ತಂಡಕ್ಕೆ ಸೋಮ್ದೇವ್, ಯೂಕಿ
ನವದೆಹಲಿ: ರಾಷ್ಟ್ರದ ಸಿಂಗಲ್ಸ್ ಅಗ್ರ ಟೆನಿಸ್ ತಾರೆಗಳಾದ ಸೋಮ್ದೇವ್ ದೇವ್ವರ್ಮನ್ ಮತ್ತು ಯೂಕಿ ಭಾಂಬ್ರಿ ಅವರು ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯದ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಆದರೆ, ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರನ್ನು ಈ ಮಹತ್ವದ ಪಂದ್ಯಕ್ಕೆ ನಿರ್ಲಕ್ಷಿಸಲಾಗಿದೆ.
ಶನಿವಾರ ಸಭೆ ಸೇರಿದ್ದ ಡೇವಿಸ್ ಕಪ್ ತಂಡದ ಆಯ್ಕೆ ಸಮಿತಿ, ಏಷ್ಯಾ/ ಓಸೇನಿಯಾ ಗುಂಪಿನ ಪಂದ್ಯಕ್ಕೆ ನಿರೀಕ್ಷೆಯಂತೆ ಸೋಮ್ದೇವ್, ಯೂಕಿ ಭಾಂಬ್ರಿ, ಸನಮ್ ಸಿಂಗ್ ಹಾಗೂ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಆಯ್ಕೆ ಮಾಡಿದೆ. ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯ ಏಪ್ರಿಲ್ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ವಿಜಯಂತ್ ಮಲಿಕ್ ಮತ್ತು ಎನ್. ಶ್ರೀರಾಮ್ ಬಾಲಾಜಿ ಅವರನ್ನು ಮೀಸಲು ಆಟಗಾರರನ್ನಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಆಯ್ಕೆ ಮಾಡಿದೆ. ರಾಮ್ ಕುಮಾರ್ ರಾಮನಾಥ್ ಅವರನ್ನು ಅಭ್ಯಾಸಕ್ಕೆ ಆಯ್ಕೆ ಮಾಡಲಾಗಿದೆ.
ಏತನ್ಮಧ್ಯೆ, ಎಸ್.ಪಿ ಮಿಶ್ರಾ ಅವರು ಆಟವಾಡದ ನಾಯಕರಾಗಿ ಮುಂದುವರಿದಿದ್ದು, ಜೀಶಾನ್ ಅಲಿ ಅವರು ತಂಡದ ತರಬೇತುದಾರರಾಗಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದ ಅಗ್ರ 11 ಟೆನಿಸ್ ತಾರೆಗಳು ಎಐಟಿಎ ವಿರುದ್ಧ ಬಂಡಾಯವೆದ್ದ ಹಿನ್ನೆಲೆಯಲ್ಲಿ, ಭಾರತ ತಂಡ ಈ ತಿಂಗಳ ಆರಂಭದಲ್ಲಿ ನಡೆದ ಏಷ್ಯಾ ಓಸೇನಿಯಾ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿತ್ತು.
ಆಟಗಾರರ ಬೇಡಿಕೆಗಳನ್ನು ಈಡೇರಿಸುವುದಾಗಿ ಎಐಟಿಎ ಒಪ್ಪಿಕೊಂಡಿದೆ. ಅಲ್ಲದೆ ಅದನ್ನು ಲಿಖಿತ ರೂಪದಲ್ಲಿ ನೀಡಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಬಂಡಾಯವನ್ನು ಕೈಬಿಟ್ಟಿರುವ ಆಟಗಾರರು ಇಂಡೋನೇಷ್ಯಾ ವಿರುದ್ಧದ ಪಂದ್ಯಕ್ಕೆ ರಾಷ್ಟ್ರೀಯ ತಂಡಕ್ಕೆ ಲಭ್ಯರಾಗಿದ್ದಾರೆ.
ವಿಶ್ವ ರ್ಯಾಂಕಿಂಗ್ನಲ್ಲಿ 354ನೇ ಸ್ಥಾನದಲ್ಲಿರುವ ಸೋಮ್ದೇವ್ ಅವರು ಭಾರತದ 5ನೇ ಅಗ್ರ ಆಟಗಾರ ಎನಿಸಿದ್ದಾರೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಎಟಿಪಿ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಅವರು ವಿಶ್ವದ 39ನೇ ರ್ಯಾಂಕಿಂಗ್ ಆಟಗಾರ ಬೆನೋಯಿಟ್ ಪೈರ್ ಅವರನ್ನು ಪರಾಭವಗೊಳಿಸಿದ್ದರು.
ಆಟಗಾರರ ವಿರೋಧದ ನಡುವೆಯೂ ಎಸ್.ಪಿ ಮಿಶ್ರಾ ಅವರನ್ನು ತಂಡದ ಆಟವಾಡದ ನಾಯಕರನ್ನಾಗಿ ಮುಂದುವರಿಸಲಾಗಿದೆ. ಆದರೆ, ಮಿಶ್ರಾ ಅವರಿಗೆ ಇದು ಕೊನೆಯ ಪಂದ್ಯಾವಳಿಯಾಗಿದೆ ಎಂಬುದನ್ನು ಎಐಟಿಎ ಸ್ಪಷ್ಟಪಡಿಸಿದೆ. ಆಟಗಾರರು ರಾಜೀನಾಮೆ ಬಯಸಿದಾಗಲೇ, ಮಿಶ್ರಾ ಒಪ್ಪಿಕೊಂಡಿದ್ದಾರೆ. ಆದರೆ, ಅವರ ಸ್ಥಾನದಲ್ಲಿ ಇನ್ನೊಬ್ಬರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿದೆ ಎಂದು ಎಐಟಿಎ ಹೇಳಿದೆ.
ಪಂದ್ಯದ ವೇಳೆ ಆಟಗಾರರಿಗೆ ನೆರವಾಗುತ್ತಿದ್ದ ಡಾ. ವೇಸ್ ಪೇಸ್ ಅವರನ್ನು ಎಐಟಿಎ ಕೈಬಿಟ್ಟಿತ್ತು. ಆದರೆ, ಅವರ ಸ್ಥಾನದಲ್ಲಿ ನೇಮಕವಾಗಿರುವ ಹೊಸ ವೈದ್ಯರಿಗೆ ಕೊರಿಯಾ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಆಟಗಾರರು ಗಾಯಗೊಂಡಾಗ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಆಟಗಾರರ ಹಿತದೃಷ್ಟಿಯಿಂದ, ಭವಿಷ್ಯದಲ್ಲಿ ವೇಸ್ ಪೇಸ್ ಸೇವೆಯನ್ನು ಕೇಳಲಾಗುವುದು ಎಂದು ಎಐಟಿಎ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

