ಭಾರತಕ್ಕೆ ಗೆಲುವಿನ ವಂದನಾ
ವಿಶ್ವ ಹಾಕಿ ಲೀಗ್: ಮಲೇಷ್ಯಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಜಯ
ನವದೆಹಲಿ: ವಂದನಾ ಕಟಾರಿಯಾ ಅವರು ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ಮಹಿಳೆಯರ ಹಾಕಿ ತಂಡ, ಮಂಗಳವಾರ ನಡೆದ ಮಲೇಷ್ಯಾ ವಿರುದ್ಧದ ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ 3-0 ಅಂತರದ ಜಯ ಗಳಿಸಿತು.
ವಿಶ್ವ ಹಾಕಿಯಲ್ಲಿ 22ನೇ ಸ್ಥಾನ ಹೊಂದಿರುವ ಮಲೇಷ್ಯಾ ವಿರುದ್ಧ ಹತ್ತನೇ ಸ್ಥಾನದಲ್ಲಿರುವ ತಾವು ದೊಡ್ಡ ಅಂತರದಿಂದ ಜಯ ಗಳಿಸಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡೇ ಭಾರತದ ಮಹಿಳೆಯರು ಮೈದಾನಕ್ಕಿಳಿದಿದ್ದರು. ಆ ನಿರೀಕ್ಷೆ ಹುಸಿಯಾದರೂ ಗೆಲುವು ಸಾಧಿಸುವಲ್ಲಿ ಭಾರತ ಅಂತೂ ಯಶಸ್ವಿಯಾಯಿತು.
ಸೋಮವಾರ ರಾತ್ರಿ ಕಜಕಿಸ್ತಾನದ ವಿರುದ್ಧ ಆಡಿದ್ದ ಭಾರತ ಆ ಪಂದ್ಯದಲ್ಲೂ ಜಯ ಸಾಧಿಸಿತ್ತು. ಆ ಪಂದ್ಯದ ನಂತರ ವಿಶ್ರಾಂತಿ ಪಡೆಯದೇ ಮಂಗಳವಾರ ಕಣಕ್ಕಿಳಿದಿದ್ದ ಭಾರತ ಮಹಿಳೆಯರು ಮಂಗಳವಾರದ ಪಂದ್ಯದಲ್ಲಿ ಕೊಂಚ ಮಂದಗತಿಯ ಆಟ ಪ್ರದರ್ಶಿಸಿದರು.
ಹೀಗಾಗಿ, ಪಂದ್ಯ ಆರಂಭವಾಗಿ ಕೆಲ ನಿಮಿಷಗಳವರೆಗೂ ಭಾರತ ಆಟಗಾರ್ತಿಯರಲ್ಲಿ ಯಾವುದೇ ಉತ್ಸಾಹ ಕಂಡುಬಂದಿರಲಿಲ್ಲ. ಪಂದ್ಯದ 9ನೇ ನಿಮಿಷದಲ್ಲಿ ಭಾರತದ ವಂದನಾ ಕಟಾರಿಯಾ ಅವರು ತಮಗೆ ಸಿಕ್ಕಿದ್ದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಭಾರತಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಇದು ಭಾರತ ತಂಡಕ್ಕೆ ಹೊಸ ಹುರುಪನ್ನು ತಂದುಕೊಟ್ಟಿತು. ಮೊದಲ ಗೋಲು ಭಾರತೀಯ ಆಟಗಾರ್ತಿಯರು ಚುರುಕಾಗಿ ಆಡಲು ಕಾರಣವಾಯಿತು. ಇದಾದ ನಂತರ, ಪಂದ್ಯದ 38ನೇ ನಿಮಿಷದಲ್ಲಿ ಮತ್ತೆ ಆಕ್ರಮಣಕಾರಿ ಆಟವನ್ನಾಡಿದ ವಂದನಾ, ಎರಡನೇ ಗೋಲು ಬಾರಿಸಿದರು. ಇದು ಭಾರತಕ್ಕೆ 2-0ಯ ಅಂತರವನ್ನು ತಂದುಕೊಟ್ಟಿತು.
