ಮಾರಕ ದಾಳಿಗೆ ಕುಸಿದ ಆಸೀಸ್
ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಅವರ ಬೌಲಿಂಗ್ ಕೈಚಳಕಕ್ಕೆ ದಿಕ್ಕುತಪ್ಪಿದಂತಾದ ಆಸ್ಟ್ರೇಲಿಯಾ ತಂಡ, ಭಾರತದ ವಿರುದ್ಧ...

ಹೈದರಾಬಾದ್: ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಅವರ ಬೌಲಿಂಗ್ ಕೈಚಳಕಕ್ಕೆ ದಿಕ್ಕುತಪ್ಪಿದಂತಾದ ಆಸ್ಟ್ರೇಲಿಯಾ ತಂಡ, ಭಾರತದ ವಿರುದ್ಧ ಶನಿವಾರ ಆರಂಭಗೊಂಡ ದ್ವಿತೀಯ ಟೆಸ್ಟ್‌ನ ಮೊದಲ ದಿನವೇ ತತ್ತರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ತಂಡ, ದಿನಾಂತ್ಯದ ವೇಳೆಗೆ 237 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಅಚ್ಚರಿಯ ರೀತಿಯಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ, ದಿನದಾಟ ಮುಗಿಯುವ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೇ 5 ರನ್ ಗಳಿಸಿದೆ. ಆರಂಭಿಕರಾದ ಮುರಳಿ ವಿಜಯ್ (0) ಹಾಗೂ ವೀರೇಂದ್ರ ಸೆಹ್ವಾಗ್ (4) ಅಜೇಯರಾಗುಳಿದಿದ್ದರು.
ಮಂಗಳವಾರ ಬೆಳಗ್ಗೆ ಬ್ಯಾಟಿಂಗ್‌ಗೆ ಇಳಿದ ಆಸೀಸ್ ತಂಡದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಎಡ್ವರ್ಡ್ ಕೋವನ್ ಅವರನ್ನು ಭುವನೇಶ್ವರ್ ಕುಮಾರ್ ಅವರು ಬೇಗನೇ ಪೆವಿಲಿಯನ್‌ಗೆ ಅಟ್ಟಿದರು. ಅವರ ನಂತರ, ಇನಿಂಗ್ಸ್ ಜವಾಬ್ದಾರಿ ಹೊತ್ತ ವ್ಯಾಟ್ಸನ್ ಹಾಗೂ ಹ್ಯೂಸ್ 3ನೇ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವಾಡಿದರು.
ಈ ಸಂದರ್ಭದಲ್ಲಿ ಮತ್ತೆ ದಾಳಿಗಿಳಿದ ಭುವನೇಶ್ವರ್ ಕುಮಾರ್ ಅವರು, ವ್ಯಾಟ್ಸನ್ ಅವರ ವಿಕೆಟ್ ಉರುಳಿಸಿದರು. ಭುವನೇಶ್ವರ್ ಹೀಗೆ, ಆಸೀಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಶನಿವಾರ ಆರಂಭಿಕ ಅವಧಿಯಲ್ಲಿ ಕಾಡಿದರೆ, ರವೀಂದ್ರ ಜಡೇಜಾ ಹಾಗೂ ಹರ್ಭಜನ್ ಸಿಂಗ್ ಇಬ್ಬರೂ ಸಂಜೆ ಚಹಾ ವಿರಾಮದ ನಂತರ, ಕಾಂಗರೂಗಳ ಬೆನ್ನು ಹತ್ತಿದರು.
