ಮೈಸೂರು: ಗೋಲ್ ಕೀಪರ್ ರೋಹಿಣಿ ಅವರ ಉತ್ತಮ ಗೋಲ್ಕೀಪಿಂಗ್ನಿಂದಾಗಿ ನಗರದ ಡಿವೈಎಸ್ಎಸ್ ತಂಡ, ಭಾನುವಾರ ಇಲ್ಲಿ ನಡೆದ ಧ್ಯಾನ್ಚಂದ್ ರಾಷ್ಟ್ರೀಯ ಆಹ್ವಾನಿತ ಮಹಿಳೆಯರ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇಲ್ಲಿನ ವಿವಿ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭೋಪಾಲ್ನ ಸಾಯ್ ಸ್ಪೋರ್ಟ್ಸ್ ತಂಡದ ವಿರುದ್ಧ ಡಿವೈಎಸ್ಎಸ್ ತಂಡ 6-5 ಗೋಲುಗಳ ರೋಚಕ ಜಯ ಸಾಧಿಸಿತು.
ಪಂದ್ಯದ ಆರಂಭದಿಂದಲೂ ಸಮಬಲ ಹೋರಾಟ ತೋರಿದ್ದ ಇತ್ತಂಡಗಳು ತಲಾ 5 ಗೋಲು ಗಳಿಸಿದ್ದವು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ಭೋಪಾಲ್ ಸಾಯ್ ತಂಡದ ಆಟಗಾರರ ಒಂದರ ಹಿಂದೊಂದರಂತೆ ಐದು ಗೋಲುಗಳನ್ನು ಗಳಿಸುವ ಪ್ರಯತ್ನ ಮಾಡಿದರು. ಆದರೆ, ಡಿವೈಎಸ್ಎಸ್ನ ಗೋಲ್ ಕೀಪರ್ ರೋಹಿಣಿ ಅವರ ಸಮಯಪ್ರಜ್ಞೆಯಿಂದಾಗಿ ಈ ಎಲ್ಲಾ ಪ್ರಯತ್ನಗಳು ವಿಫಲವಾದವು.
ನಂತರ, ಡಿವೈಎಸ್ಎಸ್ ವತಿಯಿಂದ 6ನೇ ಗೋಲು ದಾಖಲಾಯಿತು. ಆದರೆ, ಎದುರಾಳಿ ತಂಡದಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ, ಪಂದ್ಯದಲ್ಲಿ ಡಿವೈಎಸ್ಎಸ್ ಜಯ ಸಾಧಿಸಿತು.