ಆಸೀಸ್‌ಗೆ ಗೆಲವು ತಂದ ಜೂಡಿ

ಮಹಿಳಾ ವಿಶ್ವಕಪ್ ಅಭ್ಯಾಸ ಪಂದ್ಯ: ಭಾರತಕ್ಕೆ 5 ವಿಕೆಟ್‌ಗಳ ಪರಾಭವ
ಆಸೀಸ್‌ಗೆ ಗೆಲವು ತಂದ ಜೂಡಿ
Updated on: 

ಮುಂಬೈ: ನಾಯಕಿ ಜೂಡಿ ಫೀಲ್ಡ್ಸ್ ಅವರ ಶತಕಾರ್ಧದ ನೆರವಿನಿಂದಾಗಿ, ಆಸ್ಟ್ರೇಲಿಯಾ ತಂಡ, ಮಂಗಳವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ  ಮಹಿಳೆಯರ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಭಾರತ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 222 ರನ್ ಗಳಿಸಿತ್ತು. ಈ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 38.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿ, ಜಯದ ನಗೆ ಬೀರಿತು.
ಸಾಧಾರಣ ಮೊತ್ತ: ಟಾಸ್ ಗೆದ್ದಿದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ್ತಿಯರಾದ ಪೂನಮ್ ರಾವುತ್ ಹಾಗೂ ತಿರುಷ್ ಕಾಮಿನಿ ಇಬ್ಬರೂ ಮೊದಲ ವಿಕೆಟ್‌ಗೆ 47 ರನ್ ಪೇರಿಸಿ, ಉತ್ತಮ ಆರಂಭ ನೀಡಿದರಾದರೂ, ಗಟ್ಟಿಯಾದ ಅಡಿಪಾಯ ಹಾಕುವಲ್ಲಿ ಇವರಿಬ್ಬರಿಗೆ ಸಾಧ್ಯವಾಗಲಿಲ್ಲ.
8ನೇ ಓವರ್‌ನಲ್ಲಿ ಕಾಮಿನಿ (30) ಅವರು ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಮುರಿಯಿತು. ಆಸೀಸ್‌ನ ಮೆಗಾನ್ ಶುಟ್ ಅವರು ಇವರ ವಿಕೆಟ್ ಪಡೆದರು. ಆಗ ಕ್ರೀಸ್‌ಗೆ ಆಗಮಿಸಿದ್ದು ಮೂರನೇ ಕ್ರಮಾಂಕದ ಆಟಗಾರ್ತಿ ಮೋನಾ ಮೇಶ್ರಾಮ್.
ಇವರು ಹಾಗೂ ರಾವುತ್ ಇಬ್ಬರೂ 2ನೇ ವಿಕೆಟ್‌ಗೆ 54 ರನ್ ಸೇರಿಸಿತು.
ಇನಿಂಗ್ಸ್‌ನ 22ನೇ ಓವರ್‌ನಲ್ಲಿ ಸರಾ ಕಾಯ್ಟ್ ಅವರ ಎಸೆತದಲ್ಲಿ ಎಲಿಸ್ ವಿಲಾನಿ ಅವರಿಗೆ ಕ್ಯಾಚ್ ನೀಡಿದ ರಾವುತ್ (31) ಹೊರನಡೆದರು. ಆಗ ತಂಡದ ಮೊತ್ತ 101 ರನ್.
ರಾವುತ್ ಔಟಾದ ಮೇಲೆ ಅವರ ಜಾಗಕ್ಕೆ ಬಂದಿದ್ದು ನಾಲ್ಕನೇ ಕ್ರಮಾಂಕದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್. ಮೋನಾ- ಕೌರ್ ಜೋಡಿ, ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. 23ನೇ ಓವರ್‌ನಲ್ಲಿ ಲೀಸಾ ಸ್ತಾಲೇಕರ್ ಅವರ ಬೌಲಿಂಗ್‌ನಲ್ಲಿ ಮೋನಾ (25) ಅವರು ಲ್ಯಾನಿಂಗ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ತಂಡದ ಮೊತ್ತಕ್ಕೆ ಕನಿಷ್ಟ ಒಂದು ರನ್ ಕೂಡಾ ಸೇರಿಸಿದೇ ಮೋನಾ- ಕಾರ್ ಜೋಡಿ ಈ ರೀತಿ ಮುರಿದುಬಿತ್ತು.
ಮೋನಾ ಔಟಾದ ಮೇಲೆ ಬಂದಿದ್ದು ಕರೂ ಜೈನ್. ಆದರೆ, ಇವರೂ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೋನಾ ಅವರು ಔಟಾದ ಮರು ಎಸೆತದಲ್ಲೇ ಕರೂ ಜೈನ್ (0) ಅವರು ಸ್ಟಾಲೇಕರ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಒಳಗಾಗಿ ಪೆವಿಲಿಯನ್ ಸೇರಿಕೊಂಡರು.
