ಕ್ರೀಡೆ

ಜಯದ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

ಜಯದ ನಿರೀಕ್ಷೆಯಲ್ಲಿ ಚೆಟ್ರಿ ಪಡೆ
Published On :

ಯಾಂಗೋನ್: ತೈಪೇ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಫುಟ್ಬಾಲ್ ತಂಡ, ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಸುತ್ತಿನಲ್ಲಿ ಸೋಮವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಗುವಾಮ್ ತಂಡವನ್ನು ಎದುರಿಸಲಿದೆ.
ತೈಪೇ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಭಾರತ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಹೆಚ್ಚುವರಿ ಸಮಯದಲ್ಲಿ ರಾಬಿನ್ ಸಿಂಗ್ ದಾಖಲಿಸಿದ ಗೋಲಿನೊಂದಿಗೆ ಜಯ ಸಾಧಿಸಿದ್ದ ಕೋಚ್ ವಿಮ್ ಕೋವರ್‌ಮನ್ಸ್ ಅವರ ಭಾರತ ತಂಡ ಎರಡನೇ ಪಂದ್ಯದಲ್ಲೂ ಜಯ ಕಾಣಲು ಎದುರು ನೋಡುತ್ತಿದೆ.
'ಮೊದಲ ಪಂದ್ಯದಲ್ಲಿ ನಮಗೆ ಮೂರು ಅಂಕಗಳು ಬೇಕಾಗಿತ್ತು. ಅದು ಪಂದ್ಯ ತೀವ್ರ ಪೈಪೋಟಿಯಿಂದ ನಡೆಯಲು ಕಾರಣವಾಗಿತ್ತು. ಮುಂದಿನ ಹಣಾಹಣಿಗೆ ನಾವು ಸಜ್ಜಾಗುತ್ತಿದ್ದೇವೆ' ಎಂದು ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದ್ದಾರೆ.
ಇನ್ನೊಂದೆಡೆ ಗುವಾಮ್ ತಂಡ ತನ್ನ ಮೊದಲ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ 0-5 ಗೋಲುಗಳ ಅಂತರದಿಂದ ಪರಾಭವ ಹೊಂದಿದ್ದು, ಪಂದ್ಯಾವಳಿಯಲ್ಲಿ ತನ್ನ ಮೊದಲ ಜಯದ ಕಾತರದಲ್ಲಿದೆ.
ಅದಾಗ್ಯೂ ಕೊವರ್‌ಮನ್ಸ್ ಅವರಿಂದ ತರಬೇತುಗೊಂದಿರುವ ಭಾರತ ತಂಡ, ಗುವಾಮ್ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. 'ಎದುರಾಳಿಯನ್ನು ಹಗುರವಾಗಿ ಪರಿಗಣಿಸುವ ಮಾತೇ ಇಲ್ಲ.
ಎದುರಾಳಿಯನ್ನು ಯಾವತ್ತೂ ನಿರ್ಲಕ್ಷಿಸಬಾರದು. ಹಾಗೊಂದು ವೇಳೆ ತಪ್ಪು ಮಾಡಿದರೆ, ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ' ಎಂದು ಭಾರತ ತಂಡದ ತರಬೇತುದಾರ ಕೊವರ್‌ಮನ್ಸ್ ಹೇಳಿದ್ದಾರೆ.
ಆದರೆ, ಭಾರತ ಪಂದ್ಯದಲ್ಲಿ ದೊರಕುವ ಅವಕಾಶಗಳಿಂದ ವಂಚಿತವಾಗುತ್ತಿದೆ. ಪ್ಯಾಲೆಸ್ತೀನ್ ಮತ್ತು ಸಿಂಗಾಪುರ ವಿರುದ್ಧ ಈ ಹಿಂದೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಇದೇ ಕಾರಣಕ್ಕಾಗಿ ಸೋಲನುಭವಿಸಿತ್ತು.
ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ತೈಪೇ ವಿರುದ್ಧ ಇದೇ ತಪ್ಪನ್ನು ಮರುಕಳಿಸಿತು.
