ಕ್ರೀಡೆ

ಸರಣಿ ಜಯದ ಕಾತರದಲ್ಲಿ ಭಾರತ

ಸರಣಿ ಜಯದ ಕಾತರದಲ್ಲಿ ಭಾರತ
Published On :

ನವದೆಹಲಿ: ಆರಂಭಿಕ ಎರಡು ಪಂದ್ಯಗಳಲ್ಲಿ ವಿಜಯ ಸಾಧಿಸುವ ಮೂಲಕ ವಿಶ್ವಾಸ ಇಮ್ಮಡಿಸಿಕೊಂಡಿರುವ ಭಾರತಕ್ಕೆ ಆಸೀಸ್ ವಿರುದ್ಧ ಸರಣಿ ಜಯ ಸಾಧಿಸಲು ಗುರುವಾರದಿಂದ ಆರಂಭವಾಗಲಿರುವ ಮೊಹಾಲಿ ಟೆಸ್ಟ್ ಸೂಕ್ತ ವೇದಿಕೆಯಾಗಿದೆ. ಸೋಲಿನ ಕಹಿಯಿಂದ ಕುಗ್ಗಿರುವ ತಂಡದಲ್ಲಿ ಉಂಟಾಗಿರುವ ವಿವಾದ ಆಸೀಸ್‌ಗೆ ಮತ್ತಷ್ಟು ಹಿನ್ನಡೆ ಉಂಟುಮಾಡಿದೆ. ಇದು ಟೀಂ ಇಂಡಿಯಾಗೆ ಇನ್ನಷ್ಟು ಅನುಕೂಲಕರವಾಗಿ ಪರಿಣಮಿಸಲಿದೆ.
ಚೆನ್ನೈ ಮತ್ತು ಹೈದರಾಬಾದ್ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ ಬಲಿಷ್ಠ ಆಸ್ಟ್ರೇಲಿಯಾ, ಉಪನಾಯಕ ಶೇನ್ ವ್ಯಾಟ್ಸನ್ ಸೇರಿದಂತೆ ತನ್ನ ಪ್ರಮುಖ ನಾಲ್ಕು ಆಟಗಾರರಿಗೆ ಕೊಕ್ ನೀಡಿರುವುದು ತಂಡದಲ್ಲಿ ತಳಮಳ ಉಂಟಾಗಲು ಕಾರಣವಾಗಿದೆ. ಹೀಗಾಗಿ ಗೆಲ್ಲಲೇಬೇಕಾದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಈಗ ಕುತೂಹಲ ಉಂಟುಮಾಡಿದೆ.

ಕಾಂಗರೂ ತಂಡದ ವಿರುದ್ಧ ಭಾರತ ಹಲವಾರು ಬಾರಿ ವೈಟ್‌ವಾಷ್ ಆಗಿದೆ. ಆದರೆ, ಆತಿಥೇಯ ಭಾರತ 1979-80ರಲ್ಲಿ ಆಸೀಸ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿತ್ತು. ನಂತರ 2008-09ರಲ್ಲಿ ಮತ್ತು 2010-11ರಲ್ಲಿ 2-0 ಅಂತರದಿಂದ ಸರಣಿಯಲ್ಲಿ ಜಯ ಕಂಡುಕೊಂಡಿದೆ.