ಹೀಗೆ, 101 ರನ್ ಮೊತ್ತಕ್ಕೆ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕರೂ ಜೈನ್ ಔಟಾದ ಮೇಲೆ ಕ್ರೀಸ್‌ಗೆ ಆಗಮಿಸಿದ್ದ ರೀಮಾ ಮಲ್ಹೋತ್ರಾ, ಹರ್ಮನ್ ಪ್ರೀತ್ ಕೌರ್ ಜೊತೆಗೂಡಿ, ತಂಡದ ಮೊತ್ತಕ್ಕೆ ನಾಲ್ಕು ರನ್ ಸೇರಿಸುವ ಹೊತ್ತಿಗೆ ಕೌರ್ ಔಟಾದರು. ರಿನೀ ಚಾಪೆಲ್ ಬೌಲಿಂಗ್‌ನಲ್ಲಿ ಕ್ಯಾಮೆರೂನ್‌ಗೆ ಕ್ಯಾಚ್ ನೀಡಿದ ಕೌರ್ (10), ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ತಂಡದ ಮೊತ್ತ 116 ರನ್.
ಆಗ, ಕ್ರೀಸ್‌ಗೆ ಆಗಮಿಸಿದ್ದು ವಿಕೆಟ್ ಕೀಪರ್ ಸುಲಕ್ಷಣಾ ನಾಯಕ್.
ರೀಮಾ- ಸುಲಕ್ಷಣಾ ಇಬ್ಬರೂ 32 ರನ್ ಸೇರಿಸುವಷ್ಟರಲ್ಲಿ ಸುಲಕ್ಷಣಾ ವಿಕೆಟ್ ಒಪ್ಪಿಸಿ ಹೊರನಡೆದರು. ವೈಯಕ್ತಿಕವಾಗಿ 7 ರನ್ ಗಳಿಸಿದ್ದ ಅವರು, ಶುಟ್ ಅವರ ಬೌಲಿಂಗ್‌ನಲ್ಲಿ ವಿಲಾನಿಗೆ ಕ್ಯಾಚ್ ಇತ್ತು ಹೊರನಡೆದರು. ಆಗ, ಕ್ರೀಸ್‌ಗೆ ಬಂದಿದ್ದು ಅಮಿತಾ ಶರ್ಮಾ.
ಅಮಿತಾ ಹಾಗೂ ರೀಮಾ ಇಬ್ಬರೂ 7ನೇ ವಿಕೆಟ್‌ಗೆ 23 ರನ್ ಸೇರಿಸಿದರು. ಇನಿಂಗ್ಸ್‌ನ 43ನೇ ಓವರ್‌ನಲ್ಲಿ, ಮಲ್ಹೋತ್ರಾ (35) ಅವರು, ಸ್ಟಾಲೇಕರ್ ಅವರ ಬೌಲಿಂಗ್‌ನಲ್ಲಿ ಹೇನ್ಸ್‌ಗೆ ಕ್ಯಾಚಿತ್ತು ಹೊರನಡೆದರು. ಆಗ, ಕ್ರೀಸ್‌ಗೆ ಬಂದಿದ್ದು ನಿರಂಜನಾ. ಇವರು, ಕ್ರೀಸ್‌ನಲ್ಲಿದ್ದ ಅಮಿತಾ ಅವರೊಂದಿಗೆ ಸೇರಿ 8ನೇ ವಿಕೆಟ್‌ಗೆ 43 ರನ್ ಸೇರಿಸಿದರು. 49ನೇ ಓವರ್‌ನಲ್ಲಿ ಅಮಿತಾ ಶರ್ಮಾ (18) ಹೊರನಡೆದರು.
ಈ ಸಂದರ್ಭದಲ್ಲಿ ಕ್ರೀಸ್‌ಗೆ ಆಗಮಿಸಿದ ಗೌಚರ್ ಸುಲ್ತಾನಾ, ಕ್ರೀಸ್‌ನಲ್ಲಿದ್ದ ನಿರಂಜನಾ ಅವರೊಂದಿಗೆ ಸೇರಿ, ತಂಡದ ಮೊತ್ತಕ್ಕೆ 7 ರನ್ ಸೇರಿಸಿದರು. ಅಂತಿಮವಾಗಿ, ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 222 ರನ್ ಮಾತ್ರ ಪೇರಿಸಲು ಶಕ್ತವಾಯಿತು.
ಸುಲಭ ಜಯ: ಭಾರತ ನೀಡಿದ್ದ ಸುಲಭ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ, ಆರಂಭದಲ್ಲೇ ಮೆಗ್ ಲ್ಯಾನಿಂಗ್ (2) ಅವರನ್ನು ಕಳೆದುಕೊಂಡಿತು. ಇನಿಂಗ್ಸ್‌ನ ಆರಂಭಿಕ ಓವರ್‌ನಲ್ಲೇ ಲ್ಯಾನಿಂಗ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವ ಮೂಲಕ ಅಮಿತಾ ಶರ್ಮಾ ಈ ವಿಕೆಟ್ ಪಡೆದರು.
