ಕ್ರೀಡೆ

ಭಾರತದ ರಭಸಕ್ಕೆ ಕೊಚ್ಚಿ ಹೋದ ಫಿಜಿ

ಭಾರತದ ರಭಸಕ್ಕೆ ಕೊಚ್ಚಿ ಹೋದ ಫಿಜಿ
Published On :

ವಿಶ್ವ ಹಾಕಿ ಲೀಗ್: ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡಕ್ಕೆ 16-0 ಅಂತರದ ಜಯ
ನವದೆಹಲಿ: ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಭಾರತದ ಪುರುಷರ ಹಾಗೂ ಹಾಕಿ ತಂಡಗಳು ಶುಭಾರಂಭ ಮಾಡಿವೆ. ಸೋಮವಾರ ರಾತ್ರಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ, ಭಾರತ ತಂಡ ಫಿಜಿ ವಿರುದ್ಧದ ಪಂದ್ಯದಲ್ಲಿ 16-0 ಅಂತರದ ಭರ್ಜರಿ ಜಯವನ್ನು ದಾಖಲಿಸಿತು.
ಈ ಪಂದ್ಯಕ್ಕೂ ಮುನ್ನ ನಡೆದ ಭಾರತ ಮಹಿಳೆಯರ ಹಾಗೂ ಕಜಕಿಸ್ತಾನ ಮಹಿಳೆಯರ ನಡುವಿನ ಪಂದ್ಯದಲ್ಲಿ ಭಾರತ ತಂಡ 8-0 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಫಿಜಿ ವಿರುದ್ಧ ಜಯ: ಪುರುಷರ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರರು ಪಂದ್ಯದ ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿದರು. ಭಾರತ ತಂಡದ ವಿ. ಆರ್. ರಘುನಾಥ್ ಅವರು ಪಂದ್ಯದ 3ನೇ ನಿಮಿಷದಲ್ಲೇ ಗೋಲು ದಾಖಲಿಸಿ, ಭಾರತದ ಪರ ಮೊದಲ ಗೋಲು ದಾಖಲಿಸಿದರು. ಆನಂತರ, ಪಂದ್ಯದ 5ನೇ ನಿಮಿಷದಲ್ಲಿ ರೂಪಿಂದರ್ ಸಿಂಗ್ ಅವರು ಇನ್ನೊಂದು ಗೋಲು ದಾಖಲಿಸಿದರು.
ಆನಂತರ, ಪಂದ್ಯದ 15ನೇ ನಿಮಿಷದಲ್ಲಿ ಮತ್ತೆ ಮಿಂಚಿದ ರಘುನಾಥ್, ತಮಗೆ ಸಿಕ್ಕಿದ್ದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಇದರಿಂದ, ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಆದರೆ, ಅತ್ತ ಫಿಜಿ ಕಡೆಯಿಂದ ಯಾವುದೇ ಪ್ರತಿರೋಧ ಬರಲಿಲ್ಲ. ಪಂದ್ಯದ 17ನೇ ನಿಮಿಷದಲ್ಲಿ ನಿತಿನ್ ತಿಮ್ಮಯ್ಯ ಅವರು ಭಾರತದ ಪರವಾಗಿ ಮತ್ತೊಂದು ಗೋಲು ಗಳಿಸಿದರು. ಇದರಿಂದ, ಭಾರತದ ಗೋಲುಗಳ ಅಂತರ 4-0ರಷ್ಟು ಹೆಚ್ಚಾಯಿತು.
ಆನಂತರ, ಪಂದ್ಯದ 20ನೇ ನಿಮಿಷದಲ್ಲಿ, ಗುರ್ವಿಂದರ್ ಸಿಂಗ್ ಅವರಿಗೆ ಸಿಕ್ಕಿದ್ದ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತಕ್ಕೆ ಮತ್ತೊಂದು ಗೋಲು ಗಳಿಸಿತು. ಇದಾದ ಮೇಲೆ, 28ನೇ ನಿಮಿಷದಲ್ಲಿ, 38ನೇ ನಿಮಿಷದಲ್ಲಿ ಕ್ರಮವಾಗಿ ದಾನಿಶ್, ರೂಪಿಂದರ್ ಅವರು ಭಾರತಕ್ಕೆ ಗೋಲುಗಳ ಉಡುಗೊರೆ ತಂದಿತ್ತರು.
