ಕರ್ನಾಟಕ ಕ್ವಾರ್ಟರ್‌ಫೈನಲ್‌ಗೆ
ವಿಶಾಖಪಟ್ಟಣ: ಆರಂಭಿಕ ಆಟಗಾರ ಕೆ.ಎಲ್ ರಾಹುಲ್ (ಅಜೇಯ 104) ಅವರ ಅಮೋಘ ಶತಕದೊಂದಿಗೆ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿಯ ಪ್ರಿ ಕ್ವಾರ್ಟರ್‌ಫೈಲ್ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ 7 ವಿಕೆಟ್ ಅಂತರದಿಂದ ಜಯ ಸಾಧಿಸಿತು. ಈ ವಿಜಯದೊಂದಿಗೆ ಕರ್ನಾಟಕ ರಾಷ್ಟ್ರೀಯ ಏಕದಿನ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.
ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಉತ್ತರಪ್ರದೇಶವನ್ನು 194 ರನ್‌ಗಳಿಗೆ ಕಟ್ಟಿ ಹಾಕಿತು.
ಮೂರು ವಿಕೆಟ್ ಪಡೆದ ಎಚ್.ಎಸ್ ಶರತ್ ಮತ್ತು 2 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಕೆ.ಪಿ ಅಪ್ಪಣ್ಣ ಅವರು ಉತ್ತರಪ್ರದೇಶ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಂತರ ಈ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 47.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 197 ರನ್ ಪೇರಿಸುವ ಮೂಲಕ ವಿಜಯದ ನಗೆ ಬೀರಿತು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್ ರಾಹುಲ್ ಶತಕದಲ್ಲಿ ಮೂರು ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳು ಸೇರಿದ್ದವು.
ಅರ್ಧ ಶತಕ ಪೂರೈಸಿದ ಗಣೇಶ್ ಸತೀಶ್ (53) ಅವರೂ ತಂಡ ಜಯ ಸಾಧಿಸಲು ಕಾರಣರಾದರು. ರಾಹುಲ್ ಮತ್ತು ಗಣೇಶ್ ಸತೀಶ್ ಜೋಡಿ ಮೂರನೇ ವಿಕೆಟ್‌ಗೆ 119 ರನ್ ಪೇರಿಸಿತು.
ಗುರುವಾರ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹಾಲಿ ಚಾಂಪಿಯನ್ ಪಶ್ಚಿಮಬಂಗಾಳದ ವಿರುದ್ಧ ಸೆಣಸಲಿದೆ.
ಪಂದ್ಯದಲ್ಲಿ ಉತ್ತರ ಪ್ರದೇಶದ ಪ್ರಮುಖ ಆಟಗಾರರಾದ ನಾಯಕ ಸುರೇಶ್ ರೈನಾ (13), ಹಿರಿಯ ಬ್ಯಾಟ್ಸ್‌ಮನ್ ಮೊಹ್ಮದ್ ಕೈಫ್ (37), 19 ವರ್ಷದೊಳಗಿನ ವಿಶ್ವಕಪ್ ವಿಜೇತ ತಂಡದ ಆಟಗಾರ ಆಕಾಶ್‌ದೀಪ್ ನಾಥ್ (29) ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟಿದ್ದು ಉತ್ತರಪ್ರದೇಶಕ್ಕೆ ದೊಡ್ಡ ಮೊತ್ತ ಕಲೆ ಹಾಕಲು ನೆರವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

