ರಾಜ್ಯದ ಫೈನಲ್ ಕನಸು ಭಗ್ನ
ಇಂದೋರ್: ಬಲಿಷ್ಠ ಪ್ರದರ್ಶನ ನೀಡುವಲ್ಲಿ ವಿಫಲವಾದ ಕರ್ನಾಟಕ ತಂಡ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಬರೋಡಾ ವಿರುದ್ಧ 5 ವಿಕೆಟ್ ಅಂತರದಿಂದ ಸೋಲನುಭವಿಸಿದೆ. ಹೀಗಾಗಿ ಫೈನಲ್ ಪ್ರವೇಶಿಸುವ ರಾಜ್ಯ ತಂಡದ ಕನಸು ಭಗ್ನಗೊಂಡಿದೆ.
ಜ್ಯೋತ್ ಚಯ್ಯ (63) ಮತ್ತು ವಿಷ್ಣು ಸೋಲಂಕಿ (54) ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಬರೋಡಾ ಜಯದ ಕೇಕೆ ಹಾಕಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ, ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 167 ರನ್‌ಗಳ ಸ್ಪರ್ಧಾತ್ಮಕ ಸವಾಲು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಬರೋಡಾ ಇನ್ನೂ ಒಂದು ಎಸೆತ ಬಾಕಿ ಇರುವಂತೆ 5 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಜಯದ ಕೇಕೆ ಹಾಕಿತು.
46 ಎಸೆತಗಳನ್ನು ಎದುರಿಸಿದ ಚಯ್ಯ ಮೊತ್ತದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಇನ್ನು 35 ಎಸೆತಗಳನ್ನು ಎದುರಿಸಿದ ಸೊಲಂಕಿ ಮೊತ್ತದಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು.
ಕರ್ನಾಟಕದ ಪರ ಎರಡು ಓವರ್ ಬೌಲಿಂಗ್ ಮಾಡಿದ ಮನೀಶ್ ಪಾಂಡೆ 24 ರನ್ ನೀಡಿ ದುಬಾರಿ ಎನಿಸಿದರು. ಎಸ್.ಎಲ್ ಅಕ್ಷಯ್ ಮತ್ತು ಸ್ಟುವರ್ಟ್ ಬಿನ್ನಿ ತಲಾ ಎರಡು ವಿಕೆಟ್ ಹಾಗೂ ಅಭಿಮನ್ಯು ಮಿಥುನ್ 1 ವಿಕೆಟ್ ಪಡೆದರಾದರೂ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಕರ್ನಾಟಕ ಪರ ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ (49) ಮತ್ತು ಮನೀಶ್ ಪಾಂಡೆ (29) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ 160ರ ಗಡಿ ದಾಟಲು ನೆರವಾದರು. ಕರುಣ್ ನಾಯರ್ (22) ಮತ್ತು ಕೆ. ಗೌತಮ್ (24) ಉತ್ತಮ ಮೊತ್ತ ಪೇರಿಸಿಲು ಯತ್ನಿಸುತ್ತಿದ್ದಂತೆ ಬರೋಡಾದ ಬೌಲಿಂಗ್ ದಾಳಿಗೆ ತತ್ತರಿ, ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಬರೋಡಾ ಪರ ಭಾರ್ಗವ್ ಭಾಟಿಯಾ ಮತ್ತು ಕ್ರುನಾಲ್ ಪಾಂಡೆ ತಲಾ 3 ವಿಕೆಟ್ ಕಬಳಿಸಿದರು. ಅಜಿತೇಶ್ ಅಗರ್ವಾಲ್ 2, ಲೂಕ್ಮಾನ್ ಮಾರಿವಾಲಾ ಮತ್ತು ಹಾರ್ದಿಕ್ ಪಾಂಡೆ ತಲಾ ಎರಡು ವಿಕೆಟ್ ಪಡೆದರು.
ಸೂಪರ್ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಿದ ಕರ್ನಾಟಕ ಎರಡು ಪಂದ್ಯಗಳಲ್ಲಿ ಸೋತು ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ 8 ಪಾಯಿಂಟ್ ಗಳಿಸಿತು. ಹೀಗಾಗಿ ಫೈನಲ್ ಪ್ರವೇಶಿಸುವಲ್ಲಿ ಕರ್ನಾಟಕ ಎಡವಿತು. ಕರ್ನಾಟಕ ಸೇರಿದ್ದ ಬಿ ಗುಂಪಿನಿಂದ 12 ಅಂಕಗಳನ್ನು ಗಳಿಸಿದ ಪಂಜಾಬ್ ಮತ್ತು ಎ ಗುಂಪಿನಿಂದ 12 ಅಂಕಗಳನ್ನು ಗಳಿಸಿದ ಗುಜರಾತ್ ಫೈನಲ್ ಪ್ರವೇಶಿಸಿವೆ.
ದೇಶೀಯ ಕ್ರಿಕೆಟ್‌ನ ಪ್ರಮುಖ ಪಂದ್ಯಾವಳಿಗಳಲ್ಲಿ ಕರ್ನಾಟಕದ ಅದೃಷ್ಟವೇ ಸರಿ ಇಲ್ಲ ಎನಿಸುತ್ತದೆ. ಕಾರಣ, ಈ ಬಾರಿ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಕ್ವಾರ್ಟರ್ ಪ್ರವೇಶಿಸಿ ಮನೆಗೆ ಮರಳಿತ್ತು. ವಿಜಯ್ ಹಜಾರೆ ಟ್ರೋಫಿಯಲ್ಲಿ ಸಹ ಕ್ವಾರ್ಟರ್‌ಫೈನಲ್ ಪ್ರವೇಶಿಸಿ ಕೈಚೆಲ್ಲಿತ್ತು. ಈಗ ಫೈನಲ್ ಪ್ರವೇಶಿಸಲು ಗೆಲ್ಲಬೇಕಾದ ಪಂದ್ಯದಲ್ಲಿ ಕೈಚೆಲ್ಲುವ ಮೂಲಕ ತವರಿಗೆ ಮರಳಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 167/10 (20 ಓವರ್)
ರಾಬಿನ್ ಉತ್ತಪ್ಪ 49, ಮನೀಶ್ ಪಾಂಡೆ 29
ಬೌಲಿಂಗ್: ಭಾರ್ಗವ್ 31/3, ಕ್ರುನಾಲ್ 25/3
ಬರೋಡಾ 169/5 (19.5 ಓವರ್)
ಜ್ಯೋತ್ ಚಯ್ಯ 63, ವಿಷ್ಣು ಸೋಳಂಕಿ ಅಜೇಯ 54
ಬೌಲಿಂಗ್: ಅಕ್ಷಯ್ 39/2, ಬಿನ್ನಿ 25/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

