ದ್ವಿತೀಯ ಸುತ್ತಿಗೆ ನಡಾಲ್
ಖ್ಯಾತ ಟೆನಿಸಿಗ ರಾಫೆಲ್ ನಡಾಲ್ ಅವರು ಮೆಕ್ಸಿಕನ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ...

ಅಕಾಪಲ್ಕೋ: ಖ್ಯಾತ ಟೆನಿಸಿಗ ರಾಫೆಲ್ ನಡಾಲ್ ಅವರು ಮೆಕ್ಸಿಕನ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಅರ್ಜೆಂಟೈನಾದ ಡಿಗೋ ಶುವಾರ್ಟ್ಮನ್ ಅವರನ್ನು 6-2, 6-2 ಅಂತರದಲ್ಲಿ ಸೋಲಿಸಿ, ಮುಂದಿನ ಸುತ್ತಿಗೆ ಕಾಲಿಟ್ಟರು.
ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಉತ್ತಮ ಹಿಡಿತವನ್ನು ಪಡೆದ ನಡಾಲ್, ಮೊದಲ ಸೆಟ್ನಲ್ಲಿ ಚುರುಕು ಆಟವನ್ನು ಪ್ರದರ್ಶಿಸಿದರು. ಡಿಗೋ ಅವರು ನಡಾಲ್ ಅವರನ್ನು ಕಟ್ಟಿಹಾಕಲು ಪ್ರಯತ್ನಿಸಿದರಾದರೂ, ಆ ಆಸೆ ಸಾಧ್ಯವಾಗಲಿಲ್ಲ. ಅತ್ತ, ತಮ್ಮ ಚುರುಕಿನ ಆಟವನ್ನು ಮುಂದುವರೆಸಿದ ನಡಾಲ್, ಮೊದಲ ಸೆಟ್ನಲ್ಲಿ 6-2 ಅಂತರದಲ್ಲಿ ಗೆಲುವು ಸಾಧಿಸಿದರು. ಇನ್ನು, ದ್ವಿತೀಯ ಸೆಟ್ನಲ್ಲಿಯೂ ಇದು ಪುನರಾವರ್ತನೆಯಾಯಿತು. ಸೆಟ್ನ ಆರಂಭದಲ್ಲಿ ಡಿಗೋ ಅವರು ಕೊಂಚ ಪ್ರತಿರೋಧ ತೋರಿದರಾದರೂ, ಸೆಟ್ನಲ್ಲಿ ಸಂಪೂರ್ಣವಾಗಿ ನಡಾಲ್ ವಿರುದ್ಧ ಸಮರ ಸಾರಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ, ನಡಾಲ್ ಅನಾಯಾಸವಾಗಿ ದ್ವಿತೀಯ ಸೆಟ್ನಲ್ಲೂ 6-2 ಅಂತರದಲ್ಲಿ ಗೆಲುವು ಸಾಧಿಸಿದರು. ಕೇವಲ ಒಂದು ಗಂಟೆಯ ಅವಧಿಯಲ್ಲಿ ನಡಾಲ್ ಅವರು, ಡಿಗೋ ಅವರನ್ನು ಮಣಿಸಿದ್ದು ವಿಶೇಷವಾಗಿತ್ತು.