ಮೊಹಾಲಿ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ 3-0 ಅಂತರದಿಂದ ಮುನ್ನಡೆ ಸಾಧಿಸಿದರೆ, ಇದು ಆಸೀಸ್ ವಿರುದ್ಧ ಭಾರತ ತಂಡದ ಅದ್ಭುತ ಸಾಧನೆಯಾಗಲಿದೆ. ಅಲ್ಲದೆ ಕಳೆದ ಬಾರಿ ಆಸೀಸ್ ಪ್ರವಾಸದಲ್ಲಿ 4-0 ಅಂತರದಿಂದ ಸೋಲನುಭವಿಸದ ಭಾರತಕ್ಕೆ ಸೇಡು ತೀರಿಸಿಕೊಂಡಂತಾಗುತ್ತದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 8 ವಿಕೆಟ್ ಅಂತರದಿಂದ ಸುಲಭವಾಗಿ ಜಯ ಸಾಧಿಸಿತ್ತು. ನಂತರ ಹೈದರಾಬಾದ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 135 ರನ್‌ಗಳ ಅಂತರದಿಂದ ವಿಜಯ ಕಂಡುಕೊಂಡಿತ್ತು.
ಈ ಮೂರನೇ ಟೆಸ್ಟ್‌ನಲ್ಲಿ ಆಸೀಸ್ ವ್ಯಾಟ್ಸನ್, ವೇಗಿ ಜೇಮ್ಸ್ ಪ್ಯಾಟಿನ್ಸನ್, ಮಿಚೆಲ್ ಜಾನ್ಸನ್ ಹಾಗೂ ಬ್ಯಾಟ್ಸ್‌ಮನ್ ಉಸ್ಮಾನ್ ಖಾವ್ಜಾ ಅವರನ್ನು ಕೈಬಿಟ್ಟಿರುವುದು ಭಾರತಕ್ಕೆ ಇನ್ನಷ್ಟು ಅನುಕೂಲಕರವಾಗಿ ಪರಿಣಮಿಸಿದೆ.

ಪೂಜಾರ ಗಾಯದ ಆತಂಕ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮಂಗಳವಾರ ನೆಟ್ ಅಭ್ಯಾಸ ಮಾಡುತ್ತಿರುವಾಗ ಗಾಯಗೊಂಡಿರುವುದು ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ. ನೆಟ್ ಪ್ರಾಕ್ಟೀಸ್‌ನಲ್ಲಿ ಸ್ಥಳೀಯ ಬೌಲರ್ ಒಬ್ಬರಿಂದ ಪೂಜಾರ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿದೆ. ನೋವಿನಿಂದ ಪೂಜಾರ ಅಭ್ಯಾಸವನ್ನೇ ನಿಲ್ಲಿಸಿದ್ದರು.

ಆದರೆ, ಪೂಜಾರ 3ನೇ ಟೆಸ್ಟ್ ಪಂದ್ಯದಲ್ಲಿ ಆಡುವ 11 ಆಟಗಾರರ ಪಟ್ಟಿಯಲ್ಲಿ ಸೇರಲಿದ್ದಾರೆ ಎನ್ನಲಾಗಿದೆ. 3ನೇ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಆಶ್ರಯವಾಗಿರುವ ಪೂಜಾರ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಧವನ್‌ಗೆ ಅವಕಾಶ: ಆಸ್ಟ್ರೇಲಿಯಾ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾದರೆ, ಭಾರತ ತಂಡದಲ್ಲಿ ಕೇವಲ ವೀರೇಂದ್ರ ಸೆಹ್ವಾಗ್ ಅವರನ್ನು ಮಾತ್ರ ಕೈಬಿಡಲಾಗಿದ್ದು, ಉಳಿದೆಲ್ಲ ಆಟಗಾರರನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ಸ್ಪಿನ್ನರ್‌ಗಳಾದ ಪ್ರಗ್ಯಾನ್ ಓಜಾ ಮತ್ತು ಹರ್ಭಜನ್ ಸಿಂಗ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಈಗ ಮಹೇಂದ್ರ ಸಿಂಗ್ ಧೋನಿ ತಂಡ ಆಡುವ 11 ಆಟಗಾರರಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸೆಹ್ವಾಗ್ ಅವರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಲು ಕಾಯುತ್ತಿರುವ ದೆಹಲಿಯ ಶಿಖರ್ ಧವನ್, ಮುರಳಿ ವಿಜಯ್ ಅವರೊಂದಿಗೆ ಆರಂಭಿಕರಾಗಿ ಅಂಗಣಕ್ಕಿಳಿಯುವ ಸಾಧ್ಯತೆಗಳಿವೆ. ಇನ್ನು ಮುಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರರಾದ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಹಿರಿಯ ಆಟಗಾರ ಸಚಿನ್ ತೆಂಡೂಲ್ಕರ್ ಭಾರತಕ್ಕೆ ನೆರವಾಗಲಿದ್ದಾರೆ.

