ಎಚ್ಐಎಲ್: ಪಂಜಾಬ್ಗೆ 0-3 ಅಂತರದ ಸೋಲು
ನವದೆಹಲಿ: ಒಂದರ ಹಿಂದೊಂದರಂತೆ ಗೆಲುವ ಪಡೆಯುತ್ತಾ ಉತ್ಸಾಹದಿಂದ ಮುನ್ನುಗ್ಗುತ್ತಿರುವ ಡೆಲ್ಲಿ ವೇವ್ ರೈಡರ್ಸ್ ತಂಡ, ಮಂಗಳವಾರ ಪಂಜಾಬ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ಜಯ ಸಾಧಿಸಿತು.
ಪಂಜಾಬ್ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಡೆಲ್ಲಿ, ಅಂಕಪಟ್ಟಿಯ ಅಗ್ರ ನಾಲ್ಕು ತಂಡಗಳಲ್ಲಿನ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಪಂದ್ಯದ 14ನೇ ನಿಮಿಷದಲ್ಲಿ ಆಕಾಶ್ದೀಪ್ ಸಿಂಗ್ ಅವರು ಡೆಲ್ಲಿ ತಂಡದ ಪರವಾಗಿ ಮೊದಲು ಗೋಲು ದಾಖಲಿಸಿದರು. ನಂತರ, ತಂಡದಲ್ಲಿನ ನ್ಯೂಜಿಲೆಂಡ್ ಆಟಗಾರ ಆ್ಯಂಡ್ರೂ ಹೇವರ್ಡ್ ಅವರು ಪಂದ್ಯದ 52ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಡೆಲ್ಲಿ ತಂಡಕ್ಕೆ 2-0ರ ಮುನ್ನಡೆ ತಂದುಕೊಟ್ಟರು. ಆನಂತರ, ಪಂದ್ಯದ 70ನೇ ನಿಮಿಷದಲ್ಲಿ ಸೈಮನ್ ಚೈಲ್ಡ್ ಅವರು ಡೆಲ್ಲಿ ಪರವಾಗಿ ಮೂರನೇ ಗೋಲು ದಾಖಲಿಸಿದರು. ಈ ಜಯದಿಂದಾಗಿ ಒಟ್ಟು 32 ಅಂಕಗಳಿಸಿರುವ ಡೆಲ್ಲಿ ತಂಡ, ಎಚ್ಐಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆಸಿದೆ.
ಈ ಪಂದ್ಯದಲ್ಲಿ ಸೋತರೂ ಪಂಜಾಬ್ ತಂಡ 21 ಅಂಕಗಳೊಂದಿಗೆ ಅಂಕಪಟ್ಟಿಯ ಮೂರನೇ ಸ್ಥಾನದಲ್ಲಿದೆ. ಇನ್ನು, ರಾಂಚಿ ರೈನೋಸ್ ತಂಡ 27 ಅಂಕಗಳೊಂದಿಗೆ ಪಟ್ಟಿಯ ಎರಡನೇ ಸ್ಥಾನದಲ್ಲಿದೆ.