ರಾಂಚಿ: ಹಾಕಿ ಇಂಡಿಯಾ ಲೀಗ್ (ಎಚ್ಐಎಲ್)ನ ಅಂಕಪಟ್ಟಿಯಲ್ಲಿ ಟಾಪ್ 4ರೊಳಗೆ ಕಾಣಿಸಿಕೊಳ್ಳುವ ಕುರಿತಂತೆ ಮುಂಬೈ ಮ್ಯಾಜಿಷಿಯನ್ಸ್ ಕಾಣುತ್ತಿದ್ದ ಕನಸು ಭಾಗಶಃ ಭಗ್ನಗೊಂಡಿದೆ.
ಸೋಮವಾರ ಇಲ್ಲಿನ ಆಸ್ಟ್ರೋ ಟರ್ಫ್ ಕ್ರೀಡಾಂಗಣದಲ್ಲಿ ನಡೆದ ಎಚ್ಐಎಲ್ ಪಂದ್ಯದಲ್ಲಿ ರಾಂಚಿ ರೈನೋಸ್ ತಂಡ ಮುಂಬೈ ಮ್ಯಾಜಿಷಿಯನ್ಸ್ ತಂಡವನ್ನು 2-1 ಅಂತರದಲ್ಲಿ ಪರಾಭವಗೊಳಿಸಿತು.
ಆಶ್ಲೆ ಜಾಕ್ಸನ್ ಹಾಗೂ ಮನದೀಪ್ ಸಿಂಗ್ ಗಳಿಸಿಕೊಟ್ಟ ಎರಡು ಗೋಲುಗಳು ರಾಂಚಿ ತಂಡದ ಗೆಲುವಿಗೆ ಕಾರಣವಾದವು. ಮುಂಬೈ ಮ್ಯಾಜಿಷಿಯನ್ಸ್ ಪರವಾಗಿ ಸಂದೀಪ್ ಸಿಂಗ್ ಒಂದು ಗಳಿಸಿದರು.
ಈ ಪಂದ್ಯದ ಜಯದಿಂದ ಒಟ್ಟು 27 ಅಂಕಗಳನ್ನು ಗಳಿಸಿಕೊಂಡಿರುವ ರಾಂಚಿ ರೈನೋಸ್, ಅಂಕಪಟ್ಟಿಯಲ್ಲಿ ಡೆಲ್ಲಿ ತಂಡದ ಜೊತೆಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ. ಅತ್ತ, ಮ್ಯಾಜಿಷಿಯನ್ಸ್ಗೆ ಇದು ಸತತ ಏಳನೇ ಸೋಲಾಗಿದೆ.
ಪಂದ್ಯದ ಮೊದಲ ನಿಮಿಷದಲ್ಲೇ ಸಂದೀಪ್ ಸಿಂಗ್ ಅವರು ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಮುಂಬೈ ತಂಡಕ್ಕೆ ಗೋಲು ಗಳಿಸಿಕೊಟ್ಟರು. ಆದರೆ, 10ನೇ ನಿಮಿಷದಲ್ಲಿ ತಮಗೆ ಒದಗಿದ್ದ ಪೆನಾಲ್ಟಿ ಕಾರ್ನರ್ ಅನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂಬೈ ಎಡವಿತು. ನಂತರ, ಪಂದ್ಯದ 14ನೇ ಹಾಗೂ 16ನೇ ನಿಮಿಷದಲ್ಲಿ ಮುಂಬೈ ತಂಡದ ಪರವಾಗಿ ಎರಡು ಗೋಲುಗಳು ದಾಖಲಾದವು.