ಕ್ರೀಡೆ

ಮಾಝ್‌ಖಾನ್, ಪ್ರತಿಭಾಗೆ ಸಿಂಗಲ್ಸ್ ಪ್ರಶಸ್ತಿ

Published On :

ಕ.ಪ್ರ.ವಾರ್ತೆ ದಾವಣಗೆರೆ ಮೇ.17
ಕರ್ನಾಟಕದ ಅಗ್ರ ಶ್ರೇಯಾಂಕಿತ ಮಾಝ್‌ಖಾನ್, ಉದಯೋನ್ಮುಖ ಆಟಗಾರ್ತಿ ಪ್ರತಿಭಾ ಪ್ರಸಾದ್ ನಾರಾಯಣ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಟ್ಯಾಲೆಂಟ್ ಸರಣಿಯ 14 ವರ್ಷದ ಒಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ- ಬಾಲಕಿಯರ ವಿಭಾಗದ ಚಾಂಪಿಯನ್‌ಗಳಾಗಿ ಹೊರ ಹೊಮ್ಮಿದ್ದಾರೆ.
ನಗರದ ಹೈಸ್ಕೂಲ್ ಮೈದಾನದ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಅಂಕಣದಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಮಾಝ್‌ಖಾನ್ ಕರ್ನಾಟಕದ ಎಡಗೈ ಆಟಗಾರ ಸಿ.ಎಚ್. ಅರ್ಜುನ್ ವಿರುದ್ಧ 3- 6, 6- 2, 6- 3 ಅಂತರದ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಬಾಲಕರ ವಿಭಾಗದ ಫೈನಲ್‌ನಲ್ಲಿ ಮಾಝ್‌ಖಾನ್ ವಿರುದ್ಧ ಮತ್ತೊಬ್ಬ ಪ್ರತಿಭಾವಂತ ಆಟಗಾರ ಸಿ.ಎಚ್. ಅರ್ಜುನ್ ಮೊದಲ ಸೆಟ್‌ನಲ್ಲಿಯೇ ಮೇಲುಗೈ ಸಾಧಿಸಿದರು. ಮಾಝ್‌ಖಾನ್ 3- 6 ಅಂತರದಲ್ಲಿ ಅರ್ಜುನ್ ವಿರುದ್ಧ ಹಿನ್ನಡೆ ಕಂಡರೂ, ಎರಡನೇ ಸೆಟ್‌ನಿಂದ ಲಯ ಕಂಡುಕೊಂಡರು. ಎರಡನೇ ಸೆಟ್‌ನಲ್ಲಿ 6-3, ಮೂರನೇ ಸೆಟ್‌ನಲ್ಲಿ 6-3 ಅಂತರ ಕಾಯ್ದು ಕೊಂಡ ಮಾಝ್‌ಖಾನ್ ಕೊನೆಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಬಾಲಕಿಯರ ವಿಭಾಗದಲ್ಲಿ: ಬಾಲಕಿಯರ ವಿಭಾಗದಲ್ಲಿ ಪ್ರತಿಭಾವಂತ ಆಟಗಾರ್ತಿ ಪ್ರತಿಭಾ ಪ್ರಸಾದ ನಾರಾಯಣ್ ತಮ್ಮ ಎದುರಾಳಿ ದೀಕ್ಷಾ ಪ್ರಸಾದ್ ಮಂಜು ವಿರುದ್ಧ 6-2, 6-3 ಅಂತರದ ಜಯಿಸಿದರು. ತೀವ್ರ ಕುತೂಹಲ ಕೆರಳಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಫೈನಲ್‌ನಲ್ಲಿ ದೀಕ್ಷಾ ಸೂಕ್ತ ಪ್ರದರ್ಶನ ನೀಡದ ಕಾರಣ ಪ್ರಶಸ್ತಿ ಪ್ರತಿಭಾ ಪಾಲಾಯಿತು.
ಬಾಲಕರ ಫೈನಲ್‌ನಲ್ಲಿ ಮಾಝ್‌ಖಾನ್- ವಿವೇಕ್ ಸತ್ಯ ಶ್ರೀನಿವಾಸ ಜೋಡಿ ಎಡಗೈ ಆಟಗಾರ ಸಿ.ಎಚ್. ಅರ್ಜುನ್- ರೋಹನ್ ಪ್ರಶಾಂತ ವಿರುದ್ಧ 6-2, 6-3 ಅಂತರದ ಜಯ ದಾಖಲಿಸಿತು. ಸೆಮಿಫೈನಲ್‌ನಲ್ಲಿ ಸುಮಾರು ಗಂಟೆಗಳ ಕಾಲ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಜಯಿಸಿದ್ದ ಅರ್ಜುನ- ರೋಹನ್ ಜೋಡಿ ತೀವ್ರ ಸ್ಪರ್ಧೆಯೊಡ್ಡುವ ನಿರೀಕ್ಷೆ ಹುಸಿಯಾಯಿತು. ಅಗ್ರ ಶ್ರೇಯಾಂಕಿತ ಮಾಝ್‌ಖಾನ್, ವಿವೇಕ್ ಜೋಡಿ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಮಾಝ್‌ಖಾನ್, ರೋಹನ್ ಜೋಡಿಗೆ ಚಾಂಪಿಯನ್ ಪಟ್ಟ ಲಭಿಸಿತು.
ಅವಳಿ ಸಹೋದರಿಯರಿಗೆ ಗೆಲವು: ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅವಳಿ ಸಹೋದರಿಯರಾದ ಪ್ರಗತಿ ಪ್ರಸಾದ ನಾರಾಯಣ್, ಪ್ರತಿಭಾ ಪ್ರಸಾದ ನಾರಾಯಣ್ ಜೋಡಿ ತಮ್ಮ ಎದುರಾಳಿ ಚೈತಾಲಿ ಆದಿನಾಥ ನಾರಡೆ ಹಾಗೂ ಜಾಹ್ನವಿ ಹರೀಶ್ ರೆಡ್ಡಿ ವಿರುದ್ಧ 6-4, 6-2 ಅಂತರದಲ್ಲಿ ಜಯ ದಾಖಲಿಸಿದರು. ಪ್ರಗತಿ, ಪ್ರತಿಭಾ ಸಹೋದರಿಯರು ಪಂದ್ಯದ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿ, ಕೊನೆವರೆಗೂ ಅದೇ ಹಿಡಿತ ಮುಂದುವರಿಸಲು ಯಶಸ್ವಿಯಾದರು. ಅಂತಿಮವಾಗಿ ಪ್ರಶಸ್ತಿಯನ್ನು ಪ್ರತಿಭಾ- ಪ್ರಗತಿ ಸಹೋದರಿಯರು ತಮ್ಮದಾಗಿಸಿಕೊಂಡರು.
ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆ, ಜಿಲ್ಲಾ ಟೆನಿಸ್ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಪಂದ್ಯಾವಳಿ ನಡೆಯಿತು. ಸಂಘಟಕಾದ ಡಾ. ಎಸ್.ಎನ್. ಬ್ಯಾಡಗಿ, ನಿವೃತ್ತ ಡಿಎಸ್ಪಿ ಕೆ.ಪಿ. ಚಂದ್ರಪ್ಪ, ರೆಫ್ರಿ ಸುಪ್ರೀತ್, ಬಸವರಾಜ, ಮಹಾಂತೇಶ ಇತರರು ಬಹುಮಾನ ವಿತರಣೆ ಸಮಾರಂಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.