ರಾಯಲ್ಗೆ ಚಾಲೆಂಜ್

ಬೆಂಗಳೂರು: ಎರಡು ಅನಿರೀಕ್ಷಿತ ಸೋಲಿನಿಂದಾಗಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಪ್ಲೇ-ಆಫ್ಗೆ ಲಗ್ಗೆಯಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಪಂದ್ಯ ಅಷ್ಟು ಮಹತ್ವದಲ್ಲವಾದರೂ, ಆರ್ಸಿಬಿ ಪಾಲಿಗೆ 'ಇದು ಮಾಡು ಇಲ್ಲವೇ ಮಡಿ' ಎಂಬ ಪಂದ್ಯವಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತನ್ನ ಹಿಂದಿನ ಪಂದ್ಯದಲ್ಲಿ ಸೋತಿದ್ದ ಆರ್ಸಿಬಿ, ಪ್ಲೇ-ಆಫ್ ಹಂತಕ್ಕೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಅನುಕೂಲ ಮಾಡಿಕೊಟ್ಟಿತ್ತು.
ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿರುವ ಚೆನ್ನೈ, ಮುಂಬೈ, ರಾಜಸ್ಥಾನ ತಂಡಗಳು ತಲಾ 20 ಅಂಕಗಳ ಗಡಿಯನ್ನು ದಾಟಿ, ಪ್ಲೇ-ಆಫ್ಗೆ ಕಾಲಿಟ್ಟಿವೆ. ಇದೀಗ, ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕಾಗಿ ಸನ್ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಜೊತೆ ಪೈಪೋಟಿಗಿಳಿದಿರುವ ಆರ್ಸಿಬಿ, ಈ ಪಂದ್ಯದಲ್ಲಿ ಜಯಗಳಿಸಲೇಬೇಕಿದೆ.
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ನಂತರ ಕಿಂಗ್ಸ್ಇಲೆವೆನ್ ಪಂಜಾಬ್ ತಂಡದ ಅಂಕ 14ಕ್ಕೆ ಏರಿದ್ದು, ಅದಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಮೇ 18ರಂದು ಅದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ ಅದೇನಾದರೂ ಜಯಗಳಿಸಿದರೆ, ಅದರ ಅಂಕ 16ಕ್ಕೇರಲಿದೆ. ಇನ್ನು, ಸನ್ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಈಗಾಗಲೇ ತಲಾ 16 ಅಂಕಗಳನ್ನು ಗಳಿಸಿದ್ದು, ಇನ್ನೊಂದು ವಿಜಯಕ್ಕಾಗಿ ಅವು ಎದುರು ನೋಡುತ್ತಿವೆ.
ಹಾಗಾಗಿ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಅದರ ಮೊತ್ತ 18ಕ್ಕೇರಲಿದೆ. ಆದರೆ, ಪ್ಲೇ-ಆಫ್ಗೆ ಕಾಲಿಡಲು ಇಷ್ಟೇ ಸಾಲದು. ಸನ್ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ಗಳೂ ತಮ್ಮ ಪಾಲಿಗೆ ಇರುವ ಇನ್ನುಳಿದ ಒಂದೇ ಒಂದು ಪಂದ್ಯವನ್ನು ಸೋಲಬೇಕು. ಆಗಷ್ಟೇ, ಆರ್ಸಿಬಿಯ ಪ್ಲೇ-ಆಫ್ ಹಾದಿ ಸುಗಮ.
ಸನ್ರೈಸರ್ಸ್ ಹಾಗೂ ಪಂಜಾಬ್ ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ ಸೋಲಬೇಕೆನ್ನುವುದು ಒಂದೆಡೆ ಇರಲಿ... ಎಲ್ಲಕ್ಕೂ ಮೊದಲು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕು.
