ಗುಜರಾತ್ ಚಾಂಪಿಯನ್
ಇಂದೋರ್: ಆಲ್ರೌಂಡ್ ಪ್ರದರ್ಶನ ನೀಡಿದ ಗುಜರಾತ್ ತಂಡ, ಸೈಯ್ಯದ್ ಮುಷ್ತಾಕ್ ಅಲಿ ಟಿ20 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ್ಧ ಆರು ವಿಕೆಟ್ ಅಂತರದಿಂದ ಜಯ ಸಾಧಿಸಿದ ಗುಜರಾತ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ತಂಡವನ್ನು 122 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಗುಜರಾತ್, ನಂತರ ಕೇವಲ 17.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ ಜಯದ ಕೇಕೆ ಹಾಕಿತು.
ಗುಜರಾತ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ವೇಗಿ ಜಸ್ಪ್ರೀತ್ ಬುಮ್ರಾಹ, ನಾಲ್ಕು ಓವರ್ಗಳಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿದ್ದು, ಪಂಜಾಬ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ನೆರವಾಯಿತು. ಇನ್ನು ಮೆಹೂಲ್ ಪಟೇಲ್ ಎರಡು ವಿಕೆಟ್ ಪಡೆದರೆ, ರೋಹಿತ್ ದಾಹಿಯಾ ಮತ್ತು ರಾಕೇಶ್ ಧ್ರುವ ತಲಾ ಒಂದು ವಿಕೆಟ್ ಕಬಳಿಸಿದರು.
ಪಂಜಾಬ್ ಪರ ಕೊಂಚ ಉತ್ತಮ ಬ್ಯಾಂಟಿಗ್ ಪ್ರದರ್ಶಿಸಿದ ಅಮಿತೋಜ್ ಸಿಂಗ್ 42 ಎಸೆತಗಳನ್ನು ಎದುರಿಸಿ 49 ರನ್ ಕಲೆ ಹಾಕಿದರು. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಚಂದನ್ ಮದನ್ (25) ಮತ್ತು ಗುರಿಂದರ್ ಸಿಂಗ್ (23) ಮಾತ್ರ ಪಂಬಾಜ್ ಪರ ಎರಡಂಕಿ ದಾಟಿದ ಬ್ಯಾಟ್ಸ್ಮನ್ಗಳು ಎನಿಸಿದರು.
ನಂತರ 123 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್, ಆರಂಭದಲ್ಲಿ ತನ್ನ ವಿಕೆಟ್ ಕೀಪರ್ ಮತ್ತು ನಾಯಕ ಪಾರ್ಥೀವ್ ಪಟೇಲ್ (1) ವಿಕೆಟ್ ಕಳೆದುಕೊಂಡು ಆತಂಕದಲ್ಲಿ ಸಿಲುಕಿತ್ತು.
ಆದರೆ ಇನ್ನೊಬ್ಬ ಆರಂಭಿಕ ಆಟಗಾರ ಅಸಾದ್ ಪಠಾಣ್ (32), ನೀರಜ್ ಪಟೇಲ್ (14) ಜತೆಯಾಟದಲ್ಲಿ 7 ಓವರ್ಗಳಲ್ಲಿ 50ರನ್ ಪೇರಿಸಿದ್ದು ತಂಡಕ್ಕೆ ಉತ್ತಮ ಅಡಿಪಾಯವಾಯಿತು. ಈ ಇಬ್ಬರು ಬ್ಯಾಟ್ಸ್ಮನ್ಗಳು 8ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದಾಗ ತಂಡ 52 ರನ್ ಕಲೆ ಹಾಕಿತ್ತು.
ಇನ್ನು ಸೂಪರ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಕೇರಳಾ ವಿರುದ್ಧ ಶನಿವಾರ ಅಜೇಯ 108 ರನ್ ದಾಖಲಿಸಿದ್ದ ನಂತರ ಮನ್ಪ್ರೀತ್ ಜುನೇಜಾ (31) ಮತ್ತು ಅಬ್ದುಲ್ಹಾದ್ (ಅಜೇಯ 31) ಜತೆಯಾಟದಲ್ಲಿ 64 ರನ್ ಪೇರಿಸಿದರು, ಇದರೊಂದಿಗೆ ಗುಜರಾತ್ಗೆ ಅಗತ್ಯವಿದ್ದ ರನ್ ಗುರಿಯನ್ನು ಸಮೀಪಿಸಲು ಅನುಕೂಲವಾಯಿತು. ಅಕ್ಷರ ಪಟೇಲ್ (ಅಜೇಯ 12) ಕ್ರೀಸ್ನಲ್ಲಿದ್ದಾಗ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗುಜರಾತ್ 4 ವಿಕೆಟ್ ನಷ್ಟಕ್ಕೆ 128 ರನ್ ಗಳಿಸುವುದರೊಂದಿಗೆ ಜಯದ ಸಂಭ್ರಮ ಆಚರಿಸಿತು.
ಪಂಜಾಬ್ ಪರ ಎರಡಗೈ ಸ್ಪಿನ್ನರ್ ರಾಜ್ವಿಂದರ್ ಸಿಂಗ್ ಎರಡು ವಿಕೆಟ್ ಪಡೆದರಾದರೂ, 40 ರನ್ ನೀಡಿ ದುಬಾರಿ ಎನಿಸಿದರು. ಸಿದ್ದಾರ್ಥ್ ಕೌಲ್ ಒಂದು ವಿಕೆಟ್ ಪಡೆದರು. ಗುಜರಾತ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿ 3 ವಿಕೆಟ್ ಕಬಳಿಸಿದ ವೇಗಿ ಜಸ್ಪ್ರೀತ್ ಬುಮ್ರಾಹ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಶನಿವಾರ ನಡೆದ ಸೂಪರ್ ಲೀಗ್ ಹಂತದ ಎ ಗುಂಪಿನ ಅಂತಿಮ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ಸಾಧಿಸಿದ್ದ ಗುಜರಾತ್ ಮತ್ತು ಬಿ ಗುಂಪಿನಲ್ಲಿ ಉತ್ತರ ಪ್ರದೇಶದ ವಿರುದ್ಧ ಜಯ ಸಾಧಿಸಿದ್ದ ಪಂಜಾಬ್ ಫೈನಲ್ ಪ್ರವೇಶಿಸಿದ್ದವು.
ಸಂಕ್ಷಿಪ್ತ ಸ್ಕೋರ್
ಪಂಜಾಬ್ 122/8 (20 ಓವರ್)
ಅಮಿತೋಜ್ 49, ಮದನ್ 25
ಬೌಲಿಂಗ್: ಬುಮ್ರಾಹ 14/3, ಮೆಹೂಲ್ 26/2
ಗುಜರಾತ್: 128/4 (17.5 ಓವರ್)
ಅಸಾದ್ ಪಟೇಲ್ 32, ಜುನೇಜಾ 31
ಬೌಲಿಂಗ್: ರಾಜ್ವಿಂದರ್ ಸಿಂಗ್ 40/2, ಕೌಲ್ 21/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

