ಕಾಂಗರೂ ಅಭದ್ರ, ಭಾರತ ಸುಭದ್ರ
ಹೈದರಾಬಾದ್: ಬಿರು ಬಿಸಿಲು... ಥರ್ಮೋ ಮೀಟರ್ನಲ್ಲಿ ಪಾದರಸ 35 ಡಿಗ್ರಿ ತೋರಿಸುತ್ತಿತ್ತು... ಈ ಉರಿ ಬಿಸಿಲಿನ ನಡುವೆಯೂ, ಉಪ್ಪಳ್ನ ಕ್ರೀಡಾಂಗಣದಲ್ಲಿ ಬರೋಬ್ಬರಿ 28 ಸಾವಿರ ಜನ ಜಮಾಯಿಸಿದ್ದರು.... ಬಹುತೇಕ ಕ್ರೀಡಾಂಗಣ ಛಾವಣಿ ರಹಿತವಾಗಿದ್ದರಿಂದ, ಬಿರು ಬಿಸಿಲಿಗೆ ಮೈಯ್ಯೊಡ್ಡಿ ಕುಳಿತಿದ್ದ ಜನರನ್ನು ಸುಸ್ತು ಮಾಡಲು ಪ್ರಾಯಶಃ ಆ ಸೂರ್ಯನಿಗೂ ಸಾಧ್ಯವಾಗಲಿಲ್ಲ.... ಏಕೆಂದರೆ, ಅದು ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ - ಇಬ್ಬರು ಮಾಡಿದ ಮೋಡಿಯ ಪರಿಣಾಮ....
ಹೌದು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ನ ಎರಡನೇ ದಿನವಾದ ಭಾನುವಾರ, ಭಾರತ ತನ್ನ ಪ್ರಥಮ ಇನಿಂಗ್ಸ್ನಲ್ಲಿ ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 311 ರನ್ ಪೇರಿಸಿತು. ಆರಂಭಿಕ ಮುರಳಿ ವಿಜಯ್ ಹಾಗೂ ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಇಬ್ಬರೂ 294 ರನ್ಗಳ ಜೊತೆಯಾಟವಾಡಿದರು.
ದಿನಾಂತ್ಯಕ್ಕೆ 129 ರನ್ ಗಳಿಸಿರುವ ಮುರಳಿ ವಿಜಯ್ ಹಾಗೂ 162 ರನ್ ಗಳಿಸಿರುವ ಚೇತೇಶ್ವರ ಪೂಜಾರ ಅಜೇಯರಾಗಿದ್ದು, ಸೋಮವಾರ ಭಾರತದ ಇನಿಂಗ್ಸ್ ಮುಂದುವರೆಸಲಿದ್ದಾರೆ.
ಆಸೀಸ್ಗೆ ಆರಂಭಿಕ ಯಶಸ್ಸು: ಶನಿವಾರ ದಿನಾಂತ್ಯಕ್ಕೆ, ತನ್ನ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 5 ರನ್ ಗಳಿಸಿದ್ದ ಭಾರತ, ಭಾನುವಾರ ತನ್ನ ಇನಿಂಗ್ಸ್ ಮುಂದುವರೆಸಿದ ಕೆಲ ಹೊತ್ತಿನಲ್ಲಿ ಆರಂಭಿಕ ಸೆಹ್ವಾಗ್ ಅವರನ್ನು ಕಳೆದುಕೊಂಡಿತು. ತಂಡದ ಮೊತ್ತ ಕೇವಲ 17 ರನ್ ಆಗಿದ್ದಾಗ, ಸೆಹ್ವಾಗ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ಆಸೀಸ್ ಆಟಗಾರರ ಮೊಗದಲ್ಲಿ ಮೊದಲ ಯಶಸ್ಸು ಪಡೆದ ನಗು.
ಆದರೆ, ನಂತರ ಜೋಡಿಯಾದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ, ಆಸೀಸ್ ಕಂಡ ಈ ಆರಂಭಿಕ ಯಶಸ್ಸು ಕೇವಲ ಆಕಸ್ಮಿಕ ಎಂಬುದನ್ನು ಸಾಬೀತುಪಡಿಸಿದರು.
ದಿನದಾಟದ ಮೊದಲ ಅವಧಿಯಲ್ಲಿ 49 ರನ್ ಗಳಿಸಿದ ಈ ಜೋಡಿ, ಎರಡನೇ ಅವಧಿಯಲ್ಲಿ 106 ರನ್ ಗಳಿಸಿತು. ಆನಂತರ, ಸಂಜೆ ಚಹಾ ವಿರಾಮದ ನಂತರದ ಅವಧಿಯಲ್ಲಿ 151 ರನ್ ಪೇರಿಸಿತು.
ಮೊದಲ ಅವಧಿಯಲ್ಲಿ ಇಬ್ಬರೂ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿ, ವಿಕೆಟ್ ಚೆಲ್ಲದೇ ಗಟ್ಟಿಯಾಗಿ ಬೇರೂರುವುದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟರು.
