ಪರಿಷ್ಕೃತ ಸಂವಿಧಾನಕ್ಕೆ ಮಾನ್ಯತೆ ನೀಡಿಲ್ಲ: ಎಐಬಿಎ

ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ವತಿಯಿಂದ ನಿಷೇಧಕ್ಕೊಳಗಾಗಿರುವ ಭಾರತೀಯ ಬಾಕ್ಸಿಂಗ್ ಫೆಡರೇಷನ್‌ಗೆ ಮತ್ತೊಂದು ಮುಖಭಂಗ ಉಂಟಾಗಿದೆ. ನಿಷೇಧದ ಅವಧಿಯಲ್ಲೂ ತನ್ನ ಸಂಸ್ಥೆಯ ಸಂವಿಧಾನವನ್ನು ತಿದ್ದುಪಡಿಗೊಳಿಸಿದ್ದು, ಈ ತಿದ್ದುಪಡಿಗೆ ಮಾತೃ ಸಂಸ್ಥೆಯ ಮಾನ್ಯತೆ ಸಿಕ್ಕಿದೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ (ಐಎಬಿಎಫ್) ಇತ್ತೀಚೆಗೆ ಹೇಳಿತ್ತು.
ಆದರೆ, ಐಎಬಿಎಫ್‌ನ ಹೇಳಿಕೆಯನ್ನು ತಳ್ಳಿ ಹಾಕಿರುವ ಎಐಬಿಎ, ಐಎಬಿಎಫ್‌ನ ಪರಿಷ್ಕತ ಸಂವಿಧಾನದ ಕರಡು ಪ್ರತಿಯು ಇನ್ನೂ ಪರಿಶೀಲನಾ ಹಂತದಲ್ಲಿದ್ದು, ಈ ಹಿನ್ನೆಲೆಯಲ್ಲಿ ತಾನು ಯಾವುದೇ ಮಾನ್ಯತೆಯನ್ನು ಐಎಬಿಎಫ್‌ಗೆ ನೀಡಿಲ್ಲ ಎಂದು ಹೇಳಿದೆ. ಅಲ್ಲದೇ, ಇಂಥ ವಿಷಯಗಳಲ್ಲಿ ಇನ್ನೊಮ್ಮೆ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ, ಐಎಬಿಎಫ್‌ಗೆ ಹೇರಿರುವ ನಿಷೇಧದ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ವಿಷಯವಾಗಿ ಹೇಳಿಕೆ ನೀಡಿರುವ ಎಐಬಿಎ ಅಧ್ಯಕ್ಷ ಚಿಂಗ್ ಕುವೋ, 'ಐಎಬಿಎಫ್ ವತಿಯಿಂದ ಬಂದಿರುವ ಸಂವಿಧಾನ ತಿದ್ದುಪಡಿಯನ್ನು ಎಐಬಿಎ ಚುನಾವಣಾ ಆಯೋಗದ ಸದಸ್ಯರಾದ ಕಿಶನ್ ನಾರ್ಸಿ ಅವರಿಗೆ ಫೆ. 11ರಂದು ತಲುಪಿಸಲಾಗಿದೆ. ಕರಡು ಪ್ರತಿಯ ಪರಿಶೀಲನೆಯು ಇನ್ನೂ ಜಾರಿಯಲ್ಲಿದ್ದು, ಈಗಲೇ ಐಎಬಿಎಫ್ ಮಾಡಿರುವ ಯಾವುದೇ ಸಂವಿಧಾನ ತಿದ್ದುಪಡಿಗೆ ಯಾವುದೇ ಮಾನ್ಯತೆಯನ್ನು ನೀಡಲಾಗುವುದಿಲ್ಲ' ಎಂದು ತಿಳಿಸಿದರು. ಅಲ್ಲದೇ, ಸಂವಿಧಾನವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಐಎಬಿಎಫ್ ಜೊತೆಗೆ ಎಐಬಿಎ ಮಾತುಕತೆ ನಡೆಸಲಿದೆ. ಹಲವು ಸುತ್ತಿನ ಮಾತುಕತೆಗಳ ಬಳಿಕವಷ್ಟೇ ಒಂದು ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಮಾತುಕತೆ ಸಂದರ್ಭದಲ್ಲಿ ಚರ್ಚಿಸಲಾದಂತೆ, ಪರಿಷ್ಕೃತ ಸಂವಿಧಾನದಲ್ಲಿ ಹಲವಾರು ಬದಲಾವಣೆಗಳನ್ನೂ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಮುಗಿದ ಮೇಲಷ್ಟೇ, ಐಎಬಿಎಫ್‌ನ ಪರಿಷ್ಕತ ಸಂವಿಧಾನಕ್ಕೆ ಮಾನ್ಯತೆ ನೀಡಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.
ಹಿನ್ನೆಲೆ: ಕೆಲ ದಿನಗಳ ಹಿಂದಷ್ಟೇ ಐಎಬಿಎಫ್, ತಾನು ಪರಿಷ್ಕರಿಸಿರುವ ಸಂಸ್ಥೆಯ ಸಂವಿಧಾನಕ್ಕೆ ಎಐಬಿಎ ವತಿಯಿಂದ ಮಾನ್ಯತೆ ಸಿಕ್ಕಿದೆ ಎಂದು ಐಎಬಿಎಫ್ ಹೇಳಿತ್ತು. ಐಎಬಿಎಫ್‌ನ ಮಹಾ ಕಾರ್ಯದರ್ಶಿ ರಾಜೇಶ್ ಭಂಡಾರಿ ಅವರು, ಈ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಎಐಬಿಎ ಅಧ್ಯಕ್ಷ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


