ಕ್ರೀಡೆ

ಬೆಟ್ಟಿಂಗ್ ಭೂಪರು ಸಿಕ್ಕ ಕಥೆ...

Published On :

ನವದೆಹಲಿ: 'ಹೀಗೆ ಅನಾಮತ್ತಾಗಿ ಟ್ರಾಪ್ ಆಗ್ತೀನಿ' ಅಂತ ಆ ಹುಡುಗ ಕನಸಿನಲ್ಲೂ ಅಂದ್ಕೊಂಡಿರಲಿಲ್ಲ. ಅಸಲಿಗೆ ತಾನು ಮಾಡ್ತಾ ಇರೋ ದಂಧೆ ತನ್ನೊಬ್ಬನಿಗಲ್ಲದೇ ಬೇರ್ಯಾರಿಗೂ ಗೊತ್ತಿಲ್ಲ ಅಂದ್ಕೊಂಡಿದ್ದ ಅವನಿಗೆ ಸತ್ಯದ ಅರಿವಾಗಿದ್ದೇ ಆವಾಗ.
ಅವನು ಶ್ರೀಶಾಂತ್. ಭಾರತೀಯ ಕ್ರಿಕೆಟ್ ರಂಗದಲ್ಲಿ ವಿವಾದಗಳ ಮೂಲಕವೇ ಮಾಡಿದ್ದವ. ಮತ್ತಷ್ಟು ಹೆಸರು ಮಾಡಬೇಕಿದ್ದವ. ಆದರೆ, ಬೆಟ್ಟಿಂಗ್ ಭೂತಕ್ಕೆ ಬಲಿಯಾಗಿ ಹೊತ್ತಲ್ಲದ ಹೊತ್ನಲ್ಲಿ ಪೊಲೀಸರ ಅತಿಥಿಯಾದವ.
ಇಂಥದ್ದೊಂದು ದಂಧೆಯಲ್ಲಿ ಶ್ರೀಶಾಂತ್ ಹೆಸರು ಥಳುಕು ಹಾಕಿಕೊಂಡಿದ್ದೇ ತಡ, ಹಲವು ವಾರಗಳ ಹಿಂದೆಯೇ ಆತನ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಇನ್ನೇನು ಆತನನ್ನು ಬಂಧಿಸಬೇಕೆಂದು ಸಕಲ ಸಿದ್ಧತೆ ಮಾಡಿಕೊಂಡಿದ್ದ ಅವರು ಅದಕ್ಕಾಗಿ ಮುಹೂರ್ತವನ್ನೂ ಫಿಕ್ಸ್ ಮಾಡಿಕೊಂಡಿದ್ದರು.
ಅದು ಮೇ 15, ಬುಧವಾರ. ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮುಗಿದ ನಂತರ ರಾತ್ರಿ ಶ್ರೀಶಾಂತ್ ತಾನು ತಂಗಿದ್ದ ಹೋಟೆಲ್‌ನಿಂದ ಸೀದಾ ಮುಂಬೈನ ಸ್ವಾಂಕಿಗೆ ಹೋಗುವ ದಾರಿಯಲ್ಲಿರೋ ಓಆರ್-ಜಿ ಪಬ್‌ಗೆ ತೆರಳಿದರು.
ಅಲ್ಲಿ, ಶ್ರೀಶಾಂತ್ ತೆರಳಿದ್ದಕ್ಕೆ ಪ್ರಬಲ ಕಾರಣವೂ ಇತ್ತು. ಆ ಕಾರಣ,  ಮಿಥಾನಿಯಾ ಎಂಬ ಬುಕಿಯನ್ನು ಭೇಟಿ ಮಾಡೋದು. ಬರೀ ಶ್ರೀಶಾಂತ್ ಅಷ್ಟೇ ಅಲ್ಲ. ಆತನೊಂದಿಗೆ, ಬೆಟ್ಟಿಂಗ್ ಪ್ರಕರಣದ ಮತ್ತೊಬ್ಬ ಆರೋಪಿ ಅಂಕಿತ್ ಚವ್ಹಾಣ್ ಕೂಡ ಅದೇ ಕೆಲಸಕ್ಕೇ ಬಂದಿದ್ದರು.
