ಆಂಗ್ಲರಿಗೆ ಅಗ್ರ ಕ್ರಮಾಂಕ ಆಶ್ರಯ
2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ 8 ವಿಕೆಟ್ ಅಂತರದ ಸೋಲು
ನೇಪಿಯರ್: ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜಿಗುಟಿನ ಬ್ಯಾಟಿಂಗ್ ನೆರವಿನೊಂದಿಗೆ ಇಂಗ್ಲೆಂಡ್ ತಂಡ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದವು.
ಟಾಸ್ ಗೆದ್ದರೂ ನ್ಯೂಜಿಲೆಂಡ್ಗೆ ಬ್ಯಾಟಿಂಗ್ ಬಿಟ್ಟುಕೊಟ್ಟ ಇಂಗ್ಲೆಂಡ್, ಎದುರಾಳಿಯನ್ನು 269 ರನ್ಗಳಿಗೆ ಕಟ್ಟಿ ಹಾಕಿದರು. ಕಿವೀಸ್ ಮಾಜಿ ನಾಯಕ ರಾಸ್ ಟೇಲರ್ (100) ಶತಕ ಮತ್ತು ಬ್ರೆಂಡಾನ್ ಮೆಕಲಂ (75) ಅರ್ಧ ಶತಕ ಸಿಡಿಸಿದ್ದು, ಕಿವೀಸ್ ಪಡೆಗೆ 260 ರನ್ಗಳ ಗಡಿ ದಾಟಲು ನೆರವಾಯಿತು.
ನಂತರ 270 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರವಾಗಿ ಅರ್ಧ ಶತಕ ಸಿಡಿಸಿದ ಅಲಸ್ಟೇರ್ ಕುಕ್ (78), ಜೋನಾಥನ್ ಟ್ರಾಟ್ (65) ಹಾಗೂ ಜಾಯ್ ರೂಟ್ (79) ಅವರು ಜಯದ ಹಾದಿಯನ್ನು ಸುಗಮಗೊಳಿಸಿದರು. ಹೀಗಾಗಿ ಪ್ರವಾಸಿ ತಂಡ, ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಜಯದ ದಡ ಸೇರಿತು.
ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ ತಲಾ ಒಂದು ಪಂದ್ಯ ಗೆದ್ದಿರುವ ಹಿನ್ನೆಲೆಯಲ್ಲಿ, ಶನಿವಾರ ನಡೆಯಲಿರುವ ಅಂತಿಮ ಮತ್ತು 3ನೇ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕಳೆದ ಶುಕ್ರವಾರ ನಡೆದ ಆರಂಭಿಕ ಪಂದ್ಯದಲ್ಲಿ ಕೇವಲ 4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ಕುಕ್, ಇಯಾನ್ ಬೆಲ್ ಅವರೊಂದಿಗೆ (44) ಮೊದಲ ವಿಕೆಟ್ಗೆ 89 ರನ್ ದಾಖಲಿಸಿ ಭದ್ರ ಬುನಾದಿ ಹಾಕಿದರು. ನಂತರ ಟ್ರಾಟ್ ಅವರೊಂದಿಗೆ 2ನೇ ವಿಕೆಟ್ಗೆ 60 ರನ್ ಕಲೆ ಹಾಕುತ್ತಿದ್ದಂತೆಯೇ 32ನೇ ಓವರ್ನಲ್ಲಿ ಟಿಮ್ ಸೌಥೀ ಬೌಲಿಂಗ್ ಕ್ಯಾಚ್ ನೀಡಿದರು. ಆಗ ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು.