ಇದರಿಂದ ಭಾರತ 7-0 ಅಂತರದ ಮುನ್ನಡೆ ಪಡೆದುಕೊಂಡಿತು.
ಗೋಲುಗಳ ಸುರಿಮಳೆ: ಪಂದ್ಯದ 40ರಿಂದ 55 ನಿಮಿಷಗಳ ಅಂತರದಲ್ಲಿ ಭಾರತದ ಖಾತೆಗೆ 5 ಗೋಲುಗಳು ಹರಿದುಬಂದವು. 41ನೇ ನಿಮಿಷದಲ್ಲಿ, ರಘುನಾಥ್ ಅವರು ಗೋಲು ಗಳಿಸಿದರೆ, 47ನೇ ನಿಮಿಷದಲ್ಲಿ ಕೋಠಾಜಿತ್ ತಂಡಕ್ಕೆ ಮತ್ತೊಂದು ಗೋಲು ತಂದುಕೊಟ್ಟರು.
ಇದು ಭಾರತದ 10ನೇ ಗೋಲು. 50ನೇ ನಿಮಿಷದಲ್ಲಿ ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿದರೆ, 54ನೇ ನಿಮಿಷದಲ್ಲಿ ಚೆಂಗ್ಲೆಂಸಾನಾ ಗೋಲು ಗಳಿಸಿದರು.
ಚೆಂಗ್ಲೆಂಸಾನಾ ಗೋಲು ದಾಖಲಿಸಿದ ಒಂದು ನಿಮಿಷದ ನಂತರ, ಧರ್ಮವೀರ್ ಅವರು ಮತ್ತೊಂದು ಗೋಲು ಗಳಿಸಿದರು. ಇದು ಭಾರತದ 14 ಗೋಲ್ ಆಗಿತ್ತು.
ಆನಂತರ, ದಾನಿಶ್ ಅವರಿಂದ ಪಂದ್ಯದ 57ನೇ ನಿಮಿಷದಲ್ಲಿ 15ನೇ ಗೋಲು ದಾಖಲಾದರೆ, ಪಂದ್ಯದ 62ನೇ ನಿಮಿಷದಲ್ಲಿ ಆಕಾಶ್ ಅವರಿಂದ 16ನೇ ಗೋಲು ದಾಖಲಾಯಿತು.
ಭಾರತದ ಗೋಲು ಸುರಿಮಳೆಗೆ ಕೊಚ್ಚಿ ಹೋದ ಫಿಜಿ, ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು. ಪಂದ್ಯದ ಫಿಜಿಗೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭ್ಯವಾಗಿತ್ತಾದರೂ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಫಿಜಿ ಆಟಗಾರರು ಯಶಸ್ವಿಯಾಗಲಿಲ್ಲ.
ಅಂತಿಮವಾಗಿ, ಫಿಜಿ ತಂಡ, ಭಾರತದ ವಿರುದ್ಧ 16-0 ಗೋಲುಗಳ ಅಂತರದಿಂದ ಸೋಲು ಕಂಡಿತು.

ಜಪಾನ್‌ಗೆ ಜಯ
ನವದೆಹಲಿ:
ಶಿಹೋ ಸಕಾಯ್ ಬಾರಿಸಿದ ಮೂರು ಗೋಲುಗಳ ನೆರವಿನಿಂದಾಗಿ ಜಪಾನ್ ವನಿತೆಯರ ಹಾಕಿ ತಂಡ, ಸೋಮವಾರ ನಡೆದ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಫಿಜಿ ವನಿತೆಯರ ತಂಡವನ್ನು 14-0 ಭರ್ಜರಿ ಅಂತರದಿಂದ ಸೋಲಿಸಿತು.
ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ತಂಡ, ಪಂದ್ಯದ ಮೊದಲಾರ್ಧದಲ್ಲೇ 8 ಗೋಲುಗಳನ್ನು ದಾಖಲಿಸಿತ್ತು. ಈ ಮೂಲಕ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿದ ಜಪಾನ್, ಅಂತಿಮವಾಗಿ ಪ್ರಚಂಡ ಜಯ ಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.