ಫುಟ್ಬಾಲ್ ಆಡಳಿತ ಮಂಡಳಿಗೆ ಭುಟಿಯಾ ಪ್ರವೇಶ
ನವದೆಹಲಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಾಂತ್ರಿಕ ಸಮಿತಿ ಮುಖ್ಯಸ್ಥರಾಗಿ ನೇಮಗೊಂಡಿದ್ದಾರೆ. ಇದರೊಂದಿಗೆ ಭುಟಿಯಾ ದೇಶದ ಫುಟ್ಬಾಲ್ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೋಹಾ ಏಷ್ಯಾ ಕಪ್ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ ನಂತರ 2011ರಲ್ಲಿ ಭುಟಿಯಾ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಹೇಳಿದ್ದರು. ಆ ಪಂದ್ಯಾವಳಿಯಲ್ಲಿ ಭಾರತ ಯಾವುದೇ ಪಂದ್ಯವನ್ನೂ ಗೆದ್ದಿರಲಿಲ್ಲ. 'ಭುಟಿಯಾ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಎಐಎಫ್ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ತೀರ್ಮಾನ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಸಮಿತಿ ಅಥವಾ ಸಂಸ್ಥೆಯ ಅಂತರ ಅಂಗಗಳ ಮುಖ್ಯಸ್ಥರನ್ನು ಅಧ್ಯಕ್ಷರೇ ಆಯ್ಕೆ ಮಾಡುತ್ತಾರೆ' ಎಂದು ಎಐಎಫ್ಎಫ್ ಉಪಾಧ್ಯಕ್ಷ ಸುಬ್ರತಾ ದತ್ತಾ ಹೇಳಿದ್ದಾರೆ. ಎಐಎಫ್ಎಫ್ನ ಕಳೆದ ಬಾರಿಯ ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಭುಟಿಯಾ ಅವರನ್ನು ತಾಂತ್ರಿಕ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತಂತೆ. ಭುಟಿಯಾ ನೇಮಕದ ಹಿನ್ನೆಲೆಯಲ್ಲಿ ಆ ಸ್ಥಾನದಲ್ಲಿದ್ದ ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಮೊಹ್ಮದ್ ಹಬೀಬ್ ಅವರನ್ನು ತೆಗೆದು ಹಾಕಲಾಗಿದೆ. ಹಬೀಬ್ ಅವರೊಂದಿಗೆ ಸದ್ಯದ ತಾಂತ್ರಿಕ ಸಮಿತಿ, ಮಾಜಿ ಆಟಗಾರರಾದ ಇಂದರ್ ಸಿಂಗ್ ಮತ್ತು ಪ್ರದೀಪ್ ಚೌಧರಿ ಅವರನ್ನೊಳಗೊಂಡಿದೆ.
ಬರುವ ತಿಂಗಳು ಭಾರತಕ್ಕೆ ಬಾಂಗ್ಲಾ ವನಿತೆಯರ ತಂಡ
ನವದೆಹಲಿ: ಬಾಂಗ್ಲಾದೇಶ ವನಿತೆಯರ ಕ್ರಿಕೆಟ್ ತಂಡ ಬರುವ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಬಾಂಗ್ಲಾ ತಂಡ, ಭಾರತ ವನಿತೆಯರ ತಂಡದ ವಿರುದ್ಧ 3 ಅಂತಾರಾಷ್ಟ್ರೀಯ ಟಿ20 ಮತ್ತು 3 ಏಕದಿನ ಪಂದ್ಯಗಳಲ್ಲಿ ಭಾಗವಹಿಸಲಿದೆ ಎಂದು ಬಿಸಿಸಿಐ ಬುಧವಾರ ಪ್ರಕಟಿಸಿದೆ.
ಟಿ20 ಪಂದ್ಯಾವಳಿ ಏಪ್ರಿಲ್ 2ರಿಂದ ಬರೋಡಾದಲ್ಲಿ ಆರಂಭವಾಗಲಿದೆ. ಮೂರೂ ಟಿ20 ಪಂದ್ಯಗಳನ್ನು ಬರೋಡಾದಲ್ಲೇ ಆಡಲಾಗುತ್ತದೆ.
