ವರುಣನೆದುರು ನಡೆಯದಾಟ

ಮೊಹಾಲಿ: ವಿಶ್ವದ ಬಲಿಷ್ಠರೆಂದು ಬೀಗುತ್ತಿದ್ದ ಕಂಗರೂಗಳ ವಿರುದ್ಧ ಸಮರ್ಥ ಹೋರಾಟ ಭಾರತ ತಂಡಕ್ಕೆ ವರುಣರಾಯ ಅಲ್ಪ ವಿರಾಮವಿಟ್ಟಿದ್ದಾನೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊಹಾಲಿಯಲ್ಲಿ ನಡೆಯಬೇಕಾಗಿದ್ದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದೆ. ನಸುಕಿನಲ್ಲೇ ಆರಂಭವಾದ ವರುಣನ ಅರ್ಭಟ ಮಧ್ಯಾಹ್ನವಾದರೂ ನಿಲ್ಲಲೇ ಇಲ್ಲ.
ಹೀಗಾಗಿ, ಮಧ್ಯಾಹ್ನ 1.15ಕ್ಕೆ ದಿನದ ಆಟವನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು. ಇದರಿಂದ ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುವ ಕಾತರದಲ್ಲಿದ್ದ ಭಾರತ ತಂಡಕ್ಕೆ ನಿರಾಸೆ ಉಂಟಾಯಿತು.
ಬೆಳಗಿನಿಂದ ಬಿಡದ ಸುರಿದ ಮಳೆ ಹಿನ್ನೆಲೆಯಲ್ಲಿ, ಟಾಸ್ ಹಾಕಲೂ ಸಮಯ ದೊರಕಲಿಲ್ಲ. ಇನ್ನೂ ಟಾಸ್ ಹಾಕದಿರುವ ಬಗ್ಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಸಹ ಕಾರ್ಯದರ್ಶಿ ಜಿ.ಎಸ್ ವಾಲಿಯಾ ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತ ಇದುವರೆಗೂ ಆಸ್ಟ್ರೇಲಿಯಾ ವಿರುದ್ಧ 2-0ಕ್ಕಿಂತ ಹೆಚ್ಚಿನ ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿಲ್ಲ. ಹೀಗಾಗಿ ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಗೆದ್ದಿರುವ ಭಾರತ 2-0 ಅಂತರದಿಂದ ಈಗಾಗಲೇ ಮುನ್ನಡೆ ಕಂಡುಕೊಂಡಿದೆ. 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಜಯ ಕಾಣುವ ಕಾತರದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಈ ಹಿಂದೆ ಯಾವತ್ತೂ ಇಷ್ಟೊಂದು ಬಲಿಷ್ಠ ಪ್ರದರ್ಶನ ತೋರುವ ಹಂತ ತಲುಪಿರಲಿಲ್ಲ.
ಚೆನ್ನೈ ಮತ್ತು ಹೈದರಾಬಾದ್ ಟೆಸ್ಟ್ಗಳಲ್ಲಿ ಕೈಚೆಲ್ಲಿರುವ ಆಸ್ಟ್ರೇಲಿಯಾ ಅತಿಥೇಯ ತಂಡದ ವಿರುದ್ಧ ವೈಟ್ವಾಷ್ ಅನುಭವಿಸುವ ಸಾಧ್ಯತೆಗಳಿವೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಸಹ ಸರಣಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ಆದರೆ, ಆಸೀಸ್ ವಿರುದ್ಧ ಸಾಧನೆ ಮಾಡಲು ಎದುರು ನೋಡುತ್ತಿದ್ದ ಧೋನಿ ಪಡೆಗೆ ವರುಣದೇವ ಅಡ್ಡಿ ಉಂಟುಮಾಡಿದ್ದಾನೆ. ಶುಕ್ರವಾರ ಸಹ ಮೊಹಾಲಿಯಲ್ಲಿ ಮಳೆ ಬೀಳುವ ಸಾಧ್ಯತೆಗಳಿದ್ದು, 2ನೇ ದಿನದ ಪಂದ್ಯಕ್ಕೂ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ.
ಬೆಳಗ್ಗೆ ಸ್ಟೇಡಿಯಂಗೆ ಆಗಮಿಸಿದ್ದ ಭಾರತದ ಆಟಗಾರರು ಅಲ್ಲಿ ಕೆಲ ಹೊತ್ತು ಕಾಯ್ದು, ನಂತರ ಹೊಟೇಲ್ ಕೊಠಡಿಗಳಿಗೆ ವಾಪಸ್ ಆಗಿದ್ದಾರೆ.
ಆಸ್ಟ್ರೇಲಿಯಾದ ಆಟಗಾರರು ಸಹ ಮಳೆಯಿಂದ ಒದ್ದೆಯಾದ ಮೈದಾನದಲ್ಲಿ ಬೆಳಗಿನ ಹೊತ್ತು ಸಂತಸ ಅನುಭವಿಸಿದರು. ಆಸ್ಟ್ರೇಲಿಯಾ ತಂಡದ ಕೋಚ್ ಮಿಕಿ ಆರ್ಥರ್ ಸಹ ಸ್ಟೇಡಿಯಂನಲ್ಲಿ ಕಂಡುಬಂದರು.ಸ್ಟೇಡಿಯಂನಲ್ಲಿದ್ದ ಗ್ರೌಂಡ್ಸ್ಮನ್ಗಳು ಪಿಚ್ಚನ್ ಸಂಪೂರ್ಣ ಹೊದಿಕೆ ಹೊಚ್ಚಿ, ಪಂದ್ಯ ನಡೆಯಲು ಅನುಕೂಲವಾಗಲು ಒದ್ದಾಡಿದರು. ಆದರೆ, ವರುಣರಾಯ ಅದಕ್ಕೆ ಅವಕಾಶ ನೀಡಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


