ಹೊಬಾರ್ಟ್: ಅಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಆರನೇ ಹಾಗೂ ಅಂತಿಮ ಏಕದಿನ ಪಂದ್ಯವು ಬುಧವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಆಸೀಸ್ ತಂಡದ ನಾಯಕ ಮೈಕಲ್ ಕ್ಲಾರ್ಕ್ ಆಡುವುದು ಅನುಮಾನವಾಗಿದೆ. ಕ್ಲಾರ್ಕ್ ಅವರ ಹಿಮ್ಮಡಿ ಉಳುಕಿರುವ ಕಾರಣ ಗಾಯದ ಸಮಸ್ಯೆಗೆ ಒಳಗಾಗಿದ್ದು, ಪಂದ್ಯದ ವೇಳೆಗೆ ಅವರು ಗುಣಮುಖರಾಗುವ ಸಾಧ್ಯತೆಗಳು ಕಡಿಮೆ ಇದೆ. ಕ್ಲಾರ್ಕ್ ಅವರು ಚಿಕಿತ್ಸೆಗೆ ಒಳಗಾಗಿದ್ದು, ಮಂಗಳವಾರ ಅವರ ಫಿಟ್ನೆಸ್ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈ ಸರಣಿಯಲ್ಲಿ ಶ್ರೀಲಂಕಾ ತಂಡ 2-1ರ ಮುನ್ನಡೆ ಸಾಧಿಸಿದ್ದು, ಮೂರನೇ ಪಂದ್ಯವನ್ನು ಗೆದ್ದು ಸರಣಿ ಬಾಚಿಕೊಳ್ಳುವ ಕಾತುರದಲ್ಲಿದೆ.