ಕ್ರೀಡೆ

ಮುತ್ತಿನ ನಗರಿಯಲ್ಲಿ ಯಾರಿಗೆ ಜಯ?

ಮುತ್ತಿನ ನಗರಿಯಲ್ಲಿ ಯಾರಿಗೆ ಜಯ?
Published On :

ಹೈದರಾಬಾದ್: ಮುತ್ತಿನ ನಗರಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಜಯದ ತುತ್ತಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಎದುರು ನೋಡುತ್ತಿವೆ.
ಮೊದಲ ಪಂದ್ಯದಲ್ಲಿ ಗೆದ್ದು ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಮೂಲಕ ಸರಣಿಯ ಮೇಲೆ ನಿಯಂತ್ರಣ ಸಾಧಿಸುವ ಕಾತರದಲ್ಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಮೋಘ ಬ್ಯಾಟಿಂಗ್ ಮತ್ತು ಆರ್. ಅಶ್ವಿನ್ ಅವರ ಆಕರ್ಷಕ ಬೌಲಿಂಗ್ ನೆರವಿನೊಂದಿಗೆ ಜಯದ ನಗೆ ಬೀರಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಠ ಕಲಿತಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಅಂತಹ ತಪ್ಪು ಮರಕಳಿಸದಂತೆ ಜಾಗೃತಿ ವಹಿಸಲು ಎದುರು ನೋಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಲಾಸ್ಟೇರ್ ಕುಕ್ ರೀತಿ ಪ್ರದರ್ಶನ ನೀಡಲು ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಬೌಲರ್‌ಗಳು ಅವಕಾಶ ನೀಡಬಾರದು. ಅಲ್ಲದೆ ಧೋನಿ ಚೆನ್ನೈಯಲ್ಲಿ ನೀಡಿದ ಪ್ರದರ್ಶನವನ್ನು ಮುಂದುವರಿಸುವ ಅಗತ್ಯವಿದೆ.
ಕಳೆದ ಬಾರಿ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್ಸ್ ಮತ್ತು 115 ರನ್‌ಗಳ ಅಂತರದಿಂದ ಭಾರತ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್. ಅಶ್ವಿನ್ 85 ರನ್ ನೀಡಿ 12 ವಿಕೆಟ್ ಕಬಳಿಸಿದ್ದರು.
ಈ ಪಿಚ್ ಸಹ ಸತತವಾಗಿ ತಿರುವು ಪಡೆಯುವ ಸಾಧ್ಯತೆಗಳಿದ್ದು, ಟೀಂ ಇಂಡಿಯಾ ಸ್ಪಿನ್ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗುವ ನಿರೀಕ್ಷೆಗಳಿವೆ. ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಪಡೆದುಕೊಂಡರೆ ಅತಿಥೇಯ ತಂಡದ ವಿಶ್ವಾಸ ಇನ್ನಷ್ಟು ಹೆಚ್ಚಲಿದೆ. ಅಲ್ಲದೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡಕ್ಕೆ ಮತ್ತೊಂದು ಪೆಟ್ಟು ಬೀಳಲಿದೆ.   