 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. 653 ಅಂಕಗಳನ್ನು ಪಡೆದಿರುವ ಸಚಿನ್ ತೆಂಡುಲ್ಕರ್ 20ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ 907 ಅಂಕಗಳನ್ನು ಪಡೆದಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಹರಿಣಗಳ ಮತ್ತೊರ್ವ ಬೌಲರ್ ವರ್ನಾನ್ ಫಿಲ್ಯಾಂಡರ್ 889 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಪ್ರಗ್ಯಾನ್ ಓಜಾ 739 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ 387 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಹರಿಣಗಳ ಆಲ್ರೌಂಡರ್ ಜಾಕ್ ಕಾಲಿಸ್ 382 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಆರ್.ಅಶ್ವಿನ್ 277 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರಲ್ಲಿ ಮಿಥಾಲಿ ನಂ.1: ಭಾನುವಾರ ಮಹಿಳಾ ವಿಶ್ವಕಪ್ ಮುಗಿದ ಹಿನ್ನಲೆಯಲ್ಲಿ ಬಿಡುಗಡೆಯಾಗಿರುವ ಪರಿಷ್ಕೃತ ಮಹಿಳಾ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಾಯಕಿ ಮಿಥಾಲಿ ರಾಜ್ ನಂ.1 ಪಟ್ಟ ಉಳಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