ಮಿಂಚುತ್ತಿರುವ ನಡಾಲ್: ಮೊಣಕಾಲು ನೋವಿನ ಚಿಕಿತ್ಸೆಯ ಕಾರಣದಿಂದಾಗಿ, ಸುಮಾರು ಏಳು ತಿಂಗಳುಗಳ ಕಾಲ ವೃತ್ತಿಪರ ಟೆನಿಸ್ನಿಂದ ದೂರ ಉಳಿದಿದ್ದ ನಡಾಲ್, ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ನಲ್ಲಿ ಜಯ ಸಾಧಿಸಿದ್ದರು. ಅದಕ್ಕೂ ಮುನ್ನ ನಡೆದಿದ್ದ ವಿಟಿಆರ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಫೈನಲ್ವರೆಗೂ ಸಾಗಿದ್ದ ನಡಾಲ್, ಅಲ್ಲಿ ಅರ್ಜೆಂಟೈನಾದ ಹೊರಾಸಿಯೋ ಜೆಬಲ್ಲೋಸ್ ಅವರಿಂದ ಸೋಲು ಕಂಡಿದ್ದರು. ಇದಾದ, ಒಂದು ವಾರದಲ್ಲಿ ನಡೆದ ಬ್ರೆಜಿಲ್ ಓಪನ್ನಲ್ಲೂ ಫೈನಲ್ ಪ್ರವೇಶಿಸಿದ್ದ ಅವರು, ಡೇವಿಡ್ ನಲ್ಬಾಂಡಿಯನ್ ಅವರ ವಿರುದ್ಧ ಗೆಲುವು ಸಾಧಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಇದೀಗ, ಮೆಕ್ಸಿಕನ್ ಪಂದ್ಯಾವಳಿಯ ಎರಡನೇ ಸುತ್ತನ್ನು ಪ್ರವೇಶಿಸಿರುವ ಈ ಟೂರ್ನಿಯಲ್ಲಿ 2ನೇ ಶ್ರೇಯಾಂಕದಲ್ಲಿ ನಡಾಲ್ ಇದ್ದಾರೆ. ನಂಬರ್ವನ್ ಸ್ಥಾನದಲ್ಲಿ ಫೆರರ್ ಇದ್ದಾರೆ.
ಇತರ ಫಲಿತಾಂಶಗಳು: ಇನ್ನು, ಪಂದ್ಯಾವಳಿಯ ಮೂರನೇ ಶ್ರೇಯಾಂಕದಲ್ಲಿರುವ ಸ್ಪೇನ್ನ ನಿಕೋಲಸ್ ಆಲ್ಮಾಗ್ರೋ ಅವರು, ಮೆಕ್ಸಿಕೋದ ಸಿಸರ್ ರಮಿರೆಜ್ ಅವರನ್ನು 6-0, 6-1 ಅಂತರದಲ್ಲಿ ಸೋಲಿಸಿದರು.
ಫೆರರ್ಗೂ ಜಯ
ಅತ್ತ, ಫೆರರ್ ಅವರೂ ಮೆಕ್ಸಿಕನ್ ಪಂದ್ಯಾವಳಿಯ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಆಂಟೋನಿನೋ ಅವರನ್ನು 6-0, 6-3 ಅಂತರದಲ್ಲಿ ಸೋಲಿಸಿದರು. ಮೊದಲ ಸುತ್ತಿನ ಪಂದ್ಯ ಕುತೂಹಲ ಕೆರಳಿಸಿತ್ತು. ಆರಂಭದಿಂದಲೂ ಉತ್ತಮವಾದ ಪ್ರದರ್ಶನ ನೀಡಿದ್ದ ಫೆರರ್, ಎದುರಾಳಿಗೆ ಎಲ್ಲೂ ಚಿಗುರು ಅವಕಾಶವನ್ನೇ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ, 6-0 ಅಂತರದಲ್ಲಿ ಫೆರರ್ ಜಯ ಸಾಧಿಸಿದರು. ಇನ್ನು, ದ್ವಿತೀಯ ಸೆಟ್ನಲ್ಲಿ, ಆಂಟೋನಿನೋ ಅವರು ಕೊಂಚ ಬಿರುಸಿನ ಆಟವಾಡಿದರು. ಆದರೆ, ಅವರ ಈ ಆಟ, ಎದುರಾಳಿ ಫೆರರ್ ಅವರ ಮುಂದೆ ನಡೆಯಲಿಲ್ಲ. ಹಾಗಾಗಿ, ಫೆರರ್ ಆ ಸೆಟ್ನಲ್ಲಿ 6-3ರ ಅಂತರದಲ್ಲಿ ಗೆಲುವು ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


