ಅಭ್ಯಾಸ ಆರಂಭಿಸಿದ ಮುರಳಿ
ಬೆಂಗಳೂರು: ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲಿ ಶ್ರೀಲಂಕಾ ಆಟಗಾರರು ಭಾಗವಹಿಸುವ ಬಗ್ಗೆ ವಿವಾದ ಉಂಟಾಗಿರುವ ಮಧ್ಯೆಯೇ, ಲಂಕಾದ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಅಭ್ಯಾಸ ಆರಂಭಿಸಿದರು.
ಏಪ್ರಿಲ್ 3ರಿಂದ ಆರಂಭವಾಗಲಿರುವ ಐಪಿಎಲ್ ಪಂದ್ಯಾವಳಿಗೆ, ಮುರಳೀಧರನ್ ಚಿನ್ನಸ್ವಾಮಿಯಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಆರ್ಸಿಬಿ ಅಭ್ಯಾಸ ಶಿಬಿರದಲ್ಲಿ ಇತರ ಆಟಗಾರರೊಂದಿಗೆ ಬೌಲಿಂಗ್ ಅಭ್ಯಾಸ ಮಾಡಿದರು.
2011ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ 40ರ ಹರೆಯದ ಸ್ಪಿನ್ನರ್ ಮುರಳೀಧರನ್, ಮುರಳಿ ಕಾರ್ತಿಕ್ ಜತೆ ನೆಟ್ಸ್ನಲ್ಲಿ ಬೌಲ್ ಮಾಡಿದರು.
ಚೆನ್ನೈ ಪಂದ್ಯಗಳಲ್ಲಿ ಲಂಕಾ ಆಟಗಾರರು ಭಾಗವಹಿಸದಿರುವ ಬಗ್ಗೆ ಮುರಳೀಧರನ್ ಆತಂಕಗೊಂಡಂತೆ ಕಂಡುಬರಲಿಲ್ಲ. ಅಲ್ಲದೆ ಅಭ್ಯಾಸದ ಸಂದರ್ಭ ತಮಿಳುನಾಡಿನ ಯುವ ಆಟಗಾರ ಕಾರ್ತಿಕ್ಗೆ ಕೆಲ ಸಲಹೆಗಳನ್ನು ನೀಡಿದರು.
ಮುರಳೀಧರನ್ ಅಭ್ಯಾಸದ ಸಂದರ್ಭ ಲೈನ್ ಮತ್ತು ಲೆಂತ್ ಬಗ್ಗೆ ಹೆಚ್ಚು ಗಮನ ಹರಿಸಿದರು. ಅಲ್ಲದೆ ತಮ್ಮ ದೂಸರಾ ಬೌಲಿಂಗ್ ಶೈಲಿಯನ್ನು ಕೆಲ ಆರ್ಸಿಬಿ ಬ್ಯಾಟ್ಸ್ಮನ್ಗಳ ಮೇಲೆ ಪ್ರಯೋಗ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.
ಅಭ್ಯಾಸದಲ್ಲಿ ಇತರ ಆಟಗಾರರೊಂದಿಗೆ ಸ್ನೇಹಮಯ ಮತ್ತು ಹರ್ಷದಿಂದ ನಡೆದುಕೊಂಡ ಮುರಳೀಧರನ್, ಯುವ ಆಟಗಾರರು ನಿರಾಳವಾಗಿ ಅಭ್ಯಾಸ ಮಾಡುವಂತೆ ನೋಡಿಕೊಂಡರು.
ಮಹೇಂದ್ರ ಸಿಂಗ್ ಧೋನಿ ಅವರಂತೆ ಕಾಣುವ ಸೌರಭ್ ತಿವಾರಿ ಸಹ ಶನಿವಾರ ಆರ್ಸಿಬಿ ತರಬೇತಿ ಶಿಬಿರ ಸೇರಿಕೊಂಡರು.
ಕಳೆದ ಎರಡು ದಿನಗಳಿಂದ ಅಭ್ಯಾಸದಲ್ಲಿ ಪಾಲ್ಗೊಳ್ಳದ ಜಹೀರ್ ಖಾನ್ ಶನಿವಾರ ಸಹ ವಿಶ್ರಾಂತಿ ಪಡೆದರು. ಕಳೆದ ಡಿಸೆಂಬರ್ನಲ್ಲಿ ನಡೆದ ಗುಜರಾಜ್ ವಿರುದ್ಧ ಮುಂಬೈಪರ ರಣಜಿ ಟ್ರೋಫಿ ಪಂದ್ಯದಲ್ಲಿ ಭಾಗವಹಿಸಿದ್ದಾಗ ಜಹೀರ್ ಖಾನ್ ಮೀನುಖಂಡಕ್ಕೆ ನೋವು ಮಾಡಿಕೊಂಡಿದ್ದರು.
ಭಾನುವಾರ ಆಟಗಾರರು ವಿಶ್ರಾಂತಿ ಪಡೆಯಲು ಆರ್ಸಿಬಿ ತೀರ್ಮಾನಿಸಿದ್ದು, ಏಪ್ರಿಲ್ 1ರಿಂದ ಆರಂಭಿಸಲಿದೆ. ಆಗ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಎ.ಬಿ ಡಿವಿಲಿಯರ್ಸ್ ಹಾಗೂ ತಿಲಕರತ್ನೆ ದಿಲ್ಷಾನ್ ತಂಡವನ್ನು ಸೇರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

