ಮೆಲ್ಬರ್ನ್: ಈ ಬಾರಿಯ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾರತದ ರೋಹನ್ ಬೋಪಣ್ಣ ಅವರ ಮಿಶ್ರ ಡಬಲ್ಸ್ನಲ್ಲಿ ಅಭಿಯಾನ ಅಂತ್ಯಗೊಂಡಿದೆ. ಮಂಗಳವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಹಾಗೂ ಅವರ ಚೀನಾ ತೈಪೈ ಜೊತೆಗಾತಿ ಸು- ವೈ, ಚೆಕ್- ಪೋಲೆಂಡ್ ಜೋಡಿಯಾದ ಕ್ವೇಟಾ ಪೆಚಕೆ ಹಾಗೂ ಮಾರ್ಸಿನ್ ಮಾಟ್ಕೊಸ್ಕಿ ಜೋಡಿ ವಿರುದ್ಧ 2-6, 3-6 ಅಂತರದಲ್ಲಿ ಪರಾಭವ ಹೊಂದಿದರು. 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಚೆಕ್- ಪೋಲೆಂಡ್ ಜೋಡಿ ರಾರಾಜಿಸಿತು. ಆರಂಭದಿಂದ ಅಂತ್ಯದವರೆಗೂ ರೋಹನ್- ಸು ವೈ ಜೋಡಿ ಮೇಲೆ ಹಿಡಿತ ಸಾಧಿಸಿದ ಅವರಿಬ್ಬರೂ ಮೊದಲಸೆಟ್ನಲ್ಲಿ ಸುಲಭ ಜಯ ಸಂಪಾದಿಸಿದರು. ಆನಂತರ, ದ್ವಿತೀಯ ಸೆಟ್ನ ಆರಂಭದಲ್ಲಿ ರೋಹನ್ ಹಾಗೂ ಸು ವೈ ಇಬ್ಬರೂ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ, ಎದುರಾಳಿಗಳ ಮಿಂಚಿನ ಆಟದ ಮುಂದೆ ಇವರ ಪ್ರಯತ್ನಗಳು ಫಲ ನೀಡಲಿಲ್ಲ. ಈ ಸೆಟ್ನಲ್ಲೂ ಕ್ವೇಟಾಪೆಚಾಕೆ ಹಾಗೂ ಮಾರ್ಸಿನ್ ಜೋಡಿಯ ಕೈ ಮೇಲಾಯಿತು. 6-3ರ ಅಂತರದಲ್ಲಿ ಚೆಕ್-ಪೊಲೆಂಡ್ ಜೋಡಿ ಎದುರು ರೋಹನ್-ಸು ವೈ ಜೋಡಿ ಸೋಲು ಕಾಣುವ ಮೂಲಕ ಪಂದ್ಯದಲ್ಲೂ ಪರಾಭವಗೊಂಡಿತು.