ಮೊಹಾಲಿ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲವಾಗುವ ಸಾಧ್ಯತೆಗಳಿದ್ದು, ಭಾರತ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ಯೂರೇಟರ್ ದಲ್ಜಿತ್ ಸಿಂಗ್ ಹೇಳಿದ್ದಾರೆ.

ಇನ್ನೊಂದೆಡೆ ಆಸ್ಟ್ರೇಲಿಯಾ ತಂಡದ ಪರವಾಗಿ ಎಡ್ ಕೋವನ್ ಮತ್ತು ಡೇವಿಡ್ ವಾರ್ನರ್ ಪ್ರವಾಸಿ ತಂಡದ ಆರಂಭಿಕರಾಗಿ ಅಂಗಣಕ್ಕಿಳಿಯಲಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಫಿಲ್ ಹ್ಯೂಸ್ 3ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿಯಲಿದ್ದಾರೆ. ಕೊವನ್ ಮತ್ತು ಹ್ಯೂಸ್ ಆಡುವ 11 ಆಟಗಾರರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಪ್ರವಾಸಿ ತಂಡಕ್ಕೆ ನೆರವಾಗಿದ್ದ ನಾಯಕ ಮೈಕಲ್ ಕ್ಲಾರ್ಕ್ ಮೇಲೆ ಈ ಪಂದ್ಯದಲ್ಲಿ ಆಸೀಸ್ ಅವಲಂಬಿತವಾಗುವ ಸಾಧ್ಯತೆಗಳಿವೆ. ಇನ್ನು ಐಪಿಎಲ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬ ಬಗ್ಗೆ ಖಚಿತವಿಲ್ಲ. ಆದರೆ, ಮೊಯ್ಸಿಸ್ ಹೆನ್ರಿಕೇಸ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್ ಅವರೇ ತಂಡಕ್ಕೆ ಆಶ್ರಯವಾಗುವ ನಿರೀಕ್ಷೆಗಳಿವೆ.

ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಪಂದ್ಯಕ್ಕೆ ಫಿಟ್ ಆಗಿದ್ದಾರೆಯೇ ಎಂಬ ಬಗ್ಗೆ ಇದುವರೆಗೂ ಖಚಿತಪಟ್ಟಿಲ್ಲ. ವೇಡ್ ಫಿಟ್ ಆಗದಿದ್ದರೆ ಬ್ರಾಡ್ ಹ್ಯಾಡಿನ್ ಅವರ ಸ್ಥಾನ ತುಂಬಲಿದ್ದಾರೆ. ಜೇವಿಯರ್ ಡೊಹರ್ಟಿ ಮತ್ತು ನೇಥನ್ ಲಯಾನ್ ಅವರು ತಂಡಕ್ಕೆ ನೆರವಾಗುವ ಸಾಧ್ಯತೆಗಳಿವೆ.

ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮಾ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ.

ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಎಡ್ ಕೋವನ್, ಡೇವಿಡ್ ವಾರ್ನರ್, ಫಿಲ್ ಹ್ಯೂಸ್, ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ನೇಥನ್ ಲಯಾನ್, ಮೊಯ್ಸಿಸ್ ಹೆನ್ರಿಕೇಸ್, ಜೇವಿಯರ್ ಡೊಹರ್ಟಿ, ಜಾಕ್ಸನ್ ಬರ್ಡ್, ಸ್ಟೀವ್ ಸ್ಮಿತ್, ಬ್ರಾಡ್ ಹ್ಯಾಡಿನ್, ಮ್ಯಾಥ್ಯೂ ವೇಡ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.