ಕ್ರೀಡಾಂಗಣದ, ವಿಶಾಖ ತುದಿಯಿಂದ ದಾಳಿ ನಡೆಸಿದ ಯುವ ಬೌಲರ್ ಭುವನೇಶ್ವರ್ ಕುಮಾರ್, ತಮ್ಮ ಆಕರ್ಷಕ ಲೆಗ್ ಕಟರ್‌ಗಳಿಂದ ಆರಂಭಿಕರಾದ ವಾರ್ನರ್ ಹಾಗೂ ಕೋವನ್ ಇಬ್ಬರನ್ನೂ ಕ್ರೀಸ್‌ನಿಂದ ಹೊರಗೆ ಕಳಿಸಿದರು. ಇನಿಂಗ್ಸ್‌ನ ಮೂರನೇ ಓವರ್‌ನ 2ನೇ ಎಸೆತದಲ್ಲಿ ಪಿಚ್ ಮೇಲೆ ಬಿದ್ದ ಚೆಂಡು ವಾರ್ನರ್ ಅವರ ಕಣ್ತಪ್ಪಿಸಿ, ಆಫ್ ಸ್ಟಂಪ್‌ನ ಬೇಲ್ ಎಗರಿಸಿತು. ಇದು ಭುವನೇಶ್ವರ್‌ಗೆ ಶನಿವಾರದ ದಿನದಾಟದಲ್ಲಿ ಸಿಕ್ಕ ಮೊದಲ ವಿಕೆಟ್. ಈ ಓವರ್‌ನ ನಂತರದ ಓವರ್‌ನಲ್ಲೇ ಭುವನೇಶ್ವರ್ ಅವರು ಇದೇ ರೀತಿಯ ಎಸೆತದಲ್ಲೇ ಕೋವನ್ ಅವರನ್ನು ಆಚೆಗಟ್ಟಿದರು.
ಸಂಜೆಯ ಚಹಾ ವಿರಾಮದ ನಂತರದ ಅವಧಿಯಲ್ಲಿ ಆಸೀಸ್, ಕೇವಲ 28 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಅವರು 33 ರನ್ ನೀಡಿ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 53 ರನ್ ನೀಡಿ, ಮೂರು ವಿಕೆಟ್ ಗಳಿಸಿದರು.
ಕ್ಲಾರ್ಕ್ ಕೆಚ್ಚೆದೆಯ ಆಟ: ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ಪರ ಕೆಚ್ಚೆದೆಯ ಆಟವನ್ನಾಡಿದ್ದು, ಕ್ಲಾರ್ಕ್ ಮಾತ್ರ. ಭಾರತ ವಿರುದ್ಧದ ಮೊದಲ ಪಂದ್ಯದಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಕ್ಲಾರ್ಕ್, ಈ ಬಾರಿಯೂ ಅದೇ ರೀತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ವ್ಯಾಟ್ಸನ್ ಔಟಾದ ಮೇಲೆ ಕ್ರೀಸ್‌ಗೆ ಕಾಲಿಟ್ಟಿದ್ದ ಅವರು, ಭಾರತದ ಬೌಲರ್‌ಗಳನ್ನು ದಂಡಿಸುವಲ್ಲಿ ಯಶಸ್ವಿಯಾದರು. 9 ರನ್‌ಗಳ ಅಂತರದಲ್ಲಿ ಶತಕದಿಂದ ವಂಚಿತರಾದರೂ, ಅವರ ಆಟ ಮಾತ್ರ ಸೊಗಸಾಗಿತ್ತು. ಒಂದರ ಹಿಂದೊಂದರಂತೆ ಆಸೀಸ್ ವಿಕೆಟ್ ಉರುಳುತ್ತಿದ್ದರೂ, ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಅವರು ಇನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಿದ್ದ ರೀತಿ, ನಾಯಕನ ಆಟದ ಸೂಕ್ತ ಉದಾಹರಣೆಯಂತಿತ್ತು. ಇನಿಂಗ್ಸ್‌ನ 84ನೇ ಓವರ್‌ನಲ್ಲಿ, ರವೀಂದ್ರ ಜಡೇಜಾ ಎಸೆತದಲ್ಲಿ ವೈಲ್ಡ್ ಸ್ವೀಪ್ ಶಾಟ್ ಹೊಡೆತಕ್ಕೆ ಪ್ರಯತ್ನಿಸಿದ ಕ್ಲಾರ್ಕ್, ಕ್ಲೀನ್‌ಬೌಲ್ಡ್ ಆಗುವ ಮೂಲಕ ಅವರ ಏಕಾಂಗಿ ಹೋರಾಟ ಅಂತ್ಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


