ಮುಂಬೈ: ಮಹಿಳೆಯರ ವಿಶ್ವಕಪ್ ಹಿನ್ನೆಲೆಯಲ್ಲಿ, ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಮಹಿಳೆಯರ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್, 13 ರನ್‌ಗಳಿಂದ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್, 48.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 210 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಸಾಧಾರಣ ಮೊತ್ತ: ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡ, ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆದರೆ, ಕಿವೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೇವಲ 30 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಜೋಡಿ ದೂಲನ್, ಬೇಟ್ಸ್ ಬೇರ್ಪಟ್ಟಿತು. 8ನೇ ಓವರ್‌ನಲ್ಲಿ ಬೇಟ್ಸ್ ಅವರು ಔಟಾಗುವದರೊಂದಿಗೆ ನ್ಯೂಜಿಲೆಂಡ್‌ನ ಮೊದಲ ವಿಕೆಟ್ ಪತನಗೊಂಡಿತು. ಆದರೆ, ನಂತರ ಜವಾಬ್ದಾರಿಯುತ ಆಟವಾಡಿದ ದೂಲನ್ ಅವರು, ಶತಕಾರ್ಧ ಗಳಿಸಿ, ಇನಿಂಗ್ಸ್‌ಗೆ ಕೊಂಚ ಶಕ್ತಿ ತುಂಬಿದರು. ಅವರ ನಂತರ ಮಧ್ಯಮ ಕ್ರಮಾಂಕದ ಮ್ಯಾಕ್‌ಗ್ಲೆಶಾನ್ ಅವರು ವೈಯಕ್ತಿಕವಾಗಿ 88 ರನ್ ಗಳಿಸಿ, ನ್ಯೂಜಿಲೆಂಡ್ ತಂಡಕ್ಕೆ ಮತ್ತಷ್ಟು ಬಲ ತುಂಬಿದರು. ಅವರೊಂದಿಗೆ ಕೈ ಜೋಡಿಸಿದ ಬ್ರೌನೀ ಅವರು 40 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಒಂದೆಡೆ ವಿಕೆಟ್‌ಗಳನ್ನು ನಿರಂತರವಾಗಿ ಕಳೆದುಕೊಳ್ಳುತ್ತಾ ಸಾಗಿದರೂ, ಈ ಮೂವರೂ ತಂಡವನ್ನು ಕೈ ಹಿಡಿದರು. ಹಾಗಾಗಿ, ನಿಗದಿತ 50 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡರೂ, 223 ರನ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಕುಸಿದ ಆಂಗ್ಲರು: ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಇಂಗ್ಲೆಂಡ್, ತನ್ನ ಇನಿಂಗ್ಸ್ ಅನ್ನು ಉತ್ತಮವಾಗಿ ಆರಂಭಿಸಲಿಲ್ಲ. ಮೊದಲ ವಿಕೆಟ್‌ಗೆ ಕೇವಲ 10 ರನ್ ಸೇರಿಸಿದ ಆರಂಭಿಕರಾದ ಎಡ್ವರ್ಡ್ಸ್ ಹಾಗೂ ನೈಟ್ ಜೋಡಿ, ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಬೇರ್ಪಟ್ಟಿತು. ಹೀಗೆ, ಆರಂಭದಲ್ಲೇ ಎಡವಿದ ಇಂಗ್ಲೆಂಡ್‌ಗೆ ಮೂರನೇ ಕ್ರಮಾಂಕದ ಸಹಾ ಟೇಲರ್ ಹಾಗೂ ಲಿಡಿಯಾ ಗ್ರೀನ್‌ವೇ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 87 ರನ್ ಸೇರಿಸಿತು. ಆದರೆ, 29ನೇ ಓವರ್‌ನಲ್ಲಿ ಟೇಲರ್ ಔಟಾಗುವ ಮೂಲಕ ಈ ಜೋಡಿ ಮುರಿಯಿತು. ಟೇಲರ್ ಹಿಂದೆಯೇ ಗ್ರೀನ್‌ವೇ ಸಹ ಪೆವಿಲಿಯನ್‌ಗೆ ಮರಳಿದರು.
ಆನಂತರ, ಇಂಗ್ಲೆಂಡ್ ತಂಡದ ಇನಿಂಗ್ಸ್ ಕುಸಿಯುತ್ತಾ ಸಾಗಿತು. ನಿಗದಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ ಪರವಾಗಿ ಜೆನ್ರಿ (35) ಹಾಗೂ ಟ್ಯಾಮಿ ಬ್ಯೂ ಮೌಂಟ್ (22) ನಡೆಸಿದ ಹೋರಾಟ ಫಲ ನೀಡಲಿಲ್ಲ.
ಅಂತಿಮವಾಗಿ, ಇಂಗ್ಲೆಂಡ್ 48.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 210 ರನ್ ಮಾತ್ರ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 223 (50 ಓವರ್)
ಮೆಕ್‌ಗ್ಲಶಾನ್ 88 (90), ಡೂಲನ್ 57 (77)
ಬೌಲರ್: ಹಾಜೆಲ್ 41/5, ಜೆನ್ರಿ ಗನ್ 24/1
ಇಂಗ್ಲೆಂಡ್: 210 (48.2 ಓವರ್)
ಗ್ರೀನ್‌ವೇ 55 (82), ಗನ್ 35 (34)
ಬೌಲಿಂಗ್: ಬೇಟ್ಸ್ 26/2, ಕ್ಯಾಂಡಿ 30/2