ಪ್ರಗ್ಯಾನ್ ಓಜಾ ಅವರಿಗೆ ತವರಿನ ಅಂಗಣದಲ್ಲಿ ಆಡಲು ಅವಕಾಶ ನೀಡಬೇಕೆ ಅಥವಾ ಬೇಡ ಎಂಬ ಗೊಂದಲದಲ್ಲಿ ಅತಿಥೇಯ ತಂಡ ಸಿಲುಕಿಕೊಂಡಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಮುರಳಿ ವಿಜಯ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಆದರೆ, ಧೋನಿ ಮತ್ತು ತಂಡದ ಆಡಳಿತ ಮಂಡಳಿ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಈ ಕುರಿತು ಮೊದಲ ಪಂದ್ಯ ಮುಕ್ತಾಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಸೂಚನೆ ನೀಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲೂ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ
ಬೌಲಿಂಗ್‌ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗಿಂತ, ಪ್ರಗ್ಯಾನ್ ಓಜಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಬಲ್ಲವರಾಗಿದ್ದಾರೆ. ಆದರೆ, ಸೌರಾಷ್ಟ್ರ ಆಲ್ರೌಂಡರ್ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಅವರಿಗೆ ತಕ್ಕ ಸಾಥ್ ನೀಡಿದ್ದರು.
ಇನ್ನು ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ ಫಾರ್ಮ್‌ಗೆ ಮರಳುವ ಮೂಲಕ ಡೇವಿಡ್ ವಾರ್ನರ್ ಮತ್ತು ಮ್ಯಾಥ್ಯೂ ವೇಡ್ ವಿಕೆಟ್ ಕಬಳಿಸಿದ್ದರು.  ಭಾರತ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಅಂಗಣಕ್ಕಿಳಿಯಬೇಕಾದರೆ, ಓರ್ವ ವೇಗದ ಬೌಲರ್ ಕೈಬಿಡುವ ಅನಿವಾರ್ಯವಿದೆ. ಆಸ್ಟ್ರೇಲಿಯಾಕ್ಕೆ ಪಂದ್ಯದಲ್ಲಿ ಒತ್ತಡ ಹೆಚ್ಚಬೇಕಾದರೆ, ಓಜಾ ಅವರಿಗೆ ತಂಡದಲ್ಲಿ ಅವಕಾಶ ನೀಡುವುದು ಸೂಕ್ತ ಎನಿಸುತ್ತದೆ.
ಇಶಾಂತ್ ಶರ್ಮಾ ಮತ್ತು ಭುವನೇಶ್ವರ ಕುಮಾರ್ ಜೋಡಿ ಸ್ಥಿರವಾಗಿ ರೀವರ್ಸ್ ಸಿಂಗ್ ಬೌಲಿಂಗ್ ಪ್ರದರ್ಶಿಸಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಧೋನಿ ಈ ಪಂದ್ಯದಲ್ಲಿ ಕೈಬಿಡುವ ಸಾಧ್ಯತೆಗಳಿವೆ. ದ್ವಿತೀಯ ಇನಿಂಗ್ಸ್‌ನ 76ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದಿದ್ದ ಇಶಾಂತ್ ಶರ್ಮಾ ಕೇವಲ 3 ಓವರ್ ಬೌಲಿಂಗ್ ಪ್ರದರ್ಶಿಸಿದ್ದರು.  ಆದರೆ, ಭುವನೇಶ್ವರ ಕುಮಾರ್ ಅವರು ಬ್ಯಾಟಿಂಗ್‌ನಲ್ಲಿ ನಾಯಕ ಧೋನಿಗೆ ತಕ್ಕ ಸಾಥ್ ನೀಡಿದ್ದರು. ಭುವನೇಶ್ವರ ಅವರೊಂದಿಗೆ ಜತೆಯಾಟದಲ್ಲೇ ನಾಯಕ ಧೋನಿ ತಮ್ಮ ದ್ವಿಶತಕ ಪೂರೈಸಿದ್ದರು.
ಇನ್ನೊಂದೆಡೆ ಆಸ್ಟ್ರೇಲಿಯಾ ತಂಡ ತಮ್ಮ ಬೌಲಿಂಗ್ ವಿಭಾಗದಲ್ಲಿ ಇನ್ನೊಬ್ಬ ಸ್ಪಿನ್ ಬೌಲರ್‌ನ್ನು ಸೇರಿಸಿಕೊಳ್ಳಲು ಎದುರು ನೋಡುತ್ತಿದೆ. ನಥಾನ್ ಲೇಯಾನ್, ಇಂಗ್ಲೆಂಡ್‌ನ ಗ್ರೇಮ್ ಸ್ವಾನ್ ಅವರನ್ನು ಹೋಲುತ್ತಾರೆ. ಕ್ಷೇವಿಯರ್ ಡೊಹಾರ್ಟಿ ಪನೇಸರ್ ಮೋಂಟಿ ಹೋಲುತ್ತಾರೆ ಎಂಬುದು ಆಸೀಸ್ ನಾಯಕ ಮೈಕಲ್ ಕ್ಲಾರ್ಕ್‌ಗೆ ಈಗಾಗಲೇ ಖಚಿತಪಟ್ಟಿದೆ.
