ಕ್ರೀಡೆ

ಚೆನ್ನೈಗೆ ಭಾರೀ ಸೋಲು

ಚೆನ್ನೈಗೆ ಭಾರೀ ಸೋಲು
Published On :

ಮುಂಬೈ: ಮಿಚೆಲ್ ಜಾನ್ಸನ್ ಹಾಗೂ ಮುಂಬೈ ತಂಡದ ಇತರ ಬೌಲರ್‌ಗಳ ಕರಾರುವಾಕ್ ದಾಳಿಗೆ ದಂಗಾದ ಚೆನ್ನೈ ಸೂಪರ್ ಕಿಂಗ್ಸ್, ಭಾನುವಾರ ನಡೆದ ಪಂದ್ಯದಲ್ಲಿ 60 ರನ್‌ಗಳ ದಯನೀಯ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ್ದ ಮುಂಬೈ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 79 ರನ್‌ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದಿದ್ದ ಮುಂಬೈ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರಾದ ಡರೇನ್ ಸ್ಮಿತ್ ಹಾಗೂ ಸಚಿನ್ ತೆಂಡೂಲ್ಕರ್ ತಂಡದ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ, 40 ರನ್ ಸೇರಿಸಿತು.
ಕ್ರೀಸ್‌ನಲ್ಲಿ ಹೊಂದಿಕೊಳ್ಳಲು ಇಬ್ಬರೂ ಸ್ವಲ್ಪ ಸಮಯ ತೆಗೆದುಕೊಂಡರಾದರೂ, ನಿಧಾನವಾಗಿ ಇಬ್ಬರೂ ಬೌಂಡರಿ ಹಾಗೂ ಸಿಕ್ಸರ್‌ಗಳಿಗೆ ಕೈ ಹಾಕಿದರು. ಇದರಿಂದಾಗಿ, ಮುಂಬೈ ತಂಡದ ಮೊತ್ತದ ಏರಿಕೆಯ ಗತಿ ಹೆಚ್ಚುತ್ತಾ ಸಾಗಿತು.
ಆದರೆ, ರವೀಂದ್ರ ಜಡೇಜಾ ಅವರು 7ನೇ ಓವರ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವ ಮೂಲಕ, ಈ ಜೊತೆಯಾಟವನ್ನು ಮುರಿದರು. ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದ ಸಚಿನ್ (15) ನಿಧಾನವಾಗಿ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು.
ಈ ಹಂತದಲ್ಲಿ, ಸಚಿನ್ ಅವರೂ ಸೇರಿದಂತೆ, ಮುಂಬೈ ತಂಡ ಸತತ ಮೂರು ವಿಕೆಟ್‌ಗಳನ್ನು ಕಳೆದುಕೊಂಡು, ಕಂಗಾಲಾಯಿತು. ಸಚಿನ್ ವಿಕೆಟ್ ಬಿದ್ದ ಹಿಂದೆಯೇ, ಆರಂಭಿಕ ಸ್ಮಿತ್ ಹಾಗೂ ಅವರ ನಂತರ ಕ್ರೀಸ್‌ಗೆ ಕಾಲಿಟ್ಟಿದ್ದ ಪೊಲಾರ್ಡ್ ಬೇಗನೇ ಪೆವಿಲಿಯನ್‌ಗೆ ಹಿಂದಿರುಗಿದರು.
ಆದರೆ, ಇನಿಂಗ್ಸ್‌ನ ಅಂತ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಹರ್ಭಜನ್ ಸಿಂಗ್, ಇಬ್ಬರೂ  6ನೇ ವಿಕೆಟ್‌ಗೆ ನೀಡಿದ ಮುರಿಯದ 57 ರನ್‌ಗಳ ಜೊತೆಯಾಟದಿಂದ ಮುಂಬೈ ತಂಡ, ನಿಗದಿತ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಚೆನ್ನೈನ ಅಚ್ಚರಿಯ ಕುಸಿತ: ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳಿಗೆ ಹೋಲಿಸಿದರೆ, ತನ್ನ ತಂಡದಲ್ಲಿ ಅತ್ಯುತ್ತಮ ಆಲ್ರೌಂಡರ್‌ಗಳನ್ನು ಹೊಂದಿರುವ ಚೆನ್ನೈ ತಂಡಕ್ಕೆ, ಮುಂಬೈ ತಂಡ ನೀಡಿದ್ದ ಸವಾಲು ಕ್ಲಿಷ್ಟಕರವಾಗೇನೂ ಇರಲಿಲ್ಲ. ಆದರೂ, ತಂಡ ಗೆಲವು ಪಡೆಯುವಲ್ಲಿ ವಿಫಲವಾಯಿತು.
