ಧವನ್ ಅಲಭ್ಯರಾದರೆ ರಹಾನೆಗೆ ಸ್ಥಾನ?

ನವದೆಹಲಿ: ಪದಾರ್ಪಣೆ ಮಾಡಿದ ಟೆಸ್ಟ್ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು, ಆಸೀಸ್ ವಿರುದ್ಧ 4ನೇ ಟೆಸ್ಟ್ಗೆ ಅಲಭ್ಯರಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಧವನ್ ಸ್ಥಾನದಲ್ಲಿ ಆರಂಭಿಕರಾಗಿ ಅಂಗಣಕ್ಕಿಳಿಯಲು ಅಜಿಂಕ್ಯ ರಹಾನೆ ಅಥವಾ ಚೇತೇಶ್ವರ ಪೂಜಾರ ಸ್ಪರ್ಧೆಯಲ್ಲಿದ್ದಾರೆ.
ಹೀಗಾಗಿ ಕಳೆದ 15 ತಿಂಗಳಿಂದ ಭಾರತ ಟೆಸ್ಟ್ ತಂಡದೊಂದಿಗಿದ್ದರೂ ಅವಕಾಶ ದೊರಕದ, ಮುಂಬೈ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಅಂತಿಮವಾಗಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.
ಆಸೀಸ್ ವಿರುದ್ಧ ದೆಹಲಿಯಲ್ಲಿ ಶುಕ್ರವಾರ 4ನೇ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಆದರೆ, ಶಿಖರ್ ಸ್ಥಾನ ಯಾರು ತುಂಬಲಿದ್ದಾರೆ ಎಂಬುದನ್ನು ಭಾರತೀಯ ಕ್ರಿಕೆಟ್ ಮಂಡಳಿ ಇದುವರೆಗೂ ಪ್ರಕಟಿಸಿಲ್ಲ.
ಅಜಿಂಕ್ಯ ರಹಾನೆ ಅವರೇ ಧವನ್ ಸ್ಥಾನ ತುಂಬುವ ಹೆಚ್ಚಿನ ಲಕ್ಷಣಗಳು ಕಾಣುತ್ತಿವೆ. ಆದರೆ, ಮುರಳಿ ವಿಜಯ್ ಅವರೊಂದಿಗೆ ರಹಾನೆ ಆರಂಭಿಕರಾಗಿ ಅಂಗಣಕ್ಕಿಳಿಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಪೂಜಾರ ವಿಜಯ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿಯಲಿದ್ದು, ರಹಾನೆ ಮಧ್ಯಮ ಕ್ರಮಾಂಕದವರಾಗಿ ಅಂಗಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಅಂತಿಮ ಟೆಸ್ಟ್ ಪಂದ್ಯದಲ್ಲಿ ರಹಾನೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಅಂಗಣಕ್ಕಿಳಿಯಲಿದ್ದು, ಪೂಜಾರ ಆರಂಭಿಕ ಆಟಗಾರನ ಪಾತ್ರ ನಿರ್ವಹಿಸಬೇಕು ಎಂಬುದು ಭಾರತ ತಂಡದ ಆಡಳಿತ ಮಂಡಳಿಯ ತೀರ್ಮಾನ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಇನ್ನು ತಂಡದಿಂದ ಹೊರಗೆ ನೋಡಿದರೆ, ಅಭಿನವ್ ಮುಕುಂದ್ ಮಾತ್ರ ಧವನ್ ಸ್ಥಾನ ತುಂಬುವ ಇನ್ನೊಬ್ಬ ಆಟಗಾರ ಎನಿಸಿದ್ದಾರೆ. ಒಂದು ವೇಳೆ ವಿರೇಂದ್ರ ಸೆಹ್ವಾಗ್ ಅಥವಾ ಗೌತಮ್ ಗಂಭೀರ್ಗೆ ಮರಳಿ ತಂಡದಲ್ಲಿ ಸ್ಥಾನ ನೀಡಿದರೆ, ಇದಕ್ಕಿಂತ ಅಚ್ಚರಿಯ ವಿಷಯ ಇನ್ನೊಂದಿಲ್ಲ.
ಸರಣಿಯನ್ನು ಗೆದ್ದ ನಂತರ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಬಗ್ಗೆ ಸಹ ನಾಯಕ ಮಹೇಂದ್ರ ಸಿಂಗ್ ಧೋನಿ ಸುಳಿವು ನೀಡಿದ್ದಾರೆ. ಹೀಗಾಗಿ ಹರ್ಭಜನ್ ಸಿಂಗ್ ಅಥವಾ ಅಶೋಕ್ ದಿಂಡಾ ತಂಡದಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆಗಳಿವೆ.