ನಂತರ, ಎರಡನೇ ಅವಧಿಯಲ್ಲಿ ನಿಧಾನವಾಗಿ ರನ್ ರೇಟ್ ಹೆಚ್ಚಿಸುವತ್ತ ಈ ಇಬ್ಬರೂ ಗಮನ ಹರಿಸಿದರು. ಸ್ಪಿನ್ನರ್ಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತ ಈ ಇಬ್ಬರೂ, ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಾ ಮುನ್ನಡೆದರು. ಆಸೀಸ್ನ ಯಾವುದೇ ಸ್ಪಿನ್ನರ್ಗಳಿಗೆ ಮಣೆ ಹಾಕದೇ, ಬಿರುಸು ಬ್ಯಾಟಿಂಗ್ ಪ್ರದರ್ಶಿಸಿದ ಈ ಇಬ್ಬರೂ ಕಾಂಗರೂ ಪಡೆಗೆ ತಲೆನೋವಾಗಿ ಪರಿಣಮಿಸಿದರು.
ಚೆನ್ನೈ ಟೆಸ್ಟ್ನಲ್ಲಿ ಸತತವಾಗಿ ಎರಡೂ ಇನಿಂಗ್ಸ್ಗಳಲ್ಲಿ ವೈಫಲ್ಯ ಅನುಭವಿಸಿದ್ದ ವಿಜಯ್ಗೆ ತಮ್ಮ ಸಾಮರ್ಥ್ಯ ತೋರಿಸುವ ಅನಿವಾರ್ಯತೆ ಎದುರಾಗಿತ್ತು. ಭಾನುವಾರದ ದಿನದಾಟದಲ್ಲಿ, ಅದು ನೆರವೇರಿತು. ಇನಿಂಗ್ಸ್ನ 77.4ನೇ ಓವರ್ನಲ್ಲಿ ಡೊಹರ್ಟಿ ಬೌಲಿಂಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಎರಡನೇ ಟೆಸ್ಟ್ ಶತಕ ಗಳಿಸಿದ ಅವರು, ನಂತರ ಆಸೀಸ್ ಬೌಲರ್ಗಳನ್ನು ದಂಡಿಸುತ್ತಲೇ ಹೋದರು.
ಅತ್ತ, ಚೇತೇಶ್ವರ ಪೂಜಾರ ಅವರೂ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಭರ್ಜರಿ ಅವಕಾಶ ಸಿಕ್ಕಿತು. ಆರಂಭಿಕ ವೀರೇಂದ್ರ ಸೆಹ್ವಾಗ್ ಅವರು, ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದಿದ್ದ ಹಿನ್ನೆಲೆಯಲ್ಲಿ, ಬೇಗನೇ ಮುರಳಿ ವಿಜಯ್ ಅವರನ್ನು ಕ್ರೀಸ್ನಲ್ಲಿ ಸೇರಿಕೊಳ್ಳುವ ಅವಕಾಶ ಪಡೆದ ಪೂಜಾರ, ದಿನಪೂರ್ತಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮುರಳಿ ವಿಜಯ್ಗಿಂತ ಮುಂಚೆಯೇ ಶತಕ ಸಿಡಿಸಿದ್ದ ಅವರು, ದಿನಾಂತ್ಯದ ಹೊತ್ತಿಗೆ 162 ರನ್ ಗಳಿಸಿದರು.
ಅದರಲ್ಲೂ, ದಿನಾಂತ್ಯದ ವೇಳೆಗೆ ಅವರ ಬ್ಯಾಟಿಂಗ್ನಲ್ಲಿ ಹೊಸ ಬಿರುಸು ಕಾಣುತ್ತಿತ್ತು. ವೈಯಕ್ತಿಕವಾಗಿ 100 ರನ್ ಗಳಿಸಲು 189 ಎಸೆತಗಳನ್ನು ತೆಗೆದುಕೊಂಡಿದ್ದ ಪೂಜಾರ, 100 ರನ್ನಿಂದ 150 ರನ್ ಗಡಿ ಮುಟ್ಟಲು ಕೇವಲ 45 ಎಸೆತಗಳನ್ನು ತೆಗೆದುಕೊಂಡಿದ್ದರು. ದಿನದ ಅಂತಿಮ ಅವಧಿಯಲ್ಲಿ ಅವರ ಆತ್ಮವಿಶ್ವಾಸ ಅಷ್ಟರ ಮಟ್ಟಿಗೆ ದೃಢವಾಗಿತ್ತು.
ಅತ್ತ, ಆಸೀಸ್ ಬೌಲರ್ಗಳು ದಿನವಿಡೀ ಬೆವರು ಸುರಿಸಿದರೂ, ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಜೋಡಿಯ ಅಬ್ಬರವನ್ನು ನಿಲ್ಲಿಸಲಾಗಲಿಲ್ಲ.
ಸ್ಪಿನ್ನರ್ಗಳಾದ ಡೊಹಾರ್ಟಿ (26 ಓವರ್-85 ರನ್) ಹಾಗೂ ಮೊಟ್ಟ ಮೊದಲ ಟೆಸ್ಟ್ ಆಡುತ್ತಿರುವ ಮ್ಯಾಕ್ಸ್ವೆಲ್ (10 ಓವರ್-55 ರನ್) ಇಬ್ಬರೇ ಕೊಂಚ ಮಟ್ಟಿಗೆ ಯಶಸ್ಸು ಕಂಡಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

