ಅತ್ತು, ಕರೆದು ಆಜ್ಲಾನ್ ಶಾಗೆ ಭಾರತ

ನವದೆಹಲಿ: ನಾಟಕೀಯ ಬೆಳವಣಿಗೆಯೊಂದರಲ್ಲಿ ಅತ್ತು, ಕರೆದು ಕತೆ ಮಾಡಿದ ಭಾರತ ಹಾಕಿ ತಂಡ, ಅಂತಿಮವಾಗಿ ಮುಂದಿನ ತಿಂಗಳು ನಡೆಯಲಿರುವ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ಧವಾಗಿದೆ. ಮಾರ್ಚ್ 9ರಿಂದ 17ರವರೆಗೆ ಪಂದ್ಯಾವಳಿ ನಡೆಯಲಿದೆ. ಮಾರ್ಚ್ 3ರಂದೇ ತಂಡ ಮಲೇಷ್ಯಾಯಕ್ಕೆ ತೆರಳಲಿದೆ.
ಮಲೇಷ್ಯಾದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಭಾರತ ತಂಡ ತೆರಳಲು ಪ್ರಯಾಣದ ವೆಚ್ಚವನ್ನು ಭರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿರುವುದಾಗಿ ತಿಳಿಸಿತ್ತು. ಆದರೆ, ಈ ಸುದ್ದಿ ತಿಳಿಯುತ್ತಿದ್ದಂತೆ, ಪಂದ್ಯಾವಳಿಗೆ ತೆರಳಲು ತಂಡದ ಪ್ರಯಾಣಕ್ಕೆ ಅಗತ್ಯ ಹಣ ನೀಡುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಸಾಯ್‌ಗೆ ನಿರ್ದೇಶನ ನೀಡಿತು. ಹೀಗಾಗಿ ನಂತರ ಹಾಕಿ ಇಂಡಿಯಾ ಪಂದ್ಯಾವಳಿಗೆ ಭಾರತ ತಂಡವನ್ನು ಕಳಿಸಲು ತೀರ್ಮಾನಿಸಿದೆ. ಇದನ್ನು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಖಚಿತಪಡಿಸಿದ್ದಾರೆ.
ತಂಡದ ವಿಮಾನಯಾನ ವೆಚ್ಚ ಭರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರದ ಡಿಜಿ ಗೋಪಾಲಕೃಷ್ಣ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ಹಾಕಿ ಇಂಡಿಯಾದ ನಂಬಲರ್ಹ ಮೂಲಗಳು ಮಂಗಳವಾರ ಬೆಳಗ್ಗೆ ತಿಳಿಸಿದ್ದವು.
'ನಾವು ನಮ್ಮ ಬಜೆಟ್ ಮಿತಿಯನ್ನು ದಾಟಿದ್ದೇವೆ. ಹಾಗಾಗಿ ಪ್ರಯಾಣದ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಸಾಯ್ ಹೇಳಿದ ನಂತರ, ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಿಂದ ರಾಷ್ಟ್ರೀಯ ತಂಡ ಹಿಂದೆ ಸರಿದಿದೆ. ಭಾರತೀಯ ಕ್ರೀಡಾ ಪ್ರಾಧಿಕಾರವೇ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಟಗಾರರಿಗೆ ಶಿಬಿರ ನಡೆಸಲು ಹೇಳಿತ್ತು. ಆದರೆ, ನಂತರ ಇದ್ದಕ್ಕಿದ್ದಂತೆ ಪ್ರಯಾಣದ ವೆಚ್ಚವನ್ನು ಭರಿಸಲು ನಿರಾಕರಿಸಿತು. ಇದೊಂದು ದುರದೃಷ್ಟಕರ ಸಂಗತಿ. ಇದು ಆಟಗಾರರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಸರ್ಕಾರ ಕೇವಲ ವಿಮಾನ ಪ್ರಯಾಣದ ವೆಚ್ಚವನ್ನು ಮಾತ್ರ ಭರಿಸಲಿದೆ. ವಸತಿ ಮತ್ತು ಊಟ ಸೇರಿದಂತೆ ಉಳಿದ ಖರ್ಚನ್ನು ಪಂದ್ಯಾವಳಿ ಆಯೋಜಕರು ನೋಡಿಕೊಳ್ಳುತ್ತಾರೆ' ಎಂದು ಮೂಲಗಳು ಹೇಳಿದ್ದವು.
ಆದರೆ, ಈಗ ಕ್ರೀಡಾ ಸಚಿವಾಲಯದ ನಿರ್ದೇಶನದಂತೆ 22 ಸದಸ್ಯರ ತಂಡ ಪಂದ್ಯಾಳಿಗೆ ತೆರಳಲು ಅಂದಾಜು ರು. 6ರಿಂದ 7 ಲಕ್ಷ ಪ್ರಯಾಣದ ಟಿಕೆಟ್ ಹಣವನ್ನು ನೀಡಲು ಸಾಯ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಬೆಳಗ್ಗೆ ಆರಂಭವಾದ ನಾಟಕ ಸಂಜೆಗೆ ಅಂತ್ಯಗೊಂಡಿದೆ.
ಆಜ್ಲಾನ್ ಶಾ ಪಂದ್ಯಾವಳಿಯಲ್ಲಿ ಭಾರತ ತಂಡ (1985, 1991, 1995, 2009 ಹಾಗೂ 2010) ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಆದರೆ, ಕಳೆದ ವರ್ಷ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.
ಇದೇ ವರ್ಷ ದೇಶದಲ್ಲಿ ವಿಶ್ವ ಜೂನಿಯರ್ ಹಾಕಿ ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ, ಮಲೇಷ್ಯಾದಲ್ಲಿ ನಡೆಯಲಿರುವ ಆಜ್ಲಾನ್ ಶಾ ಪಂದ್ಯಾವಳಿಗೆ ದನಿಶ್ ಮುಜತಾಬಾ ಅವರ ನಾಯಕತ್ವದ ತಂಡವನ್ನು ಆಯ್ಕೆ ಮಾಡಿದೆ.
ಭಾರತ ಸೇರಿದಂತೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಆತಿಥೇಯ ಮಲೇಷ್ಯಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಮೇಜರ್ ಧ್ಯಾನ್‌ಚಂದ್ ಹಾಕಿ ಸ್ಟೇಡಿಯಂನ ಭದ್ರತೆಯ ಬಗ್ಗೆ ಹಾಕಿ ಇಂಡಿಯಾ ದೂರು ನೀಡಿದ ಒಂದು ದಿನದ ನಂತರವಷ್ಟೇ, ಈ ನಾಟಕೀಯ ಬೆಳವಣಿಗೆ ನಡೆದಿದ್ದು ಅಚ್ಚರಿ ಮೂಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


