ಮೆಲ್ಬರ್ನ್: ಖ್ಯಾತ ಟೆನಿಸಿಗ ಆ್ಯಂಡಿ ಮರ್ರೆ ಅವರು ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಉಪಾಂತ್ಯ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಜೆರೆಮಿ ಚಾರ್ಡಿ ಅವರ ವಿರುದ್ಧ 6-4, 6-1, 6-2 ಅಂತರದಲ್ಲಿ ಜಯ ಸಾಧಿಸಿ, ಸೆಮಿಫೈನಲ್ಗೆ ಲಗ್ಗೆಯಿಟ್ಟರು.
ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ಒಂದು ಗಂಟೆ, ಹದಿನೈದು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮರ್ರೆ ಅವರು, ಚಾರ್ಡಿ ಅವರ ಪ್ರಶಸ್ತಿ ಗೆಲ್ಲುವ ಕನಸನ್ನು ಭಗ್ನಗೊಳಿಸಿದರು. ಇದೀಗ ಸೆಮಿಫೈನಲ್ಗೆ ಕಾಲಿಟ್ಟಿರುವ ಅವರು ಅಲ್ಲಿ ಸೋಂಗಾ ಅವರನ್ನು ಎದುರಿಸಲಿದ್ದಾರೆ.
ಕಳೆದ ವರ್ಷದ ಸೆಪ್ಟಂಬರ್ನಿಂದೀಚೆಗೆ ತಾವು ಆಡಿರುವ ಎಲ್ಲಾ ಮಹತ್ತರ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನವನ್ನು ಮರ್ರೆ ನೀಡಿದ್ದಾರೆ. ಇದೀಗ, ಆಸ್ಟ್ರೇಲಿಯನ್ ಓಪನ್ನ ಸೆಮಿಫೈನಲ್ಗೆ ಕಾಲಿಟ್ಟಿರುವ ಅವರು ಗ್ರಾಂಡ್ ಸ್ಲಾಂ ಪಂದ್ಯಗಳಲ್ಲಿ ಒಟ್ಟು 12 ಬಾರಿ ಸೆಮಿಫೈನಲ್ಗೆ ಕಾಲಿಟ್ಟಿರುವ ಸಾಧನೆ ಮಾಡಿದ್ದಾರೆ.