ಮಾರಕ ಜಾನ್ಸನ್: ಮುಂಬೈ ನೀಡಿದ್ದ ಸವಾಲನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಚೆನ್ನೈ, ಆರಂಭದಲ್ಲೇ ಮುರಳಿ ವಿಜಯ್ ಅವರನ್ನು ಕಳೆದುಕೊಂಡಿತು. ಈ ವಿಕೆಟ್ ಪಡೆದಿದ್ದು ಮಿಚೆಲ್ ಜಾನ್ಸನ್.
ಇನಿಂಗ್ಸ್‌ನ 3ನೇ ಓವರ್‌ನಲ್ಲೇ ಚೆನ್ನೈ ತಂಡಕ್ಕೆ ಇಂಥದ್ದೊಂದು ಶಾಕ್ ನೀಡಿದ ಜಾನ್ಸನ್, ಆನಂತರ, ಅಪಾಯಕಾರಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನೂ ಡಕ್‌ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು. ಆನಂತರ, ಎಸ್. ಬದ್ರೀನಾಥ್ ಅವರೂ ಜಾನ್ಸನ್ ಬೌಲಿಂಗ್ ಮೋಡಿಗೆ ಬಲಿಯಾದರು.
ಹೀಗೆ, ಇನಿಂಗ್ಸ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಒಂದರ ಮೇಲೊಂದು ಹೊಡೆತಗಳಿಗೆ ಗುರಿಯಾದ ಚೆನ್ನೈ, ಆನಂತರ ನಿಗದಿತ ಅಂತರದಲ್ಲಿ, ಡೇವಿಡ್ ಬ್ರಾವೊ, ಆರ್. ಅಶ್ವಿನ್, ನಾಯಕ ಧೋನಿ, ರವೀಂದ್ರ ಜಡೇಜಾ, ಕ್ರಿಸ್ ಮೋರಿಸ್ ಅವರನ್ನೂ ಕಳೆದುಕೊಂಡು 79 ಓವರ್‌ಗಳಿಗೆ ಚೆನ್ನೈ ಆಲೌಟ್ ಆಯಿತು.
ಸ್ಕೋರ್ ಬೋರ್ಡ್
ಮುಂಬೈ  139/5 (20 ಓವರ್)
ಡ್ವೈನ್ ಸ್ಮಿತ್ ಸಿ ಮತ್ತು ಬಿ ಬ್ರಾವೋ 22 (24), ತೆಂಡೂಲ್ಕರ್ ಎಲ್‌ಬಿಡಬ್ಲ್ಯೂ ಬಿ ಜಡೇಜಾ 15 (18), ದಿನೇಶ್ ಕಾರ್ತಿಕ್ ಸಿ ರೈನಾ ಬಿ ಜಡೇಜಾ 23 (23), ಕೀರನ್ ಪೊಲಾರ್ಡ್ ಸಿ ರೈನಾ ಬಿ ಜಡೇಜಾ 1 (3), ರೋಹಿತ್ ಶರ್ಮಾ ಅಜೇಯ 39 (30), ಅಂಬಟಿ ರಾಯುಡು ಬಿ ಅಶ್ವಿನ್ 10 (11), ಹರ್ಭಜನ್ ಸಿಂಗ್ ಅಜೇಯ 25 (11), ಇತರೆ 4.
ವಿಕೆಟ್ ಪತನ: 1/40, 2/42, 3/45, 4/66, 5/82.
ಬೌಲಿಂಗ್: ರವಿಂದ್ರ ಜಡೇಜಾ 4-0-29-3, ಮೋಹಿತ್ ಶರ್ಮಾ 4-0-20-0, ಕ್ರಿಸ್ ಮಾರಿಸ್ 3-0-14-0, ಡ್ವೈನ್ ಬ್ರಾವೋ 3-0-19-1, ಬೆನ್ ಲಾಘ್ಲಿನ್ 4-0-46-0, ಆರ್. ಅಶ್ವಿನ್ 2-0-11-1.
ಚೆನ್ನೈ 79/10 (20 ಓವರ್)
ಮೈಕಲ್ ಹಸ್ಸಿ ಸಿ ಸ್ಮಿತ್ ಬಿ ಓಜಾ 22 (26), ವಿಜಯ್ ಬೌಲ್ಡ್ ಜಾನ್ಸನ್ 2 (4), ರೈನಾ ಸಿ ಪೊಲಾರ್ಡ್ ಬಿ ಜಾನ್ಸನ್ 0 (1), ಬದ್ರೀನಾಥ್ ಎಲ್‌ಬಿಡಬ್ಲ್ಯೂ ಬಿ ಜಾನ್ಸನ್ 0 (3), ಬ್ರಾವೊ ಸಿ ರಾಯುಡು ಬಿ ಸುಯಲ್ 9 (7), ಆರ್. ಅಶ್ವಿನ್ ಬಿ ಹರ್ಭಜನ್ ಸಿಂಗ್ 2 (8), ಧೋನಿ ಸಿ ಪೊಲಾರ್ಡ್ ಬಿ ಓಜಾ 10 (12), ಜಡೇಜಾ ಸಿ ರಾಯಿಡು ಬಿ ಓಜಾ 20 (16), ಮೊರಿಸ್ ಬೌಲ್ಡ್ ಮಾಲಿಂಗ 1 (4), ಮೋಹಿತ್ ಸಿ ಸುಯಲ್ ಬಿ ಮಾಲಿಂಗ 0 (3), ಲಾಘ್ಲಿನ್ ಅಜೇಯ 4 (8).
ವಿಕೆಟ್ ಪತನ: 1-9, 2-9, 3-9, 4-18, 5-34, 6-40, 7-52, 8-54, 9-54, 10-79.
ಬೌಲಿಂಗ್: ಜಾನ್ಸನ್ 3-0-27-3, ಸುಯಲ್ 3-0-    21-1, ಹರ್ಭಜನ್ 4-0-13-1, ಮಾಲಿಂಗ 3-0-6-2, ಓಜಾ 2.2-0-11-3.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.