ತವರಿನ ಅಂಗಣದಲ್ಲೇ ಈ ಪಂದ್ಯ ನಡೆಯುತ್ತಿರುವುದರಿಂದ ಆರ್ಸಿಬಿ ಇದು ಆತ್ಮವಿಶ್ವಾಸ ತುಂಬುವ ಮೊದಲ ಅಂಶ. ಇದರ ಜೊತೆಗೆ ಚಿನ್ನಸ್ವಾಮಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಕ್ರಿಸ್ಗೇಯ್ಲ್, ಪಂದ್ಯದ ಗತಿಗೆ ತಕ್ಕಂತೆ ಆಟವಾಡುವ ವಿರಾಟ್ ಕೊಹ್ಲಿ, ಆರಂಭಿಕ ಚೇತೇಶ್ವರ ಪೂಜಾರ, ಯಾವುದೇ ಸಮಯದಲ್ಲೂ ಆಪದ್ಬಾಂಧವನಾಗಿ ನಿಲ್ಲಬಲ್ಲ ಎಬಿ ಡಿ ವಿಲಿಯರ್ಸ್, ಆಸ್ಟ್ರೇಲಿಯಾದ ಆಲ್ರೌಂಡರ್ ಮೊಯ್ಸೆಸ್ ಹೆನ್ರೀಕೆಸ್ - ಈ ಎಲ್ಲರೂ ತಮ್ಮಲ್ಲಿನ ಪ್ರತಿಭೆಗೆ ತಕ್ಕಂತೆ ಉತ್ತಮವಾಗಿ ಆಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲವು ಸುಲಭವಾಗಬಹುದು.
ಆದರೆ, ಆರ್ಸಿಬಿಯ ಒಂದೇ ಒಂದು ಕೊರತೆಯೆಂದರೆ ಅದು ಬೌಲಿಂಗ್ನದ್ದು. ರವಿ ರಾಮ್ಪಾಲ್, ಮುರಳಿ ಕಾರ್ತಿಕ್ ಹಾಗೂ ವಿನಯ್ ಕುಮಾರ್ ಅವರು ಪರವಾಗಿಲ್ಲ ಎಂಬಂಥಾ ಪ್ರದರ್ಶನ ಮಾತ್ರ ನೀಡಿದ್ದಾರೆ. ಆದರೆ, ಜಯದೇವ್ ಉನಾದ್ಕತ್, ಮುತ್ತಯ್ಯ ಮುರಳೀಧರನ್ ಹಾಗೂ ಅಭಿಮನ್ಯು ಮಿಥುನ್ ಮಾತ್ರ ದುಬಾರಿಯೆನಿಸಿದ್ದಾರೆ.
ವೇಗಿ ಜಹೀರ್ ಖಾನ್ ಅವರು ತಂಡಕ್ಕೆ ವಾಪಸ್ಸಾಗಿದ್ದಾರೆ. ಕಳೆದ ಪಂದ್ಯದಲ್ಲಿ ತುಸು ಹೆಚ್ಚೇ ರನ್ ನೀಡಿದ್ದರೂ, ಅವರು ಶಾನ್ ಮಾರ್ಷ್ ಅವರ ವಿಕೆಟ್ ಪಡೆದಿದ್ದರು. ಹಿಂದಿನ ಪಂದ್ಯಗಳಲ್ಲಿ ಅದೇನೇ ಸಾಧನೆ ಮಾಡಿದ್ದರೂ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಇವರೆಲ್ಲರಿಗೂ ಅನಿವಾರ್ಯ.
ಅತ್ತ, ಚೆನ್ನೈ ತಂಡ ಬ್ಯಾಟಿಂಗ್, ಬೌಲಿಂಗ್ -ಎರಡರಲ್ಲೂ ತನ್ನ ಛಾತಿ ತೋರಿದೆ. ನಾಯಕ ಧೋನಿ ಸೇರಿದಂತೆ, ಮಿಚೆಲ್ ಹಸ್ಸಿ, ಸುರೇಶ್ ರೈನಾ ಅವರು ಬ್ಯಾಟಿಂಗ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದರೆ, 24 ವಿಕೆಟ್ಗಳನ್ನು ಪಡೆದು ಪರ್ಪಲ್ ಕ್ಯಾಪ್ ಹೊಂದಿರುವ ಡ್ವೈನ್ ಬ್ರಾವೊ, ಮೋಹಿತ್ ಶರ್ಮಾ ಬೌಲಿಂಗ್ನ ಪ್ರಮುಖ ಅಸ್ತ್ರಗಳು. ಇವರೊಂದಿಗೆ, ಅಲ್ಬಿ ಮಾರ್ಕೆಲ್, ರವಿಚಂದ್ರನ್ ಅಶ್ವಿನ್, ಕ್ರಿಸ್ ಮೊರಿಸ್ ಅವರೂ ತಂಡದ ಪ್ರಬಲರು. ಚೆನ್ನೈ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಇರಾದೆ ಇಲ್ಲದಿದ್ದರೂ, ಪ್ರತಿಷ್ಠೆಗಾಗಿ ಈ ಪಂದ್ಯವನ್ನು ಅದು ಗೆಲ್ಲಬೇಕಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


