ಬೈ ಬೈ ಲೀಸಾ

ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಆದ ಆಟದ ಶೈಲಿ ಹಾಗೂ ಸಾಮರ್ಥ್ಯದಿಂದ ಖ್ಯಾತಿ ಗಳಿಸಿದವರು ಅನೇಕರಿದ್ದಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ತಮ್ಮ ವರ್ಣರಂಜಿತ ವೃತ್ತಿಜೀವನವನ್ನು ಅದ್ಭುತವಾಗಿ ಕೊನೆಗೊಳಿಸಿದ್ದಾರೆ.
ಈ ರೀತಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಅದ್ಭುತ ವಿದಾಯ ಹೇಳಿದವರಲ್ಲಿ ಭಾರತೀಯ ಮೂಲದ, ಆಸ್ಟ್ರೇಲಿಯಾ ಆಟಗಾರ್ತಿ ಲೀಸಾ ಸ್ತಾಲೇಕರ್ ಒಬ್ಬರು. ಲೀಸಾ ಸ್ತಾಲೇಕರ್ ತಮ್ಮ ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ. ಲೀಸಾ 2001ರಲ್ಲಿ ತಾಯಿ ತರವಾರದ ಇಂಗ್ಲೆಂಡ್ನಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಲೀಸಾ ತಂದೆಯ ತವರಾದ ಭಾರತದಲ್ಲಿ ವಿದಾಯ ಹೇಳಿದ್ದಾರೆ.
ಆಲ್ರೌಂಡರ್ ಆಗಿರುವ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಸಾಧನೆ ಮಾಡಿದ್ದು, 12 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 8 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ತಾಲೇಕರ್ 416 ರನ್ ಗಳಿಸಿದ್ದು, ಅದರಲ್ಲಿ 2 ಅರ್ಧಶತಕ ಹಾಗೂ 1 ಶತಕ ದಾಖಲಿಸಿದ್ದಾರೆ; ಬೌಲಿಂಗ್ನಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 125 ಪಂದ್ಯಗಳನ್ನಾಡಿದ್ದು, 2728 ರನ್ ಗಳಿಸಿದ್ದಾರೆ. ಅದರಲ್ಲಿ 16 ಅರ್ಧ ಶತಕ ಹಾಗೂ 2 ಶತಕ ದಾಖಲಿಸಿದ್ದು, ಬೌಲಿಂಗ್ನಲ್ಲಿ 146 ವಿಕೆಟ್ ಕಬಳಿಸಿದ್ದಾರೆ. ಈ ಅಂಕಿಅಂಶಗಳೇ ಅವರು ಓರ್ವ ಆಲ್ರೌಂಡರ್ ಎಂಬುದಕ್ಕೆ ಉತ್ತಮ ಸಾಕ್ಷಿಯಾಗಿವೆ.
ಏಕದಿನ ಕ್ರಿಕೆಟ್ನಲ್ಲಿ 1000ರನ್ ಗಳಿಸಿ, 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಲೀಸಾ ಸ್ತಾಲೇಕರ್ ಪಾತ್ರರಾಗಿದ್ದಾರೆ.
ವಿಶ್ವಕಪ್ ಸರಮಾಲೆ
ಲೀಸಾ ಇದುವರೆಗೂ 4 ವಿಶ್ವಕಪ್ಗಳನ್ನು ಗೆದ್ದ ತಂಡದಲ್ಲಿದ್ದ ಖ್ಯಾತಿ ಪಡೆದಿದ್ದಾರೆ. 2005ರಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸ್ತಾಲೇಕರ್, ಈ ಮೂಲಕ ತಮ್ಮ ಮೊದಲ ವಿಶ್ವಕಪ್ ಗೆದ್ದರು. 2010 ಮತ್ತು 2012ರಲ್ಲಿ ಸತತವಾಗಿ ಎರಡು ಸಲ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದರು. ನಂತರ 2013ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಗೆದ್ದ ತಂಡದಲ್ಲಿದ್ದು, ಈ ಮೂಲಕ ಒಟ್ಟು 4 ಬಾರಿ ವಿಶ್ವಕಪ್ ಗರಿ ಮುಡಿಗೇರಿಸಿಕೊಂಡಿದ್ದಾರೆ.
ಅದ್ಭುತ ವಿದಾಯ
2013ರಲ್ಲಿ ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಗೆಲ್ಲುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ, ತಮ್ಮ ವೃತ್ತಿ ಜೀವನಕ್ಕೆ ವರ್ಣರಂಜಿತ ತೆರೆ ಎಳೆದಿದ್ದಾರೆ. ಈ ವಿಶ್ವಕಪ್ ಪಂದ್ಯಾವಳಿಯಲ್ಲಿ 8 ಪಂದ್ಯಗಳಲ್ಲಿ 148 ರನ್ಗಳಿಸಿದ್ದು, ಬೌಲಿಂಗ್ನಲ್ಲಿ 9 ವಿಕೆಟ್ ಗಳಿಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ 10 ಓವರ್ಗಳನ್ನು ಮಾಡಿ ಕೇವಲ 20 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ವಿಶ್ವಕಪ್ ಜಯಿಸಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಭೂತಪೂರ್ವ ವಿದಾಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