ಇದನ್ನು ಮೊದಲೇ ಅರಿತಿದ್ದ ದೆಹಲಿ ಪೊಲೀಸರು, ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್ ಅಧಿಕಾರಿಗಳೊಂದಿಗೆ ಸೇರಿ ಒಂದು ತಂಡವಾಗಿ ರೂಪುಗೊಂಡು ಪಬ್‌ನ ಹೊರಗೆ ಮಾರುವೇಷದಲ್ಲಿ ಕಾಯುತ್ತಿದ್ದರು.
ಶ್ರೀಶಾಂತ್, ಚವ್ಹಾಣ್ ಪಬ್ ಪ್ರವೇಶಿಸಿ ಸುಮಾರು ಕಾಲ ಬುಕಿ ಜತೆ ಮಾತುಕತೆ ನಡೆಸಿದರು.
ಮೊದಲು ಪಬ್‌ನಿಂದ ಆಚೆ ಬಂದದ್ದು ಚವ್ಹಾಣ್. ಹೊರಗೆ ಬಂದವನೇ ಕಾರು ಹತ್ತಿ ಸೀದಾ ತಾನು ತಂಗಿದ್ದ ಇಂಟರ್‌ಕಾಂನ್ಟಿನೆಂಟಲ್ ಹೋಟೆಲ್‌ಗೆ ಹೊರಟ. ತಕ್ಷಣವೇ ಜಾಗೃತವಾದ ಪೊಲೀಸರ ತಂಡದಲ್ಲಿದ್ದ ಕೆಲವರು ಆತನನ್ನು ಮತ್ತೊಂದು ವಾಹನದಲ್ಲಿ ಹಿಂಬಾಲಿಸಿದರು. ಅಂಕಿತ್, ಕಾಂನ್ಟಿನೆಂಟಲ್ ಹೋಟೆಲ್‌ನ ಗೇಟ್ ಬಳಿಗೆ ಬಂದ ಕೂಡಲೇ ಆತನನ್ನು ಅವರು ವಶಕ್ಕೆ ತೆಗೆದುಕೊಂಡರು.
ಸುಮಾರು ಮಧ್ಯರಾತ್ರಿ 1:30ರ ಸುಮಾರಿಗೆ, ಶ್ರೀಶಾಂತ್ ಹಾಗೂ ಮಿಥಾನಿಯಾ ಇಬ್ಬರೂ ಹೊರಬಂದು, ತಮ್ಮ ಕಾರುಗಳಲ್ಲಿ ತಾವು ತಂಗಿದ್ದ ಕಡೆಗೆ ತೆರಳಿದರು. ಈಗ, ಅವರಿಗಾಗಿ ಕಾಯುತ್ತಿದ್ದ ಪೊಲೀಸರ ತಂಡ ಇಬ್ಭಾಗವಾಗಿ, ಈ ಇಬ್ಬರನ್ನೂ ಹಿಂಬಾಲಿಸಿತು.
ವಾಟರ್‌ಫೀಲ್ಡ್ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಶ್ರೀಶಾಂತ್ ಕಾರನ್ನು ಮೋತಿ ಮಹಲ್ ಬಳಿ ಅಡ್ಡಗಟ್ಟಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. ಆ ಹೊತ್ತಿನಲ್ಲಿ, ಅವರ ಕಾರಿನಲ್ಲಿ ಆನತಲ್ಲದೇ, ನಾಲ್ವರು ಹುಡುಗಿಯರೂ ಇದ್ದರು.
ಇನ್ನು, ಮಿಥಾನಿಯಾನನ್ನು ಹಿಂಬಾಲಿಸಿದ ಪೊಲೀಸರ ಮತ್ತೊಂದು ತಂಡಲಿಂಕಿಂಗ್ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ, ವಶಕ್ಕೆ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.