ಲಖ್ನೊ: ಮನದೀಪ್ ಸಿಂಗ್ ದಾಖಲಿಸಿದ ಎರಡು ಗೋಲುಗಳ ನೆರವಿನಿಂದಾಗಿ ರಾಂಚಿ ರೈನೋಸ್ ತಂಡ, ಶನಿವಾರ ನಡೆದ ಎಚ್‌ಐಎಲ್ ಹಾಕಿ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು 3-1 ಅಂತರದಲ್ಲಿ ಸೋಲಿಸಿದರು. ಮೊದಲಾರ್ಧದ ಅಂತ್ಯದಲ್ಲಿ ಒಂದರ ಹಿಂದೊಂದರಂತೆ ಮನದೀಪ್ ಸಿಂಗ್ ಬಾರಿಸಿದ ಎರಡು ಗೋಲುಗಳು ರಾಂಚಿ ತಂಡಕ್ಕೆ 2-0ಯ ಮುನ್ನಡೆಯನ್ನು ತಂದುಕೊಟ್ಟಿದ್ದವು. ಆನಂತರ, ರಾಂಚಿ ತಂಡದ ಜೆರೋನ್ ಹರ್ಟ್ಸ್‌ಬರ್ಗ್‌ರ್ ಅವರು ಮತ್ತೊಂದು ಗೋಲು ಗಳಿಸಿಕೊಟ್ಟರು.
ರಾಂಚಿ ಗಳಿಸಿದ 2-0 ಅಂತರವನ್ನು ಕಡಿಮೆ ಮಾಡಿಕೊಳ್ಳಲು ಉತ್ತರ ಪ್ರದೇಶ ತಂಡ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ. ಪಂದ್ಯದ ಅಂತಿಮ ನಿಮಿಷದಲ್ಲಿ ತರುಣ್‌ದೀಪ್ ಸಿಂಗ್ ಅವರು ಬಾರಿಸಿದ ಗೋಲು ಆ ತಂಡದ ಗೋಲಿನ ಖಾತೆಯನ್ನು ತೆರೆಯಿತಾದರೂ, ತಂಡಕ್ಕೆ ಗೆಲುವು ತಂದುಕೊಡಲಿಲ್ಲ.