ನಂತರ ಬಂದ ಟ್ರಾಟ್ ಮತ್ತು ರೂಟ್ ಇಂಗ್ಲೆಂಡ್ಗೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. 6ನೇ ಏಕದಿನ ಪಂದ್ಯವನ್ನಾಡಿದ ರೂಟ್, 56 ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಮೂರನೇ ಅರ್ಧ ಶತಕ ದಾಖಲಿಸಿದರು. ರೂಟ್ಗಿಂತ ಮುನ್ನವೇ 12ನೇ ಓವರ್ನಲ್ಲಿ ಕ್ರೀಸ್ಗಿಳಿದಿದ್ದ ಟ್ರಾಟ್ ಸಹ 65 ಎಸೆತಗಳಲ್ಲಿ ತಮ್ಮ ಅರ್ಧ ಶತಕ ಪೂರೈಸಿದರು. ಆದರೆ, ರೂಟ್ ಕೇವಲ 39 ಎಸೆತಗಳಲ್ಲೇ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ ಅರ್ಧ ಶತಕ ದಾಖಲಿಸಿದರು.
48ನೇ ಓವರ್ನಲ್ಲಿ ಕೇಲ್ ಮಿಲ್ಸ್ ಎಸೆತದಲ್ಲಿ ರೂಟ್ ಒಂದು ರನ್ ಬಾರಿಸುವುದರೊಂದಿಗೆ ಇಂಗ್ಲೆಂಡ್ ಜಯದ ಕೇಕೆ ಹಾಕಿತು.
'ಇದೊಂದು ಅಚ್ಚರಿಯ ಸರಣಿ. ಮೊದಲ ಪಂದ್ಯದಲ್ಲಿ ನಾವು ಗೆದ್ದವು. 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿದೆ. ಹೀಗಾಗಿ ವಾರಾಂತ್ಯದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ನಾವು ಜಯ ಸಾಧಿಸುವ ಮೂಲಕ 2-1 ಅಂತರದಿಂದ ಸರಣಿ ಕೈವಶ ಮಾಡಿಕೊಳ್ಳುತ್ತೇವೆ' ಎಂದು ಕಿವೀಸ್ ನಾಯಕ ಮೆಕಲಂ ತಿಳಿಸಿದ್ದಾರೆ.
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಆ್ಯಂಡ್ರಸನ್ 34 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಫಿನ್ 33 ರನ್ ನೀಡಿ ಕೇವಲ 1 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಅವರು 68 ರನ್ ನೀಡಿ 3 ವಿಕೆಟ್ ಪಡೆದರು. ಮೊನಚಾದ ಬೌಲಿಂಗ್ ಪ್ರದರ್ಶಿಸುವಲ್ಲಿ ವಿಫಲವಾದ ಕ್ರಿಸ್ ಬ್ರಾಡ್ ಮಾತ್ರ 69 ರನ್ ನೀಡಿ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ಕಿವೀಸ್ ಆರಂಭದಿಂದಲೇ ಉತ್ತಮ ರನ್ ಕಲೆ ಹಾಕುವಲ್ಲಿ ಎಡವಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಮೊದಲ 10 ಓವರ್ಗಳಲ್ಲಿ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಗಳಿಸಿದ್ದು ಬೃಹತ್ ಮೊತ್ತ ಪೇರಸಿಲು ಅಡ್ಡಿಯಾಯಿತು. ನ್ಯೂಜಿಲೆಂಡ್ ಪರ ಬೌಲಿಂಗ್ನಲ್ಲಿ ಟಿಮ್ ಸೌಥೀ ಮತ್ತು ಕೇನ್ ವಿಲಿಯಮ್ಸನ್ ಅವರು ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 269/9 (48.5 ಓವರ್)
ಟೇಲರ್ 100 (117)
ಮೆಕಲಂ 74 (36)
ಬೌಲಿಂಗ್: ಆ್ಯಂಡ್ರಸನ್ 34/5, ಕ್ರಿಸ್ 68/3.
ಇಂಗ್ಲೆಂಡ್ 270/2 (47.4 ಓವರ್)
ಕುಕ್ 78 (92)
ರೂಟ್ 79 (56)
ಬೌಲಿಂಗ್:
ಸೌಥೀ 54/1, ವಿಲಿಯಮ್ಸನ್ 39/1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

