ರಣಜಿ: ಮುಂಬೈ ಮಣಿಸುವುದೇ ಸೌರಾಷ್ಟ್ರ?

Updated on: 

ಮುಂಬೈ: ರಣಜಿ ಟ್ರೋಫಿ ಇತಿಹಾಸದಲ್ಲಿ ಪಾರಮ್ಯ ಮೆರೆದಿರುವ ಮುಂಬೈ ತಂಡ ಶನಿವಾರದಿಂದ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವನ್ನು ಎದುರಿಸಲಿದೆ. ತವರಿನ ಅಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರನನ್ನು ಹೊಂದಿರುವ ಮುಂಬೈ ವಿರುದ್ಧ, ಸೌರಾಷ್ಟ್ರ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅನುಭವಿಗಳಾದ ಸಚಿನ್ ತೆಂಡೂಲ್ಕರ್, ನಾಯಕ ಅಜಿತ್ ಅಗರ್ಕರ್ ಹಾಗೂ ವಾಸೀಂ ಜಾಫರ್ ಅವರೊಂದಿಗೆ ಮುಂಬೈ ತಂಡ ಆಲ್ರೌಂಡರ್ ಅಭಿಷೇಕ್ ನಾಯರ್ ಮತ್ತು ವಿಕೆಟ್ ಕೀಪರ್ ಆದಿತ್ಯ ತಾರೆ ಅವರಂತಹ ಉತ್ತಮ ಆಟಗಾರರನ್ನು ಹೊಂದಿದೆ. ಹೀಗಾಗಿ 39 ಬಾರಿ ಚಾಂಪಿಯನ್ ಎನಿಸಿರುವ ಮುಂಬೈ ಪಂದ್ಯ ಗೆಲ್ಲುವ ಫೆವರಿಟ್ ತಂಡ ಎನಿಸಿದೆ.
ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಸೌರಾಷ್ಟ್ರ ತಂಡ ಅನುಭವಿ ಮುಂಬೈ ತಂಡದ ವಿರುದ್ಧ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ. ಐದು ದಿನಗಳ ಪಂದ್ಯದ ಪಿಚ್, ಆರಂಭದಲ್ಲಿಯಾದರೂ ವೇಗದ ಬೌಲರ್ಗಳಿಗೆ ಅನುಕೂಲಕರವಾಗಿರಲಿದೆ ಎನ್ನಲಾಗಿದೆ.
ಅತಿಥೇಯ ಮುಂಬೈ ತಂಡ ಇದುವರೆಗೂ 43 ಬಾರಿ ಫೈನಲ್ ಪ್ರವೇಶಿಸಿದ್ದು, ಕೇವಲ ನಾಲ್ಕು ಬಾರಿ ಮಾತ್ರ ಕೈಚೆಲ್ಲಿದೆ.
ಇನ್ನು ತವರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 87 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ್ದ ಸೌರಾಷ್ಟ್ರ ತಂಡದ ಪರ ಜಯದೇವ್ ಶಾ, ಮುಂಬೈ ವಿರುದ್ಧ ಪ್ರಮುಖ ಬ್ಯಾಟ್ಸ್ಮನ್ ಎನಿಸಿದ್ದಾರೆ.
ಅಲ್ಲದೇ ಕಳೆದ ಡಿಸೆಂಬರ್ನಲ್ಲಿ ರಾಜ್ಕೋಟ್ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಮುಂಬೈ ತಂಡ ಮೊದಲ ಇನಿಂಗ್ಸ್ನಲ್ಲಿ 600 ರನ್ಗಳ ಬೃಹತ್ ಮೊತ್ತ ಪೇರಿಸಿ ನಂತರ, ಎದುರಾಳಿಯನ್ನು 300 ರನ್ಗಳಿಗೆ ಆಲೌಟ್ ಮಾಡಿತ್ತು. ಇದನ್ನು ಸೌರಾಷ್ಟ್ರ ಇನ್ನು ನೆನಪಿನಲ್ಲಿಟ್ಟುಕೊಂಡಿದೆ.
ಫೈನಲ್ನಲ್ಲಿ ಉಭಯ ತಂಡಗಳಿಗೂ ತಮ್ಮ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ಸೌರಾಷ್ಟ್ರದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಮತ್ತು ಆಲ್ರೌಂಡರ್ ರವಿಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿದ್ದಾರೆ. ಇನ್ನು ಮುಂಬೈ ತಂಡದ ರೋಹಿತ್ ಶರ್ಮಾ, ರಹಾನೆ ಅವರು ರಾಷ್ಟ್ರೀಯ ತಂಡದಲ್ಲಿದ್ದಾರೆ. ಮುಂಬೈ 40ನೇ ಬಾರಿ ಚಾಂಪಿಯನ್ ಪಟ್ಟ ಧರಸಿಲು ಎದುರು ನೋಡುತ್ತಿದ್ದರೆ, ಸೌರಾಷ್ಟ್ರ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿರುವುದು ಪಂದ್ಯಕ್ಕೆ ಹೆಚ್ಚು ಮಹತ್ವ ತಂದುಕೊಟ್ಟಿದೆ.

 ತಂಡಗಳು
ಮುಂಬೈ:
ಅಜಿತ್ ಅಗರ್ಕರ್ (ನಾಯಕ), ಸಚಿನ್ ತೆಂಡೂಲ್ಕರ್, ವಾಸೀಂ ಜಾಫರ್, ಸೂರ್ಯಕುಮಾರ್ ಯಾದವ್, ಧವಳ್ ಕುಲಕರ್ಣಿ, ಕೌಸ್ತುಭ್ ಪವಾರ್, ಅಭಿಷೇಕ್ ನಾಯರ್, ಹಿಕನ್ ಶಾ, ಆದಿತ್ಯ ತಾರೆ, ಅಂಕಿತ್ ಚೌಹಣ್, ನಿಕಿಲ್ ಪಾಟೀಲ್ (ಜೂನಿಯರ್), ಜಾವೇದ್ ಖಾನ್, ಸುಶಾಂತ್ ಮರಾಠೆ, ಶಾರ್ದೂಲ್ ಠಾಕೂರ್ ಹಾಗೂ ವಿಶಾಲ್ ದಭೂಲ್ಕರ್.
ಸೌರಾಷ್ಟ್ರ: ಜಯದೇವ್ ಶಾ (ನಾಯಕ), ಸಾಗರ್ ಜೋಗಿಯಾನಿ, ಸೀತಾನ್ಷು ಕೋಟಕ್, ಶೆಲ್ಡಾನ್ ಜಾಕ್ಸನ್, ಅರ್ಪಿತ್ ವಾಸವದಾ, ರಾಹುಲ್ ದೇವ್, ಕಲ್ಮೇಶ್ ಮಕ್ವಾನಾ, ಚಿರಾಗ್ ಪಾಠಕ್, ಸಿದ್ಧಾರ್ಥ್ ತ್ರಿವೇದಿ, ಜಯದೇವ್ ಉನಾದಕತ್, ವಿಶಾಲ್ ಜೋಶಿ, ಧರ್ಮೇಂದ್ರ ಜಡೇಜಾ, ಸಂದೀಪ್ ಮಾನಿಯಾರ್, ಸೂರ್ಯ ಸನಾಂಧಿಯಾ ಹಾಗೂ ಹರ್ಷಾ ಅಂಘಾನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com