ಅಭ್ಯಾಸ ಪಂದ್ಯದಲ್ಲಿ ಡೊಹಾರ್ಟಿ ಸ್ಪಿನ್ನರ್‌ಗಳ ಪೈಕಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಹಣಕ್ಕೆ ಹರಾಜಾದ ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ನಿರೀಕ್ಷೆಯ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಫಿಲಿಪ್ ಹ್ಯೂಸ್ ಅವರು ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಬೇಕಾದ ವಿಶ್ವಾಸವನ್ನು ತೋರುತ್ತಿಲ್ಲ.
ಉಸ್ಮಾನ್ ಖಾವಾಜಾ ಅವರು ಹ್ಯೂಸ್ ಸ್ಥಾನ ತುಂಬುವ ಸಾಧ್ಯತೆಗಳಿವೆ. ಅಲ್ಲದೆ, ಶೇನ್ ವ್ಯಾಟ್ಸನ್ ಅವರು 3ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿಯಲಿದ್ದು, ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ಹೀಗಾಗಿ ಪೀಟರ್ ಸಿಡ್ಲ್ ಅಥವಾ ಮಿಚೆಲ್ ಸ್ಟಾರ್ಕ್ ಅವರಲ್ಲಿ ಒಬ್ಬರನ್ನು ಆಡುವ 11 ಆಟಗಾರರ ಪಟ್ಟಿಯಿಂದ ಕೈಬಿಡುವ ನಿರೀಕ್ಷೆಗಳಿವೆ.
ಈ ಸರಣಿಯಲ್ಲಿ ಬ್ಯಾಟಿಂಗ್ ಮಾತ್ರ ನಿರ್ವಹಿಸುತ್ತಿರುವ ಶೇನ್ ವ್ಯಾಟ್ಸನ್ ಮೇಲೆ ಹೆಚ್ಚಿನ ಹೊಣೆಗಾರಿಕೆ ಬಿದ್ದಿದೆ. ವ್ಯಾಟ್ಸನ್ ಪ್ರದರ್ಶನ ತಂಡದ ಇತರ ಆಟಗಾರರ ಮೇಲೂ ಹೆಚ್ಚಿನ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.ಮೊಯ್ಸಿಸ್ ಹೆನ್ರೀಕೆಸ್ ಪ್ರದರ್ಶನ ನಾಯಕ ಮೈಕಲ್ ಕ್ಲಾಕ್ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಹೆನ್ರೀಕೆಸ್ ಭಾರತದ ಬೌಲಿಂಗ್ ಎದುರಿಸಿದ ಬ್ಯಾಟಿಂಗ್ ಕೌಶಲ್ಯ ಆಸೀಸ್‌ನ ಇತರ ಬ್ಯಾಟ್ಸ್‌ಮನ್‌ಗಳಿಗೆ  ಮಾದರಿಯಾಗಿತ್ತು.

ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮಾ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ.
ಆಸ್ಟ್ರೇಲಿಯಾ: ಮಿಚೆಲ್ ಕ್ಲಾರ್ಕ್ (ನಾಯಕ), ಎಡ್‌ಕೋವನ್, ಡೇವಿಡ್ ವಾರ್ನರ್, ಫಿಲ್ ಹ್ಯೂಸ್, ಶೇನ್ ವ್ಯಾಟ್ಸನ್, ಮ್ಯಾಥ್ಯೂ ವೇಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಜಾನ್ಸನ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ನಥಾನ್ ಲೇಯಾನ್, ಮೊಯ್ಸಿಸ್ ಹೆನ್ರೀಕೆಸ್, ಜೇಮ್ಸ್ ಪ್ಯಾಟಿನ್ಸನ್, ಕ್ಷೇವಿಯರ್ ಡೊಹಾರ್ಟಿ, ಜಾಕ್ಸನ್ ಬರ್ಡ್, ಉಸ್ಮಾನ್ ಖವಾಜಾ, ಸ್ಟಿವ್ ಸ್ಮಿತ್.

ಪಂದ್ಯದ ಸಮಯ ಬೆಳಗ್ಗೆ 9: 30ರಿಂದ ಆರಂಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.