ಆದರೆ, ಏಪ್ರಿಲ್ 8ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೂರೂ ಪಂದ್ಯಗಳೂ ಅಹಮದಾಬಾದ್ನಲ್ಲಿ ನಡೆಯಲಿವೆ.
ಕಾಮನ್ವೆಲ್ತ್ಗೆ ಕೋಚ್ ಇಲ್ಲದ ಭಾರತ ಟಿಟಿ ತಂಡ
ನವದೆಹಲಿ: ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತೆರಳಲಿರುವ ಭಾರತ ಟೇಬಲ್ ಟೆನಿಸ್ ತಂಡಗಳು, ಸೂಕ್ತ ತರಬೇತಿಯಿಲ್ಲದೇ ಕಣಕ್ಕಿಳಿಯಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಮೇ. 5ರಿಂದ 10ರಿಂದ ನಡೆಯಲಿರುವ ಕಾಮನ್ವೆಲ್ತ್ ಪಂದ್ಯಾವಳಿಗಾಗಿ ಪುರುಷರ ತಂಡ ಸ್ವೀಡನ್ಗೆ ಹಾಗೂ ಮಹಿಳೆಯರ ತಂಡ ಚೀನಾಕ್ಕೆ ಶೀಘ್ರವೇ ಪ್ರಯಾಣ ಬೆಳೆಸಲಿದೆ. ರಾಷ್ಟ್ರೀಯ ಪುರುಷರ ಹಾಗೂ ಮಹಿಳೆಯರ ಟಿಟಿ ತಂಡಗಳಿಗೆ ತರಬೇತುದಾರರನ್ನು ನೇಮಿಸುವ ಪ್ರಕ್ರಿಯೆ ನಿಧಾನವಾಗಿ ಸಾಗುತ್ತಿರುವುದರಿಂದ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಗಳು, ಕೋಚ್ ಇಲ್ಲದೇ ಕಣಕಿಳಿಯಲಿವೆ. ವಿದೇಶಿ ಕೋಚ್ ಒಬ್ಬರನ್ನು ನೇಮಿಸಲು ಸಂಸ್ಥೆ ಉತ್ಸುಕವಾಗಿರುವುದು ಹಾಗೂ ಇತ್ತೀಚೆಗೆ ನಡೆದ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆ ಹಿನ್ನೆಲೆಯಲ್ಲಿ ಕೋಚ್ ನೇಮಕಾತಿಗೆ ಹಿನ್ನಡೆ ಉಂಟಾಗಿದೆ.
ನೈಟ್ ರೈಡರ್ಸ್ಗೆ ಆರಂಭಿಕ ಹಿನ್ನಡೆ
ನವದೆಹಲಿ: ಐಪಿಎಲ್ 6ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಇದ್ದು ಎಲ್ಲಾ ತಂಡಗಳು ಉತ್ತಮ ತಯಾರಿ ನಡೆಸುತ್ತಿವೆ. ಆದರೆ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭದಲ್ಲೆ ತೊಂದರೆ ಎದುರಾಗಿದ್ದು, ತಂಡದ ನಾಯಕ ಗೌತಮ್ ಗಂಭೀರ್ ಜಾಂಡೀಸ್ನಿಂದ ಬಳಲುತ್ತಿರುವ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇನ್ನು ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿರುವ ಶಿಖರ್ ಧವನ್ ಸಹ ಐಪಿಎಲ್ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದು, ಸನ್ರೈಸರ್ಸ್ ಹೈದರಾಬಾದ್ ತಂಡ ಹಿನ್ನಡೆ ಅನುಭವಿಸಿದೆ. ಗಂಭೀರ್ ಅನುಪಸ್ಥಿತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಅಥವಾನ್ಯೂಜಿಲೆಂಡ್ನ ನಾಯಕ ಬ್ರೆಂಡನ್ ಮೆಕಲಂ ಮುನ್ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

