ಕ್ರೀಡೆ

ಫುಟ್ಬಾಲ್: ಭಾರತ ಶುಭಾರಂಭ

ಫುಟ್ಬಾಲ್: ಭಾರತ ಶುಭಾರಂಭ
Published On :

ಯಾಗೋನ್: ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿದ ಭಾರತ ಫುಟ್ಬಾಲ್ ತಂಡ ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ತೈಪೇ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಜೆವೆಲ್ ರಾಜಾ ಶೈಖ್ ಅವರ ಬದಲಾಗಿ ಅಂಗಣಕ್ಕಿಳಿದ ರಾಬಿನ್ ಸಿಂಗ್ ಅವರು ಪಂದ್ಯದ 91ನೇ ನಿಮಿಷದಲ್ಲಿ ವಿಜಯ ಗೋಲು ದಾಖಲಿಸಿ ಜಯದ ರೂವಾರಿ ಎನಿಸಿದರು.
ಇದಕ್ಕೂ ಮುನ್ನ ಪಂದ್ಯದ 40ನೇ ನಿಮಿಷದಲ್ಲಿ ಭಾರತದ ಜೆವೆಲ್ ರಾಜಾ ಅವರು ನಾಯಕ ಸುನಿಲ್ ಚೆಟ್ರಿ ನೆರವಿನೊಂದಿಗೆ ಗೋಲು ದಾಖಲಿಸಿದರು. ಆಗ ಭಾರತ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತ್ತು. ಆದರೆ, 54ನೇ ನಿಮಿಷದಲ್ಲಿ ಗೋಲು ದಾಖಲಿಸಿದ ತೈಪೇಯ ಲೀ ತೈ ಲಿನ್ ಭಾರತ ಮುನ್ನಡೆ ಕಂಡುಕೊಳ್ಳದಂತೆ ನೋಡಿಕೊಂಡರು.
ಆದರೆ, 82ನೇ ನಿಮಿಷದಲ್ಲಿ ಅಂಗಣಕ್ಕಿಳಿದ ರಾಬಿನ್ ಅವರು ಮಿಡ್‌ಫೀಲ್ಡರ್ ಸೈಯಿದ್ ರಹೀಮ್ ನಬಿ ಅವರು ಬಲ ಬದಿಯಿಂದ ತಳ್ಳಿದ ಚೆಂಡನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡರು.
ಗೋಲ್‌ಕೀಪರ್ ಸುಬ್ರತಾ ಪಾಲ್, ಡಿಫೆಂಡರ್ ನಿರ್ಮಲ್ ಚೆಟ್ರಿ ಹಾಗೂ ಗುರ್ಜಿಂದರ್ ಕುಮಾರ್, ಮಿಡ್ ಫೀಲ್ಡರ್ ಜೆವೆಲ್ ರಾಜಾ ಅವರೊಂದಿಗೆ ಭಾರತ 4-5-1 ಮಾದರಿಯಲ್ಲಿ ಪಂದ್ಯವನ್ನು ಆರಂಭಿಸಿತು. ಗುರ್ಜಿಂದರ್ ಅವರಿಗೆ ಇದು ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಕಳೆದ ತಿಂಗಳು ಪ್ಯಾಲೆಸ್ತೀನ್ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಯೋಜನೆ ಹಾಕಿಕೊಂಡಂತೆ, ತರಬೇತುದಾರ ವಿಮ್ ಕೋವರ್‌ಮನ್ಸ್, ಗೋಲ್‌ಕೀಪರ್ ಸಂದೀಪ್ ನಂದಿ, ಡೆಂಜಿಲ್ ಫ್ರಾಂಕೋ ಹಾಗೂ ಅಲ್ವೇನ್ ಜಾರ್ಜ್ ಅವರನ್ನು ಆರಂಭಿಕ ಲೈನ್‌ನಿಂದ ದಾಳಿ ನಡೆಸಲು ಸೂಚಿಸಿದರು.