ಲ್ಯಾನಿಂಗ್ ನಂತರ ಬಂದ ಕೆಮರೂನ್, ಕ್ರೀಸ್‌ನಲ್ಲಿದ್ದ ಹೇನ್ಸ್ ಜೊತೆಗೂಡಿ, 2ನೇ ವಿಕೆಟ್‌ಗೆ 27 ರನ್ ಸೇರಿಸಿದರು. 7ನೇ ಓವರ್‌ನಲ್ಲಿ ಹೇನ್ಸ್ (13) ಅವರು, ಶರ್ಮಾ ಅವರ ಬೌಲಿಂಗ್‌ನಲ್ಲೇ ಕೀಪರ್ ಸುಲಕ್ಷಣಾ ನಾಯಕ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಆಗ, ಕ್ರೀಸ್‌ನಲ್ಲಿದ್ದ ಕ್ಯಾಮೆರೂನ್ ಅವರನ್ನು ಸೇರಿಕೊಂಡಿದ್ದು ಬ್ಲಾಕ್‌ವೆಲ್.
ಕ್ಯಾಮೆರೂನ್ ಹಾಗೂ ಬ್ಲಾಕ್‌ವೆಲ್ ಜೋಡಿ, 3ನೇ ವಿಕೆಟ್‌ಗೆ 46 ರನ್ ಸೇರಿಸಿತು.
ತಂಡದ ಮೊತ್ತ 75 ರನ್ ಆಗಿದ್ದಾಗ, ಕ್ಯಾಮೆರೂನ್ (35) ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಈ ವಿಕೆಟ್ ಪಡೆದಿದ್ದು ಸುಲ್ತಾನಾ. ಕಾಟ್ ಅಂಡ್ ಬೌಲ್ಡ್ ಮೂಲಕ ಅವರು ಕ್ಯಾಮೆರೂನ್ ಅವರ ವಿಕೆಟ್ ಪಡೆದರು. ಆಗ, ಕ್ರೀಸ್‌ಗೆ ಆಗಮಿಸಿದ್ದು ಸ್ಟಾಲೇಕರ್.
ಆದರೆ, ಸ್ಟಾಲೇಕರ್ ಹಾಗೂ ಬ್ಲಾಕ್‌ವೆಲ್ ಜೋಡಿ, 4ನೇ ವಿಕೆಟ್‌ಗೆ 42 ರನ್ ಸೇರಿಸುವಷ್ಟರಲ್ಲಿ ಬ್ಲಾಕ್‌ವೆಲ್ (47) ರಸರಣಾ ಪರ್ವಿನ್ ಅವರ ಎಸೆತದಲ್ಲಿ ರೀಮಾ ಮಲ್ಹೋತ್ರಾ ಅವರಿಗೆ ಕ್ಯಾಚ್ ನೀಡಿ ಔಟಾದರು. ಆಗ, ಕ್ರೀಸ್‌ಗೆ ಬಂದ ಜೂಡಿ ಫೀಲ್ಡ್ಸ್ ಅವರು ಸ್ಟಾಲೇಕರ್ ಅವರ ಜೊತೆಗೂಡಿ 5ನೇ ವಿಕೆಟ್‌ಗೆ 39 ರನ್ ಸೇರಿಸಿದರು.
20ನೇ ಓವರ್‌ನಲ್ಲಿ ಬ್ಲಾಕ್‌ವೆಲ್ ಅವರು (47), ಪರ್ವಿನ್ ಎಸೆತದಲ್ಲಿ ಮಲ್ಹೋತ್ರಾ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರ ನಂತರ, ಕ್ರೀಸ್‌ಗೆ ಬಂದಿದ್ದು ಅಲಿಸ್ಸಾ ಹಿಲೇ. ನಂತರ, ಅಲಿಸ್ಸಾ- ಫೀಲ್ಡ್ಸ್ ಜೋಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಆದರೆ, 35ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕಿ ಜೂಡಿ ಫೀಲ್ಡ್ಸ್ (52), ಸುಲ್ತಾನಾ ಬೌಲಿಂಗ್‌ನಲ್ಲಿ ಗಾಯಗೊಂಡು ಆಚೆ ನಡೆದರು. ಆಗ, ಅವರ ಜಾಗಕ್ಕೆ ಬಂದಿದ್ದು, ಎರಿನ್ ಆಸ್‌ಬೋರ್ನ್. ಅಲಿಸ್ಸಾ ಹಾಗೂ ಎರಿನ್ ಜೋಡಿ, ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.

 ಸಂಕ್ಷಿಪ್ತ ಸ್ಕೋರ್
ಭಾರತ:
222/8 (50 ಓವರ್)
ರೀಮಾ ಮಲ್ಹೋತ್ರಾ 35 (63), ಪೂನಮ್ ರಾವುತ್ (31)
ಬೌಲಿಂಗ್: ಸ್ಟಾಲೇಕರ್ 29/3, ಶುಟ್ 47/2
ಆಸ್ಟ್ರೇಲಿಯಾ: 223/5 (38.3 ಓವರ್)
ಜೂಡಿ ಫೀಲ್ಡ್ಸ್ 52 (46), ಬ್ಲಾಕ್‌ವೆಲ್ 47 (46)
ಬೌಲಿಂಗ್: ಅಮಿತಾ ಶರ್ಮಾ 26/2, ಪರ್ವಿನ್ 16/1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com