ಕ್ರೀಡೆ

ಕ್ವಾರ್ಟರ್‌ಗೆ ಸೈನಾ

Published On :

ಬಾಸೆಲ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು, ಸ್ವಿಸ್ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಪ್ರೀ- ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಬಲ್ಗೇರಿಯಾದ ಪೆಟ್ಯಾ ನೆಡೆಲ್ಚೆವಾ ಅವರ ವಿರುದ್ಧ 21-15, 21-10 ಅಂತರದಲ್ಲಿ ಜಯ ಸಾಧಿಸಿದರು.
ಹಾಲಿ ಚಾಂಪಿಯನ್ ಆಗಿರುವ ಸೈನಾ ನೆಹ್ವಾಲ್, ಈ ಪಂದ್ಯಾವಳಿಯಲ್ಲೂ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಪಡೆದ ಗೆಲುವಿನಿಂದಾಗಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಸೈನಾ ಮರಳಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ವಿಶ್ವದ 23ನೇ ರ್ಯಾಂಕಿಂಗ್‌ನಲ್ಲಿರುವ ನೆಡೆಲ್ಚೆವಾ ಅವರನ್ನು ಸುಲಭವಾಗಿ ಮಣಿಸಿದರು.
ಪಂದ್ಯದ ಆರಂಭದಿಂದಲೂ ಎದುರಾಳಿ ವಿರುದ್ಧ ಉತ್ತಮ ಆಟವನ್ನು ಪ್ರದರ್ಶಿಸಿದ ಸೈನಾ, ಯಾವುದೇ ಹಂತದಲ್ಲೂ ನೆಡೆಲ್ಚೆವಾ ಅವರು ತಮ್ಮ ಮೇಲೆ ಹಿಡಿತ ಸಾಧಿಸಲು ಬಿಡಲಿಲ್ಲ. ಅತ್ತ, ನೆಡೆಲ್ಚೆವಾ ಅವರು, ಸೈನಾ ಅವರನ್ನು ಮಣಿಸಲು ತೀವ್ರವಾಗಿ ಪ್ರಯತ್ನಪಟ್ಟರು. ಆದರೆ, ಗೇಮ್ ಅನ್ನು ಅವರ ಹಿಡಿತಕ್ಕೆ ತೆಗೆದುಕೊಳ್ಳುವುದು ಅವರಿಂದ ಸಾಧ್ಯವಾಗಲಿಲ್ಲ. ಸೈನಾ ಮಾತ್ರ ತಮ್ಮ ಆಕರ್ಷಕ ಹೊಡೆತಗಳಿಂದ ನೆಡೆಲ್ಚೆವಾ ಅವರ ವಿರುದ್ಧ ಪ್ರಬುದ್ಧತೆ ಸಾಧಿಸಿ, ಮೊದಲ ಗೇಮ್ ಅನ್ನು 21-15ರ ಅಂತರದಲ್ಲಿ ಗೆದ್ದುಕೊಂಡರು.
ಈ ಸೋಲಿನಿಂದ ಕೊಂಚ ಅಧೀರರಾದಂತೆ ಕಂಡುಬಂದ ನೆಡೆಲ್ಚೆವಾ, ದ್ವಿತೀಯ ಗೇಮ್‌ನಲ್ಲಿ ಕೊಂಚ ಮಂಕಾದಂತೆ ಕಂಡುಬಂದರು. ಮೊದಲ ಗೇಮ್‌ನ ತಮ್ಮ ಆಟದಲ್ಲಿ ಇದ್ದ ಮೊನಚು, ಎರಡನೇ ಗೇಮ್‌ನಲ್ಲಿ ಕಂಡುಬರಲಿಲ್ಲ.
ಆದರೆ,  ಸೈನಾ ಮಾತ್ರ ನೆಡೆಲ್ಚೆವಾ ವಿರುದ್ಧ ವಿಜೃಂಭಿಸಿದರು. ಹಂತಹಂತಕ್ಕೂ ನೆಡೆಲ್ಚೆವಾ ಅವರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರೆಸುತ್ತಲೇ ಇದ್ದ ಸೈನಾ, ಅದರಲ್ಲಿ ಯಶಸ್ವಿಯಾದರು.
ಸೈನಾರ ಜೋರು ಆಟಕ್ಕೆ ಹೆಚ್ಚು ಪ್ರತಿರೋಧ ತೋರಲು ಹೋಗದ ನೆಡೆಲ್ಚೆವಾ, ಈ ಸೆಟ್‌ನಲ್ಲಿ 21-10ರ ಭಾರೀ ಅಂತರದಲ್ಲಿ ಸೋತು, ಪಂದ್ಯವನ್ನು ಸೈನಾ ಅವರಿಗೆ ಬಿಟ್ಟುಕೊಟ್ಟರು.
ಯಿಂಗ್ ತೈ ಎದುರಾಳಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿರುವ ಸೈನಾ, ಅಲ್ಲಿ, ತೈಪೇನ ತ್ಸು ಯಿಂಗ್ ತೈ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.