ಮಿಡ್‌ಫೀಲ್ಡರ್ ಮೆಹ್ತಾಬ್ ಹುಸ್ಸೇನ್ ಗೋಲು ದಾಖಲಿಸಲು ಅವಕಾಶ ಸಿಕ್ಕಾಗ ಕೇವಲ ಗೋಲ್‌ಕೀಪರ್ ಒಬ್ಬರನ್ನು ವಂಚಿಸುವಲ್ಲಿ ಅವರು ವಿಫಲವಾದರು.
'ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಪ್ರತಿ ಕ್ಷಣವೂ ಹೋರಾಟದಿಂದ ಕೂಡಿರುತ್ತದೆ. ಹೀಗಾಗಿ ಪಂದ್ಯದಲ್ಲಿ ನಾವು ಯಾವುದೇ ಕ್ಷಣದಲ್ಲೂ ನಿರ್ಲಕ್ಷ್ಯ ವಹಿಸುವಂತಿಲ್ಲ. ನಾವು ಪಂದ್ಯದಲ್ಲಿ ಸಾಧ್ಯವಾದಷ್ಟು ಬಿರುಸಿನ ಹೋರಾಟ ಮೈಗೂಡಿಸಿಕೊಳ್ಳುವ ಅಗತ್ಯವಿರುತ್ತದೆ' ಎಂದು ಭಾರತ ತಂಡದ ಆಟಗಾರ ಹುಸೇನ್ ಹೇಳಿದರು.
'ಪಂದ್ಯದಲ್ಲಿ ಒಂದು ಗೋಲನ್ನು ಸುಲಭವಾಗಿ ದಾಖಲಿಸಲು ಸಾಧ್ಯವೇ ಇಲ್ಲ. ಗೋಲು ದಾಖಲಿಸಲು ನೀವು ಕಠಿಣ ಪರಿಶ್ರಮಪಡಬೇಕು. ಒಂದು ಬಾರಿ ನೀವು ಇದನ್ನು ಪೂರೈಸಿದರೆ, ನಾವು ಅದೇ ಹಾದಿಯಲ್ಲಿ ಮುಂದುವರಿಯಬಹುದು.
ನಾವು ಒಂದು ಗೋಲು ದಾಖಲಿಸಿದಾಗ ಅದು ಸಂಪೂರ್ಣ ತಂಡದ ಪ್ರಯತ್ನವಾಗಿರುತ್ತದೆ. ನಾವು ಸೋಲನುಭವಿಸಿದಾಗಲೂ ಅದು ಸಂಪೂರ್ಣ ತಂಡದ ವೈಫಲ್ಯವಾಗಿರುತ್ತದೆ. ಮ್ಯಾನ್ಮಾರ್ ವಿರುದ್ಧದ ಪಂದ್ಯದಲ್ಲಿ ಗುವಾಮ್ ತೀವ್ರ ವೈಫಲ್ಯ ಅನುಭವಿಸಿತು. ಹೀಗಾಗಿ ಮ್ಯಾನ್ಮಾರ್ ಸುಲಭವಾಗಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಗುವಾಮ್ ತಂಡದಲ್ಲಿ ಅಮೆರಿಕದ ಮೂಲದ ಕೆಲ ಆಟಗಾರರಿದ್ದಾರೆ' ಎಂದು ಅವರು ಹೇಳಿದರು.
ಗುವಾಮ್ ತಂಡದ ಇಬ್ಬರು ಆಟಗಾರರು ಪ್ರಮುಖ ಫುಟ್ಬಾಲ್ ಲೀಗ್‌ನಲ್ಲಿ ಆಡಿದ್ದರೆ, ಇತರ ಮೂವರು ಆಟಗಾರರು ಫಿಲಿಪಿನ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಆಡಿದ್ದಾರೆ.
'ವಿದೇಶಿ ಮೂಲದ ಆಟಗಾರರು ಹೊಂದಿಕೊಳ್ಳಲು ಥಾಯ್ಲೆಂಡ್‌ನಲ್ಲಿ ಒಂದು ವಾರ ಕಾಲ ತರಬೇತಿ ಶಿಬಿರವನ್ನು ನಡೆಸಿದ್ದೇವೆ' ಎಂದು ಗುವಾಮ್ ತಂಡದ ತರಬೇತುದಾರ ಗ್ಯಾರಿ ವೈಟ್ ಹೇಳಿದ್ದಾರೆ.
'ನಾವು ಗೆಲುವಿನ ನಿರೀಕ್ಷೆಯಲ್ಲಿ ವಿಶ್ವಾಸದಿಂದ ಇದ್ದೇವೆ. ಅಲ್ಲದೆ ಇಲ್ಲಿಗೆ ಬರುವ ಮುನ್ನ ಸೂಕ್ತ ಅಭ್ಯಾಸ ನಡೆಸಿದ್ದೇವೆ' ಎಂದು ಅವರು ಹೇಳಿದರು.
'ನೆಹರು ಕಪ್ ಪಂದ್ಯಾವಳಿಯಿಂದ ನಾನು ಸಮರ್ಥ ಫುಟ್ಬಾಲ್ ಆಟವನ್ನು ಮೈಗೂಡಿಸಿಕೊಂಡಿದ್ದೇನೆ.
ಸಿಂಗಾಪುರ ಮತ್ತು ಪ್ಯಾಲೆಸ್ತೀನ್ ವಿರುದ್ಧದ ಪಂದ್ಯಗಳೇ ಇದಕ್ಕೆ ಸಾಕ್ಷಿಯಾಗಿವೆ. ಆ ಎರಡೂ ಪಂದ್ಯಗಳಲ್ಲಿ ಸೋತರೂ ಉತ್ತಮ ಪ್ರದರ್ಶನ ನೀಡಿದ್ದೇವೆ.
ನಿರಂತರವಾಗಿ ನಾವು ಇದನ್ನು ಸಾಧಿಸುತ್ತಿರಬೇಕು' ಎಂದು ಭಾರತ ತಂಡದ ಆಟಗಾರ ಕ್ಲಿಫಾರ್ಡ್ ಮಿರಾಂಡಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.