ಕಿವೀಸ್ ಮಣಿಸಲೇಬೇಕು

ಐಪೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅಮೋಘ ಜಯ ಸಾಧಿಸುವ ಮೂಲಕ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಆಸೆ ಜೀವಂತವಾಗುಳಿಸಿಕೊಂಡಿರುವ ಭಾರತ, ಗೆಲ್ಲಲೇಬೇಕಾದ ಇನ್ನೊಂದು ಪಂದ್ಯದಲ್ಲಿ ಗುರುವಾರ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಕೈಚೆಲ್ಲಿರುವ ಭಾರತ, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ತನ್ನ ಪ್ರಶಸ್ತಿ ಭರವಸೆಯನ್ನು ಜೀವಂತವಾಗಿ ಉಳಿಸಿಕೊಳ್ಳಬಹುದಾಗಿದೆ.
ಇನ್ನು ನ್ಯೂಜಿಲೆಂಡ್ ತಂಡಕ್ಕೂ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯವಿದೆ. ಹಾಗಾಗಿ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಭಾರತ ಮೂರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 7 ಅಂಕಗಳನ್ನು ಪಡೆದಿರುವ ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ಅಗ್ರ ಸ್ಥಾನದಲ್ಲಿದ್ದರೆ, 3 ಅಂಕಗಳನ್ನು ಪಡೆದಿರುವ ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮಲೇಷ್ಯಾ ಮತ್ತು ಆಸ್ಟ್ರೇಲಿಯಾ 1-1 ಅಂತರದಿಂದ ಡ್ರಾ ಸಾಧಿಸಿದ್ದು, ಇತರ ನಾಲ್ಕು ತಂಡಗಳಿಗೆ ಕಠಿಣ ಸವಾಲು ತಂದೊಡ್ಡಿದೆ. ಅಜೇಯ ಹೋರಾಟ ನಡೆಸಿರುವ ಮಲೇಷ್ಯಾ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಡ್ರಾ ಪಂದ್ಯ ಪಂದ್ಯಾವಳಿಗೆ ತಿರುವು ನೀಡಿದ್ದು, ಮುಂದಿನ ಸುತ್ತಿಗೆ ಯಾವ ತಂಡಗಳು ಪ್ರವೇಶ ಪಡೆಯಲಿವೆ ಎಂಬುದನ್ನು ನೋಡಲು ಕಾಯಬೇಕಾದ ಅಗತ್ಯವಿದೆ. ಈ ಎರಡೂ ತಂಡಗಳು ಗುರುವಾರ ನಡೆಯಲಿರುವ ಕೊರಿಯಾ ಮತ್ತು ಪಾಕಿಸ್ತಾನಗಳ ವಿರುದ್ಧದ ಪಂದ್ಯಗಳಲ್ಲಿ ಆಸೀಸ್ ಮತ್ತು ಮಲೇಷ್ಯಾ ಯಾವ ರೀತಿ ಫಲಿತಾಂಶ ಕಾಣುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಗುರುವಾರದ ಪಂದ್ಯಗಳಲ್ಲಿ ಈ ಎರಡೂ ತಂಡಗಳು ಗೆದ್ದರೆ, ತಲಾ 10 ಅಂಕಗಳನ್ನು ಪಡೆಯಲಿವೆ. ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಕೊರಿಯಾ ತಂಡಗಳು ಪಂದ್ಯಾವಳಿಯಲ್ಲಿ ತಲಾ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು, ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಒದ್ದಾಡುತ್ತಿವೆ.
ಆಸ್ಟ್ರೇಲಿಯಾ ವಿರುದ್ಧ 3-4 ಮತ್ತು ಕೊರಿಯಾ ವಿರುದ್ಧ 1-2 ಗೋಲುಗಳಿಂದ ಕೂದಲೆಳೆ ಅಂತರದಿಂದ ಕೈಚೆಲ್ಲಿದ್ದೇ ಭಾರತ ಈಗ ಇಕ್ಕಟ್ಟಿನ ಸ್ಥಿತಿ ತಲುಪಲು ಕಾರಣವಾಗಿದೆ. ಹೀಗಾಗಿ ಈಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ದಿನದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸುವ ಭರವಸೆಯನ್ನೂ ಭಾರತ ಹೊಂದಿದೆ.
ಇನ್ನು ಶನಿವಾರ ನಡೆಯಲಿರುವ ಅಂತಿಮ ರೌಂಡ್ ರಾಬಿನ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಲು ಎದುರು ನೋಡುತ್ತಿವೆ.
ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯ ಕಂಡುಕೊಂಡಿರುವುದು ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸ್ಫೂರ್ತಿಯ ಪ್ರದರ್ಶನ ನೀಡಿದ್ದ ಭಾರತ 3-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತ್ತು. 'ಗೆಲ್ಲುವ ಅಗತ್ಯವಿದ್ದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಆಟಗಾರರು ಸ್ಫೂರ್ತಿಯ ಪ್ರದರ್ಶನ ನೀಡಿದ್ದಾರೆ. ಇನ್ನೂ ಕೆಲವು ವಿಭಾಗಗಳಲ್ಲಿ ನಾವು ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿದೆ. ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಏಷ್ಯಾ ರಾಷ್ಟ್ರಗಳಿಗಿಂತ ಭಿನ್ನವಾದ ಪ್ರದರ್ಶನ ನೀಡಲಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತದ ಆಟಗಾರರು ತಮ್ಮ ವೇಗ ಮತ್ತು ಸಾಮರ್ಥ್ಯವನ್ನು ಸಾಧ್ಯವಾದಷ್ಟು ಉಪಯೋಗಿಸಿಕೊಳ್ಳಲಿದ್ದಾರೆ.' ಎಂದು ತಂಡದ ಮುಖ್ಯ ತರಬೇತುದಾರ ಮೈಕಲ್ ನಾಬ್ಸ್ ಹೇಳಿದ್ದಾರೆ.
ಒಂದು ವೇಳೆ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದರೆ, ಇತರ ಪಂದ್ಯಗಳ ಫಲಿತಾಂಶಗಳ ಅನುಕೂಲವಾಗಬೇಕು. ಆಗ ಮಾತ್ರ ಶನಿವಾರ ಮಲೇಷ್ಯಾ ವಿರುದ್ಧ ನಡೆಯಲಿರುವ ಅಂತಿಮ ರೌಂಡ್ ರಾಬಿನ್ ಲೀಗ್ ಪಂದ್ಯ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