ಈ ಹಂತದಲ್ಲಿ ಮಲೇಷ್ಯಾ ಆಟಗಾರ್ತಿಯರು ಕೊಂಚ ಪ್ರತಿರೋಧ ತೋರಿದರಾದರೂ, ಭಾರತದ ಆಟಗಾರ್ತಿಯರು ಅದನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾದರು. ಪಂದ್ಯದ 65ನೇ ನಿಮಿಷದಲ್ಲಿ ರಾಣಿ ರಾಮ್‌ಪಾಲ್ ಅವರು ಭಾರತಕ್ಕೆ 3ನೇ ಗೋಲು ಗಳಿಸಿಕೊಟ್ಟರು. ಇದರಿಂದಾಗಿ, ಪಂದ್ಯ ಮಲೇಷ್ಯಾದ ಹಿಡಿತದಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡಿತು. ಅಂತಿಮವಾಗಿ, ಭಾರತ 3-0 ಗೋಲುಗಳಿಂದ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಅವಕಾಶ ವ್ಯರ್ಥ: ಏತನ್ಮಧ್ಯೆ, ಮಲೇಷ್ಯಾ ತಂಡಕ್ಕೆ ಎರಡು ಬಾರಿ ಗೋಲು ಗಳಿಸುವ ಅವಕಾಶಗಳು ಲಭ್ಯವಾಗಿದ್ದವು. ಪಂದ್ಯದ 25ನೇ ನಿಮಿಷದಲ್ಲಿ ಮಲೇಷ್ಯಾಗೆ ಗೋಲು ಗಳಿಸುವ ಬಂಗಾರದಂಥಾ ಅವಕಾಶ ಲಭ್ಯವಾಗಿತ್ತು. ಅಜ್ಲಿನ್ ನೂರ್ ಸುಮಂತ್ರಿ ಅವರು ಬಾರಿಸಿದ ಗೋಲನ್ನು ತಡೆಯುವಲ್ಲಿ ಭಾರತದ ಗೋಲ್ ಕೀಪರ್ ಯೋಗಿತಾ ಬಾಲಿ ಯಶಸ್ವಿಯಾದರು. ಇದಾದ ನಂತರ, ಪಂದ್ಯದ ದ್ವಿತೀಯಾರ್ಧದಲ್ಲಿ ಮಲೇಷ್ಯಾದ ಆಟಗಾರ್ತಿಯರು ಹೆಚ್ಚು ಚುರುಕಾಗಿ ಆಡಲು ಆರಂಭಿಸಿದರು. ದ್ವಿತೀಯಾರ್ಧ ಆರಂಭವಾದ ಕೆಲವೇ ನಿಮಿಷಗಳಲ್ಲಿ ಆ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭ್ಯವಾಗಿತ್ತು. ಆದರೆ, ಭಾರತದ ಗೋಲ್ ಕೀಪರ್ ಯೋಗಿತಾ ಮತ್ತೆ ಅದನ್ನು ವಿಫಲಗೊಳಿಸಿದರು.
ಮುಂದಿನ ಎದುರಾಳಿ: ಬುಧವಾರ ಭಾರತ ತಂಡಕ್ಕೆ ವಿಶ್ರಾಂತಿಯ ದಿನವಾಗಿದ್ದು, ಗುರುವಾರದ ದಿನ ಭಾರತ ತಂಡ, ಫಿಜಿ ಎದುರು ಸೆಣೆಸಲಿದೆ.
ರಷ್ಯಾ ಮಹಿಳೆಯರಿಗೆ ಭರ್ಜರಿ ಗೆಲುವು
ನವದೆಹಲಿ: ಮಂಗಳವಾರ ನಡೆದ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ಮಹಿಳೆಯರ ವಿಭಾಗದ ಪಂದ್ಯದಲ್ಲಿ ರಷ್ಯಾ ತಂಡ, ಫಿಜಿ ತಂಡವನ್ನು 8-0 ಗೋಲುಗಳ ಅಂತರದಿಂದ ಸೋಲಿಸಿತು. ರಷ್ಯಾದ ಪರವಾಗಿ ಅಲಿನಾ ಕ್ರಾಸ್ನೋಪೆರೋವಾ ಅವರು ಮೂರು ಗೋಲು ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ 9ನೇ ನಿಮಿಷದಲ್ಲಿ ತಮ್ಮ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟ ಅಲಿನಾ, ನಂತರ, 39ನೇ ನಿಮಿಷ ಹಾಗೂ 47ನೇ ನಿಮಿಷದಲ್ಲಿ ಗೋಲು ಗಳಿಸಿದರು. ಅಲಿನಾ ದಾಳಿಗೆ ಕೈ ಜೋಡಿಸಿದ ಯಾನಾ ಡೋರೋನಿನಾ ಪಂದ್ಯದ 20ನೇ ಹಾಗೂ 57ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಎಕಾಟೇರಿಯಾ ಶಬುರೋವಾ ಅವರು 26ನೇ ಹಾಗೂ 28ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನೆರಡು ಗೋಲುಗಳು, ಕ್ಸೇನಿಯಾ ಸ್ವೇಜೆತ್ಸೇವಾ (65ನೇ ನಿಮಿಷ) ಹಾಗೂ ಮಾರ್ಗರಿಟಾ ದ್ರೇಪೇಂಕಿನಾ (68ನೇ ನಿಮಿಷ) ಅವರಿಂದ ದಾಖಲಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