ಭಾರತ ಮೊದಲಿನಿಂದಲೂ ಪಂದ್ಯದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು. ಅಲ್ಲದೆ ಚೆಂಡು ಎದುರಾಳಿ ಆಟಗಾರರ ಕೈಗೆ ಸೇರದಂತೆ ನೋಡಿಕೊಂಡಿತು.
ಅದಾಗ್ಯೂ, ಪಂದ್ಯದ 13ನೇ ನಿಮಿಷದಲ್ಲಿ ತೈಪೆ 25 ಯಾರ್ಡ್‌ನಿಂದ ಫ್ರೀ ಕಿಕ್ ಅವಕಾಶ ಪಡೆಯಿತು. ಆದರೆ, ಎದುರಾಳಿ ತಂಡ ಗೋಲು ದಾಖಲಿಸುವುದನ್ನು ತಡೆಗಟ್ಟುವಲ್ಲಿ ಭಾರತದ ಗೋಲ್‌ಕೀಪರ್ ಪಾಲ್ ಯಶಸ್ವಿಯಾದರು.
ಮೊದಲಾರ್ಧ ಪಂದ್ಯದಲ್ಲಿ ಭಾರತ ಐದು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತು. ಇದರಲ್ಲಿ ಗುರ್ಜಿಂದರ್ ಗೋಲು ದಾಖಲಿಸುವುದರಿಂದ ಸ್ವಲ್ಪದರಲ್ಲೇ ಅವಕಾಶವನ್ನು ತಪ್ಪಿಸಿಕೊಂಡರು.
ಕೋವರಮನ್ಸ್ ಅವರು ಜೆವೆಲ್ ರಾಜಾ  ಅವರ ಸ್ಥಾನದಲ್ಲಿ ರಾಬಿನ್ ಅವರಿಗೆ ಅವಕಾಶ ನೀಡಿದ್ದು ತಂಡಕ್ಕೆ ಲಾಭವಾಗಿಯೇ ಪರಿಣಮಿಸಿತು. ಒಂದು ಹಂತದಲ್ಲಿ ಡ್ರಾದಲ್ಲಿ ಅಂತ್ಯಗೊಳ್ಳುವ ಸೂಚನೆ ನೀಡಿದ್ದ ಪಂದ್ಯದಲ್ಲಿ ಭಾರತ ಜಯ ಸಾಧಿಸಲು ರಾಬಿನ್ ಕಾರಣರಾದರು. ಭಾರತ ತನ್ನ ಎರಡನೇ ಪಂದ್ಯವನ್ನು ಮಾರ್ಚ್ 4ರಂದು ಗುವಾಮ ವಿರುದ್ಧ ಸೆಣಸಲಿದೆ.
'ಪಂದ್ಯದಲ್ಲಿ ನಾವು ಎರಡು ಅದ್ಭುತ ಗೋಲುಗಳನ್ನು ದಾಖಲಿಸಿದೆವು. ಇನ್ನೂ ಹೆಚ್ಚಿನ ಗೋಲುಗಳನ್ನು ನಾವು ದಾಖಲಿಸಬಹುದಿತ್ತು. ಪಂದ್ಯಾವಳಿಯಲ್ಲಿ ಇದು ನಮಗೆ ಅತಿ ಮಹತ್ವದ ಪಂದ್ಯವಾಗಿತ್ತು. ಶುಭಾರಂಭದೊಂದಿಗೆ ಪಂದ್ಯಾವಳಿಯಲ್ಲಿ ಮುನ್ನಡೆಯುವುದು ನಮಗೆ ಅಗತ್ಯವಾಗಿತ್ತು. ಎದುರಾಳಿ ತಿರುಗೇಟು ನೀಡುವ ಭೀತಿ ಪಂದ್ಯದಲ್ಲಿ ಸದಾ ಇರುತ್ತದೆ. ಪಂದ್ಯವನ್ನು ಒಂದು ಬಾರಿ ಅವಲೋಕಿಸಿದರೆ, ನಾವು ಇನ್ನೂ ಹೆಚ್ಚಿನ ಅವಕಾಶಗಳನ್ನು ಪಡೆದಿದ್ದೆವು' ಎಂದು ಭಾರತ ತಂಡದ ತರಬೇತಾದರ ವಿಮ್ಸ್ ಕೋವರ್‌ಮನ್ಸ್ ಹೇಳಿದರು.
'ಗಡಿಯಾರವನ್ನು ನೋಡಿಕೊಂಡು ಆಟಗಾರರು ಪಂದ್ಯದಲ್ಲಿ ಎರಡನೇ ಗೋಲು ದಾಖಲಿಸಿದರು. ಅದಾಗ್ಯೂ ಅದನ್ನು ನಾವು ಹೆಚ್ಚುವರಿ ಸಮಯದಲ್ಲಿ ಗಳಿಸಬೇಕಾಯಿತು. ನಮ್ಮ ಇಬ್ಬರೂ ಬದಲಿ ಆಟಗಾರರಾದ ನಬಿ ಮತ್ತು ರಾಬಿನ್ ಅವರು ಉತ್ತಮ ಹೋರಾಟ ನಡೆಸಿದ್ದು ಜಯ ಸಾಧಿಸಲು ನೆರವಾಯಿತು' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.