ರ್ಯಾಂಕಿಂಗ್: ಕೊಹ್ಲಿ, ವಿಜಯ್, ಧವನ್ಗೆ ಬಡ್ತಿ
ಮುಂಬೈ: ಪ್ರಸ್ತುತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರರಾದ ಭಾರತದ ಮುರಳಿ ವಿಜಯ್, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿರುವ ಆರಂಭಿಕ ಆಟಗಾರ ಮುರಳಿ ವಿಜಯ್ 16 ಸ್ಥಾನಗಳ ಜಿಗಿತದೊಂದಿಗೆ 43ನೇ ಸ್ಥಾನ ಪಡೆದಿದ್ದು, ಪದಾರ್ಪಣೆ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ಶಿಖರ್ ಧವನ್ ರ್ಯಾಕಿಂಗ್ ಪಟ್ಟಿಯಲ್ಲಿ ಪ್ರವೇಶ ಪಡೆದು 61ನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ 20ನೇ ಸ್ಥಾನಗಳಿಸಿದ್ದು ಮೊದಲ ಬಾರಿಗೆ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಇಂಗ್ಲೆಂಡ್ನ ಕಾಂಪ್ಟನ್ ಹಾಗೂ ಜೊನಾಥನ್ ಟ್ರಾಟ್ ಕೂಡ ತಮ್ಮ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದಿದ್ದಾರೆ.
ಕಾಂಪ್ಟನ್ 13 ಸ್ಥಾನಗಳ ಜಿಗಿತದೊಂದಿಗೆ 56ನೇ ಸ್ಥಾನ ಪಡೆದರೇ, ಟ್ರಾಟ್ 3 ಸ್ಥಾನಗಳ ಏರಿಕೆಯೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾಟಿಂಗ್ನ ಅಗ್ರ ಎರಡು ಸ್ಥಾನದಲ್ಲಿ ಹರಿಣಗಳ ಹಶೀಂ ಆಮ್ಲಾ ಹಾಗೂ ಎಬಿ ಡಿವಿಲಿಯರ್ಸ್ ಮುಂದುವರಿದಿದ್ದು, 2 ಸ್ಥಾನಗಳಲ್ಲಿ ಕುಸಿತ ಕಂಡಿರುವ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ 4ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್ಗಳಾದ ಆರ್.ಅಶ್ವಿನ್ ಹಾಗೂ ಪ್ರಜ್ಞ್ಯಾನ್ ಓಜಾ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಉತ್ತಮ ಬೌಲಿಂಗ್ ನಡೆಸಿದ ಸ್ಟುವರ್ಟ್ ಬ್ರಾಡ್ 13ನೇ ಸ್ಥಾನದಲ್ಲಿದ್ದಾರೆ. ಹರಿಣಗಳ ಡೇಲ್ ಸ್ಟೇಯ್ನ್ ಹಾಗೂ ವರ್ನಾನ್ ಫಿಲ್ಯಾಂಡರ್ ಕ್ರಮವಾಗಿ ಅಗ್ರ ಎರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇನ್ನು ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಹಾಗೂ ಹರಿಣಗಳ ಜಾಕ್ ಕಾಲಿಸ್ ಅಗ್ರ ಎರಡು ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ಭಾರತದ ಆರ್.ಅಶ್ವಿನ್ ಹಾಗೂ ಹರಿಣಗಳ ವೇಗಿ ಫಿಲ್ಯಾಂಡರ್ ತಲಾ 312 ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಗಾಯಗೊಂಡಿರುವ ಮೈಕಲ್ ಕ್ಲಾರ್ಕ್ ಅವರು ಶೀಘ್ರವೇ ಗುಣಮುಖರಾಗಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಆಡಲಿದ್ದಾರೆ. ಈ ಬಗ್ಗೆ ಅನುಮಾನ ಬೇಡ. ತಂಡಕ್ಕೆ ಅವರ ಅಗತ್ಯವಿರುವುದರಿಂದ ಕ್ಲಾರ್ಕ್ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ.
-ಮಿಕಿ ಆರ್ಥರ್, ಆಸೀಸ್ ಕ್ರಿಕೆಟ್ ತಂಡದ ಕೋಚ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


